ETV Bharat / bharat

ದೋಸೆ ಜೊತೆಗೆ ಸಾಂಬಾರ್​ ನೀಡದ ರೆಸ್ಟೋರೆಂಟ್​​ಗೆ 3,500 ರೂಪಾಯಿ ದಂಡ!

author img

By

Published : Jul 13, 2023, 1:21 PM IST

ಸಾಂಬಾರು ಇಲ್ಲದೆ ದೋಸೆ ತಿನ್ನುವುದು ಹೇಗೆ? ದೋಸೆ ತಿನ್ನಲು ಸಾಂಬಾರು ಬೇಕೇ ಬೇಕು ಎಂದು ಗ್ರಾಹಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.

consumer-court-imposed-3-dot-500-fine-to-restaurant-for-not-serving-sambar-with-dosa
consumer-court-imposed-3-dot-500-fine-to-restaurant-for-not-serving-sambar-with-dosa

ಪಟ್ನಾ: ದಕ್ಷಿಣ ಭಾರತೀಯರ ನೆಚ್ಚಿನ ತಿನಿಸಾಗಿರುವ ದೋಸೆ ಇದೀಗ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಸಾಮಾನ್ಯ ದೋಸೆಯಿಂದ ಹಿಡಿದು ವಿಧ, ವಿಧವಾದ ದೋಸೆಗಳೀಗ ಮಾರುಕಟ್ಟೆಯಲ್ಲಿ ಲಭ್ಯ. ಇಂತಹ ಅಪಾರ ಜನಮನ್ನಣೆ ಗಳಿಸಿರುವ ದೋಸೆಯಿಂದಾಗಿ ಬಿಹಾರದ ಬಕ್ಸಾರ್​​ನ ರೆಸ್ಟೋರೆಂಟ್​ವೊಂದು ಇದೀಗ ಸುದ್ದಿಯಾಗಿದೆ. ಇದಕ್ಕೆ ಕಾರಣ ಇವರು ಮಾಡುವ ರುಚಿಕರ ದೋಸೆಯಲ್ಲ. ಬದಲಾಗಿ, ದೋಸೆ ಸವಿಯಲು ಸಾಂಬಾರ್​ ನೀಡದೇ ಇರುವುದು.

ಅಚ್ಚರಿಯಾದರೂ ಹೌದು. ಗ್ರಾಹಕನಿಗೆ ಪ್ಲೇಟ್‌ನಲ್ಲಿ ದೋಸೆ ನೀಡಿದ ರೆಸ್ಟೋರೆಂಟ್​ ಸಾಂಬಾರ್​​ ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಹಕ, ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. 11 ತಿಂಗಳ ಕಾನೂನು ಹೋರಾಟದ ಬಳಿಕ ಇದೀಗ ಅವರಿಗೆ ಗೆಲುವು ಸಿಕ್ಕಿದೆ. ಆಯೋಗವು ರೆಸ್ಟೋರೆಂಟ್​​ಗೆ 3,500 ರೂಪಾಯಿ ದಂಡದ ಬರೆ ಎಳೆದಿದೆ.

ಘಟನೆಯ ಸಂಪೂರ್ಣ ವಿವರ : ಮನೀಶ್​ ಪಟ್ನಾಕ್​ ಎಂಬ ವಕೀಲರಾಗಿರುವ ಗ್ರಾಹಕರು ಈ ವ್ಯಾಜ್ಯ ಗೆದ್ದಿದ್ದಾರೆ. ಆಗಸ್ಟ್​​ 15, 2022ರಂದು ತನ್ನ ಹುಟ್ಟುಹಬ್ಬದ ದಿನ ತಾಯಿಯೊಡನೆ ಹೊರಗೆ ರಾತ್ರಿ ಊಟಕ್ಕೆ ತೆರಳಿದ್ದರು. ಗೋಲ್​ ಮಾರ್ಕೆಟ್​​ನಲ್ಲಿರುವ ರೆಸ್ಟೋರೆಂಟ್​​ಗೆ ಹೋಗಿ ಸ್ಪೆಷಲ್​ ಮಸಾಲ ದೋಸೆ ಆರ್ಡರ್​ ಮಾಡಿದ್ದಾರೆ. 140 ರೂ ನೀಡಿ ದೋಸೆ ಪಾರ್ಸೆಲ್​ ತೆಗೆದುಕೊಂಡು ಮನೆಗೆ ಹೋಗಿದ್ದರು. ಮನೆಗೆ ಹೋಗಿ ನೋಡಿದಾಗ ಸಂಬಾರ್​ ಬದಲಾಗಿ ಹೋಟೆಲ್‌ನವರು ಸಾಸ್​ ನೀಡಿದ್ದರು. ದೋಸೆ ತಿನ್ನಲು ಸಾಂಬರ್​ ಬೇಕೇ ಬೇಕು. ಅಂದು ರಾತ್ರಿಯಾದ ಕಾರಣ ಮರುದಿನ ಹೋಗಿ ಈ ಕುರಿತು ರೆಸ್ಟೋರೆಂಟ್​ ಮಾಲೀಕರಿಗೆ ಪ್ರಶ್ನಿಸಿ, ದೂರು ನೀಡಿದ್ದರು.

