ETV Bharat / bharat

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!

author img

By

Published : Mar 24, 2023, 2:34 PM IST

Updated : Mar 24, 2023, 3:30 PM IST

ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಅವರನ್ನು ಸೂರತ್​ನ ಜಿಲ್ಲಾ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ನಿನ್ನೆ ಶಿಕ್ಷೆಯನ್ನೂ ವಿಧಿಸಿತ್ತು. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು.

Rahul Gandhi
ರಾಹುಲ್​ ಗಾಂಧಿ

ನವದೆಹಲಿ: ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್​ನ ಜಿಲ್ಲಾ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಇಂದು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇಂದು ಬೆಳಗ್ಗೆ ಲೋಕಸಭೆ ಅಧಿವೇಶನಕ್ಕೆ ಹಾಜರಾದ ಕೆಲವೇ ಗಂಟೆಗಳಲ್ಲಿ ವಯನಾಡ್ ಸಂಸದ ರಾಹುಲ್​ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಸೆಕ್ರೆಟರಿ ಜನರಲ್​ ಉತ್ಪಲ್​ ಕುಮಾರ್​ ಸಿಂಗ್​ ಅವರು ಸಹಿ ಮಾಡಿದ ಲೋಕಸಭಾ ಅಧಿಸೂಚನೆಯಲ್ಲಿ, ಸಂವಿಧಾನದ 102 (1) (ಇ) ನಿಯಮಗಳ ಪ್ರಕಾರ ಹಾಗೂ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ವಿಭಾಗ 8ರ ಅಡಿಯಲ್ಲಿ ರಾಹುಲ್​ ಗಾಂಧಿ ಅವರ ಮೇಲೆ ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಥಾನದಿಂದ ಅನರ್ಹಗೊಂಡವರಲ್ಲಿ ರಾಹುಲ್​ ಗಾಂಧಿ ಅವರು ಎರಡನೇ ಸಂಸದರಾಗಿದ್ದಾರೆ.

2019ರ ಏಪ್ರಿಲ್​ 13ರಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದ ಕೋಲಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ವೇಳೆ ರಾಹುಲ್​ ಗಾಂಧಿ ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೀರವ್​ ಮೋದಿ, ಲಲಿತ್​ ಮೋದಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮಗಳನ್ನು ಹೋಲಿಕೆ ಮಾಡಿ ಹೇಳಿಕೆ ನೀಡಿದ್ದರು. 'ನೀರವ್​ ಮೋದಿ, ಲಲಿತ್​ ಮೋದಿ, ನರೇಂದ್ರ ಮೋದಿ.. ಇವರೆಲ್ಲರಿಗೂ ಮೋದಿ ಎಂಬ ಉಪನಾಮ ಇರುವುದು ಹೇಗೆ?. ಎಲ್ಲಾ ಕಳ್ಳರು ಮೋದಿ ಉಪನಾಮ ಹೊಂದಿರುವುದು ಹೇಗೆ?' ಎಂದು ಹೇಳಿದ್ದರು.

ರಾಹುಲ್​ ಗಾಂಧಿ ಅವರ ಹೇಳಿಕೆ ಮಾನಹಾನಿಕಾರಕವಾಗಿದ್ದು, ಮೋದಿ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಅವರು ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಈ ಆರೋಪವನ್ನು ನಿರಾಕರಿಸಿದ್ದ ರಾಹುಲ್​ ಗಾಂಧಿ, ತಮ್ಮ ವಾಕ್​ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸಿದ್ದರು. ಆದರೂ ವಾದ ವಿವಾದಗಳನ್ನು ಆಲಿಸಿದ ಸೂರತ್​ನ ಜಿಲ್ಲಾ ನ್ಯಾಯಾಲಯ ನಿನ್ನೆ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್​ ದೋಷಿ ಎಂದು 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅದರ ಜೊತೆಗೆ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಗಡುವು ನೀಡಿ, 10,000 ಬಾಂಡ್​ ಮೇಲೆ 30 ದಿನಗಳಿಗೆ ಜಾಮೀನು ಕೂಡ ಮಂಜೂರು ಮಾಡಿದೆ.

ರಾಹುಲ್​ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದರ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ. ಇಲ್ಲಿಂದ ಕಾರ್ಯತಂತ್ರವನ್ನು ಪಕ್ಷದೊಳಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಟ್ವೀಟ್​ ಮಾಡಿದ್ದು, ಕೋರ್ಟ್​ ತೀರ್ಪು ನೀಡಿದ 24 ಗಂಟೆಗಳ ಒಳಗೆ ತಕ್ಷಣ ಕ್ರಮ ಕೈಗೊಂಡಿರುವುದು ಮತ್ತು ಮೇಲ್ಮನವಿ ಸಲ್ಲಿಸಲು ಅವಧಿ ನೀಡಿರುವ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಕ್ರಮ ಕೈಗೊಂಡಿರುವ ಬಗ್ಗೆ ನಾನು ದಿಗ್ಭ್ರಮೆಗೊಂಡಿದ್ದೇನೆ. ಇದು ನಿರ್ದಯ ರಾಜಕೀಯ ಬೆಳವಣಿಗೆ ಹಾಗೂ ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದನ್ನು ಸೂಚಿತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ: ರಾಹುಲ್​ ಸಂಸತ್​ ಸದಸ್ಯತ್ವಕ್ಕೆ ತೂಗುಗತ್ತಿಯೇ?

Last Updated : Mar 24, 2023, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.