ETV Bharat / bharat

ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್​

author img

By

Published : Mar 17, 2023, 4:25 PM IST

ಕಾಂಗ್ರೆಸ್​ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯಸಭೆಯಲ್ಲಿ ಕೆಸಿ ವೇಣುಗೋಪಾಲ್​ ಹಕ್ಕುಚ್ಯುತಿ ನಿಲುವಳಿ ಸೂಚನೆ ಮಂಡಿಸಿದ್ದಾರೆ.

congress-moves-privilege-motion-against-narendra-modi-in-parliament
ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯ ಕಾಂಗ್ರೆಸ್​ ಸದಸ್ಯ ಕೆಸಿ ವೇಣುಗೋಪಾಲ್​ ಹಕ್ಕುಚ್ಯುತಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ್ದಾರೆ. ಕಾಂಗ್ರೆಸ್​ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಅವಹೇಳನಕಾರಿ, ಅವಮಾನಕರ, ಅಸಹ್ಯಕರ ಹಾಗೂ ಮಾನಹಾನಿಕರ ಟೀಕೆಗಳ ಮಾಡಿದ ಆರೋಪದ ಮೇಲೆ ರಾಜ್ಯಸಭೆಯಲ್ಲಿ ವೇಣುಗೋಪಾಲ್​ ಈ ನಿಲುವಳಿ ಸೂಚನೆ ಮಂಡಿಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಫೆಬ್ರವರಿ 9ರಂದು ರಾಜ್ಯಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಗಾಂಧಿ ಕುಟುಂಬದ ಸದಸ್ಯರ ಗುರಿಯಾಗಿಸಿಕೊಂಡು ನೆಹರೂ ಉಪನಾಮ ಬಳಸುವ ಬಗ್ಗೆ ಭಯಪಡುತ್ತಾರೆ. ಇದರಲ್ಲಿ ನಾಚಿಕೆಪಡಲು ಏನಿದೆ ಎಂದು ಟೀಕಿಸಿದ್ದರು. ಮೋದಿ ಅವರ ಈ ಹೇಳಿಕೆ ಕುರಿತಾಗಿ ರಾಜ್ಯಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ನಿಯಮ 188ರ ಅಡಿ ಕಾಂಗ್ರೆಸ್​ ಸದಸ್ಯ ವೇಣುಗೋಪಾಲ್ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಅದಾನಿ, ರಾಹುಲ್​ ಹೇಳಿಕೆ ಗದ್ದಲ: ಅಧಿವೇಶನ ಮತ್ತೆ ಮುಂದೂಡಿಕೆ; ಕಾಂಗ್ರೆಸ್​ ಪ್ರತಿಭಟನೆ

"ಪ್ರಧಾನಿ ನೀಡಿದ ಹೇಳಿಕೆ ಮೇಲ್ನೋಟಕ್ಕೆ ಅಣಕಿಸುವ ರೀತಿಯಲ್ಲಿ ಮಾಡಿದ ಟೀಕೆಗಳು ಮಾತ್ರವಲ್ಲ, ನೆಹರೂ ಕುಟುಂಬ ಸದಸ್ಯರಿಗೆ ವಿಶೇಷವಾಗಿ ಲೋಕಸಭೆಯ ಸದಸ್ಯರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಮಾಡಿದ ಅವಹೇಳನಕಾರಿ, ಅವಮಾನಕರ ಮತ್ತು ಮಾನಹಾನಿಯಾಗಿದೆ'' ಎಂದು ವೇಣುಗೋಪಾಲ್,​ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ಸಲ್ಲಿಸಿರುವ ನಿಲುವಳಿ ಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ.

''ತಂದೆಯ ಉಪನಾಮವನ್ನು ಮಗಳು ತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿಗೆ ಚೆನ್ನಾಗಿ ತಿಳಿದಿದೆ. ಅದು ಗೊತ್ತಿದ್ದರೂ ಪ್ರಧಾನಿ ಉದ್ದೇಶಪೂರ್ವಕವಾಗಿ ಅಪಹಾಸ್ಯ ಮಾಡಿದ್ದಾರೆ. ಅವರ ಟೀಕೆಯ ದಾಟಿ ಅವಹೇಳನಕಾರಿ ಸ್ವಭಾವದಿಂದ ಕೂಡಿದೆ. ಇದು ಸ್ಪಷ್ಟವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಪ್ರತಿಬಿಂಬಿಸುತ್ತದೆ. ಇದು ಹಕ್ಕುಚ್ಯುತಿ ಉಲ್ಲಂಘನೆಯಾಗಿದ್ದು, ಸದನದ ತಿರಸ್ಕಾರಕ್ಕೆ ಸಮನವಾಗಿದೆ. ಆದ್ದರಿಂದ ಹಕ್ಕುಚ್ಯುತಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು'' ಎಂದು ಅವರು ಕೋರಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?: ಸಂಸತ್ತಿನ ಬಜೆಟ್​ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಫೆಬ್ರವರಿ 9ರಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್​ ಮತ್ತು ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು. "ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರು ಮತ್ತು ಸಂಸ್ಕೃತ ಪದಗಳ ಹೆಸರುಗಳಲ್ಲಿ ಸಮಸ್ಯೆಗಳಿವೆ. 600 ಸರ್ಕಾರಿ ಯೋಜನೆಗಳು ಗಾಂಧಿ - ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂಬ ನಾನು ವರದಿಯೊಂದನ್ನು ಓದಿದ್ದೇನೆ'' ಎಂದು ಮೋದಿ ಹೇಳಿದ್ದರು.

ಮುಂದುವರೆದು ಕಾಂಗ್ರೆಸ್​ ಅನ್ನೇ ಗುರಿಯಾಗಿಸಿಕೊಂಡು ಮೋದಿ, ''ನಾವು ಯಾವುದೇ ಕಾರ್ಯಕ್ರಮದಲ್ಲಿ ನೆಹರೂ ಅವರ ಹೆಸರನ್ನು ಹೇಳದಿದ್ದರೆ ನೆಹರೂ ಹೆಸರನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂದು ಕೋಪಗೊಳ್ಳುತ್ತಾರೆ. ಆದರೆ, ಅವರ ತಲೆಮಾರಿನವರು ನೆಹರೂ ಎಂದು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ಭಯ ಮತ್ತು ನಾಚಿಕೆ ಯಾಕೆ?" ಎಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ದೇಶದ ಶಾಶ್ವತ ಸಮಸ್ಯೆಗಳಿಗೆ ಕಾಂಗ್ರೆಸ್‌ ಎಂದಿಗೂ ಪರಿಹಾರ ಹುಡುಕಲಿಲ್ಲ: ರಾಜ್ಯಸಭೆಯಲ್ಲಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.