ಈ ಸಂದರ್ಭದಲ್ಲಿ ಮಾಲೀಕ 140 ರೂ.ಗೆ ಇಡೀ ರೆಸ್ಟೋರೆಂಟ್​ ಕೊಳ್ಳಲು ಸಾಧ್ಯವಿಲ್ಲ ಎಂದು ಉಡಾಫೆ ಮಾತನಾಡಿ ದೂರಿಗೆ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಗ್ರಾಹಕರ ನಂಬಿಕೆ ಮೋಸಗೊಳಿಸಿದ ಆರೋಪದ ಮೇಲೆ ಗ್ರಾಹಕ ಆಯೋಗಕ್ಕೆ ಅವರು ದೂರು ನೀಡಿದ್ದರು. ಪ್ರಕರಣ ಆಲಿಸಿದ ವೇದ್​ ಪ್ರಕಾಶ್​ ಸಿಂಗ್​ ಮತ್ತು ವರುಣ್​ ಕುಮಾರ್​ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಗ್ರಾಹಕರ ವಾದ ಸರಿಯಾಗಿದೆ. ರೆಸ್ಟೋರೆಂಟ್​ ಗ್ರಾಹಕರಿಗೆ ಸರಿಯಾದ ಸೇವೆ ನೀಡಿಲ್ಲ. ಈ ಉದ್ದೇಶದಿಂದ ಗ್ರಾಹಕರಿಗೆ ಮಾನಸಿಕ ಮತ್ತು ದೈಹಿಕ ಒತ್ತಡ ನೀಡಿದ ಕಾರಣಕ್ಕೆ ರೆಸ್ಟೋರೆಂಟ್​​ಗೆ 2,000 ರೂಪಾಯಿ ಹಾಗೂ ಕಚೇರಿ ಅಲೆದಾಟಕ್ಕೆ 1,500 ರೂ ನಂತೆ ದಂಡ ವಿಧಿಸಿದೆ.

ಪ್ರಕರಣ ಗೆದ್ದಿರುವ ಕುರಿತು ಪ್ರತಿಕ್ರಿಯಿಸಿರುವ ಗ್ರಾಹಕ, "ನ್ಯಾಯಾಲಯ ನನ್ನ ಪರವಾಗಿ ತೀರ್ಪು ನೀಡಿದ್ದು ಖುಷಿ ನೀಡಿದೆ" ಎಂದರು.

1 ರೂ ಚಿಲ್ಲರೆ ನೀಡದ ಕಾರಣಕ್ಕೆ ₹3 ಸಾವಿರ ದಂಡ: ಬೆಂಗಳೂರಿನಲ್ಲಿ ಕೂಡ ಬಿಎಂಟಿಸಿ ಪ್ರಯಾಣಿಕರೊಬ್ಬರು ಗ್ರಾಹಕ ನ್ಯಾಯಮಂಡಳಿಯ ಮೊರೆ ಹೋಗಿ ಪ್ರಕರಣ ಇತ್ತೀಚೆಗೆ ಸುದ್ದಿಯಾಗಿತ್ತು. ತುಮಕೂರು ನಿವಾಸಿ ರಮೇಶ್​ ನಾಯ್ಕ್​ ಎಲ್​ ಎಂಬವರು ದಾವೆ ಹೂಡಿದ್ದರು. ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್​ಗೆ ಪ್ರಯಾಣಿಸುತ್ತಿದ್ದ ಇವರಿಗೆ ಕಂಡಕ್ಟರ್​​ 1 ರೂಪಾಯಿ ಚಿಲ್ಲರೆ ನೀಡಿರಲಿಲ್ಲ. ಈ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ ಅವರು ಮೂರು ವರ್ಷದ ಕಾನೂನು ಹೋರಾಟ ಜಯಿಸಿದ್ದರು. ಕೋರ್ಟ್‌ ಬಿಎಂಟಿಸಿಗೆ 3 ಸಾವಿರ ರೂಪಾಯಿ ದಂಡ ಹಾಕಿತ್ತು.

ಇದನ್ನೂ ಓದಿ: ಗ್ರಾಹಕರಿಗೆ ರಿಲೀಫ್... ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸಲು ನಾಫೆಡ್, ಎನ್‌ಸಿಸಿಎಫ್‌ಗೆ ಕೇಂದ್ರದ ಸೂಚನೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.