ETV Bharat / bharat

ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಆತ್ಮಹತ್ಯೆ.. ಪತಿ ಮನೆ ಎದುರೇ ಶವದ ಅಂತ್ಯಕ್ರಿಯೆ ಮಾಡಿ ಪೋಷಕರ ಆಕ್ರೋಶ

author img

By

Published : Jul 20, 2023, 12:36 PM IST

4 ತಿಂಗಳ ಹಿಂದೆ ಮದುವೆಯಾಗಿದ್ದರೂ ನವವಿವಾಹಿತೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದೆ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಪಿತಗೊಂಡ ಪೋಷಕರು ಮಗಳ ಶವವನ್ನು ಗಂಡನ ಮನೆ ಎದುರೇ ಅಂತ್ಯಕ್ರಿಯೆ ಮಾಡಿದ್ದಾರೆ.

ಪತಿ ಮನೆ ಎದುರೇ ಶವ ಸುಟ್ಟು ಹಾಕಿ ಪೋಷಕರ ಆಕ್ರೋಶ
ಪತಿ ಮನೆ ಎದುರೇ ಶವ ಸುಟ್ಟು ಹಾಕಿ ಪೋಷಕರ ಆಕ್ರೋಶ

ಗೋಪಾಲಗಂಜ್ (ಉತ್ತರ ಪ್ರದೇಶ): ವರದಕ್ಷಿಣೆ ಕಿರುಕುಳಕ್ಕೆ ಮಹಿಳೆಯರು ಬಲಿಯಾಗುತ್ತಿದ್ದು, ಇದು ಸಮಾಜದ ಪಿಡುಗಾಗಿ ಕಾಡುತ್ತಿದೆ. ಬಿಹಾರದಲ್ಲಿ 4 ತಿಂಗಳ ಹಿಂದಷ್ಟೇ ವಿವಾಹವಾದ ಮಹಿಳೆ ವರದಕ್ಷಿಣೆಗಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಸಿಟ್ಟಿಗೆದ್ದ ಆಕೆಯ ಪೋಷಕರು, ಮಗಳ ಶವವನ್ನು ಪತಿಯ ಕುಟುಂಬದೆ ಎದುರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಗೋಪಾಲ್‌ಗಂಜ್‌ನ ನಿವಾಸಿಯಾಗಿದ್ದ ಮಹಿಳೆ, ಬರೀ ನಾಲ್ಕು ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದರು. ಸುಖಜೀವನ ನಡೆಸಬೇಕಾಗಿದ್ದ ದಂಪತಿ ಮಧ್ಯೆ ವಿರಸ ಉಂಟಾಗಿದೆ. ವರದಕ್ಷಿಣೆಗಾಗಿ ಗಂಡ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡಲು ಶುರು ಮಾಡಿದ್ದಾರೆ. ಈ ಕಾರಣಕ್ಕಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡ ಆರೋಪವನ್ನು ಮೃತಳ ಪೋಷಕರು ಮಾಡಿದ್ದಾರೆ. ಮಗಳು ಸಾವಿಗೀಡಾದ ಸುದ್ದಿ ಕೇಳಿ, ಕ್ರುದ್ಧಗೊಂಡ ಪೋಷಕರು ಬೀಗರ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಶವಕ್ಕೆ ಪತಿಯ ಮನೆಯ ಮುಂದೆಯೇ ಬೆಂಕಿ ಹಚ್ಚಿದ್ದಾರೆ.

