ETV Bharat / bharat

ಲಖೀಂಪುರ ಖೇರಿ ಪ್ರಕರಣ: ನಾಳೆ ರಾಷ್ಟ್ರಪತಿ ಕೋವಿಂದ್ ಭೇಟಿ ಮಾಡಲಿರುವ ಕಾಂಗ್ರೆಸ್​ ನಿಯೋಗ

author img

By

Published : Oct 12, 2021, 7:05 PM IST

ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಿಯೋಗ ನಾಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.

congress delegation will meet president of india
ರಾಷ್ಟ್ರಪತಿ ಕೋವಿಂದ್​​ರನ್ನು ಭೇಟಿ ಮಾಡಲಿರುವ ಕಾಂಗ್ರೆಸ್​ ನಿಯೋಗ

ನವದೆಹಲಿ: ಉತ್ತರಪ್ರದೇಶದ ಲಖೀಂಪುರ ಖೇರಿ ರೈತರ ಹತ್ಯೆ, ಹಿಂಸಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಿಯೋಗ ನಾಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ, ಎ.ಕೆ. ಆಂಟನಿ, ಗುಲಾಂ ನಬಿ ಆಜಾದ್, ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್​ ನಾಯಕರ ನಿಯೋಗ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ. ಆದರೆ, ಅಧ್ಯಕ್ಷರ ಕಚೇರಿಯು ಕೇವಲ ಐದು ಸದಸ್ಯರಿಗೆ ಮಾತ್ರ ಭೇಟಿ ನೀಡಲು ಅನುಮತಿ ನೀಡಿದೆ ಎಂಬ ಮಾಹಿತಿಯಿದೆ.

ಘಟನೆಗೆ ಸಂಬಂಧಿಸಿದ ಸತ್ಯಾಂಶಗಳ ಜ್ಞಾಪನಾ ಪತ್ರವನ್ನು ಕಾಂಗ್ರೆಸ್​​ ಸಲ್ಲಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಲಖೀಂಪುರ ಖೇರಿ ಘಟನೆಯ ಕುರಿತು ಸತ್ಯಾಂಶಗಳ ಜ್ಞಾಪನಾ ಪತ್ರವನ್ನು ಸಲ್ಲಿಸಲು ಕಾಂಗ್ರೆಸ್ ರಾಷ್ಟ್ರಪತಿಯಿಂದ ಅವಕಾಶ ಕೋರಿತ್ತು.

ಅಕ್ಟೋಬರ್ 9, 2021 ರಂದು ರಾಷ್ಟ್ರಪತಿಗಳ ಕಚೇರಿಗೆ ಬರೆದ ಪತ್ರದಲ್ಲಿ ಕೆಸಿ ವೇಣುಗೋಪಾಲ್, ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಹತ್ಯಾಕಾಂಡದ ಆಘಾತಕಾರಿ ಘಟನೆಯು ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆಲ್ಲ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಕುಟುಂಬಸ್ಥರು ಕಾರಣ ಎಂದು ಆರೋಪಿಸಿದ್ದರು.

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ:

ರೈತರ ಹತ್ಯೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಅವರನ್ನು ಶನಿವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.

ಲಖಿಂಪುರ ಖೇರಿ ಘಟನೆ:

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.

ಈ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಪ್ರತಿಭಟನಾನಿರತ ರೈತರ ಮೇಲೆ ತನ್ನ ಕಾರು ಚಲಾಯಿಸಿರುವ ಆರೋಪ ಕೇಳಿ ಬಂದಿದೆ. ಪರಿಣಾಮ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ವೇಳೆ, ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.