ಗೋಪಾಲ್​ಗಂಜ್​ ಜಿಲ್ಲೆಯ ಸಾವ್ನಾ ಗ್ರಾಮದ ನಿವಾಸಿ ಶಂಭು ಶರಣ್ ಪ್ರಸಾದ್ ಅವರು ತಮ್ಮ ಏಕೈಕ ಪುತ್ರಿ ನಿಶಾ ಕುಮಾರಿಯನ್ನು ಅಲಾಪುರ ಗ್ರಾಮದ ನಿವಾಸಿ ಮುಖೇಶ್ ಕುಮಾರ್ ಅವರೊಂದಿಗೆ ಫೆಬ್ರವರಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಕಂಡ ಎಲ್ಲ ಕನಸುಗಳು ನುಚ್ಚು ನೂರಾಗಿವೆ. ಗಂಡನ ಮನೆಯಲ್ಲಿ ಸುಖಜೀವನ ನಡೆಸಬೇಕಾದ ಮಗಳು, ಶವವಾಗುತ್ತಾಳೆ ಎಂದು ಪೋಷಕರು ಊಹಿಸಿರಲಿಲ್ಲ.

10 ಲಕ್ಷ ರೂ., ಕಾರಿಗಾಗಿ ಬೇಡಿಕೆ: ಮದುವೆಯ ನಂತರ ಪತಿ, ಅತ್ತೆ, ಮಾವ ಮತ್ತು ಕುಟುಂಬಸ್ಥರು ನವವಿವಾಹಿತೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಶುರು ಮಾಡಿದ್ದಾರೆ. 10 ಲಕ್ಷ ರೂಪಾಯಿ ಮತ್ತು ಕಾರು ತರುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ, ಪತಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದು ತನ್ನ ಮಗಳಿಗೆ ಗೊತ್ತಾಗಿ ಪ್ರತಿಭಟಿಸಿದಳು. ಇದು ಅವರಿಗೆ ಸಹಿಸಲಾಗಲಿಲ್ಲ. ಹೀಗಾಗಿ ಮಗಳನ್ನು ಹಿಂಸಿಸಲು ಆರಂಭಿಸಿದರು ಎಂದು ಮೃತ ಮಹಿಳೆಯ ತಂದೆ ಆರೋಪಿಸಿದ್ದಾರೆ.

ಗಂಡನ ಮನೆಯವರ ಕಿರುಕುಳದ ಬಗ್ಗೆ ಮಗಳು ನಮಗೆ ತಿಳಿಸಿದ್ದಳು. ಆದರೆ, ನಾವೇ ಹಲವು ಬಾರಿ ಸಮಾಧಾನ ಪಡಿಸುತ್ತಿದ್ದೆವು. ಆದರೀಗ ಮಗಳನ್ನೇ ಕೊಂದು ಹಾಕಿದ್ದಾರೆ. ಗಂಡನ ಚುಚ್ಚು ಮಾತುಗಳಿಂದ ನೊಂದು ಆಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ನೆರೆಹೊರೆಯವರು ಕರೆ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ. ಇಲ್ಲಿಗೆ ಬಂದು ನೋಡಿದಾಗ ಕೋಣೆಯಲ್ಲಿ ಶವ ಇತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬರುವ ಮೊದಲು ಗಂಡನ ಮನೆಯವರು ತಪ್ಪಿಸಿಕೊಂಡು ಓಡಿ ಹೋದರು ಎಂದು ಅವರು ದೂರಿದರು.

ಮಗಳ ಸಾವಿಗೆ ಗಂಡ, ಅತ್ತೆ ಕುಟುಂಬಸ್ಥರು ಕಾರಣ. ಮಗಳನ್ನು ಹಣಕ್ಕಾಗಿ ಸಾಯಿಸುತ್ತಾರೆ ಎಂದು ಭಾವಿಸಿರಲಿಲ್ಲ. ಕೇವಲ 4 ತಿಂಗಳಲ್ಲೇ ಇದ್ದೊಬ್ಬ ಮಗಳು ಶವವಾಗಿದ್ದಾಳೆ ಎಂದು ಹೆತ್ತಪ್ಪ ಕಣ್ಣೀರು ಹಾಕಿದರು.

ಮೃತದೇಹ ಸುಟ್ಟು ಕರಕಲಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ: ಜೈಲಲ್ಲಿರುವ ಮಾಸ್ಟರ್‌ಮೈಂಡ್ ನಜೀರ್‌ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.