ETV Bharat / bharat

ಹೈಕೋರ್ಟ್​ ನ್ಯಾಯಾಧೀಶರನ್ನಾಗಿ ನೇಮಿಸಲು ಕೊಲಿಜಿಯಂನಿಂದ 18 ಜನರ ಹೆಸರು ಶಿಫಾರಸು

author img

By ETV Bharat Karnataka Team

Published : Oct 11, 2023, 8:03 PM IST

ದೇಶದ ಹೈಕೋರ್ಟ್​ಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ 18 ಜನರ ಹೆಸರುಗಳನ್ನು ಶಿಫಾರಸು ಮಾಡಿದೆ.

Supreme Court Collegium Recommends 18 Names For Appointment As High Court Judges
Supreme Court Collegium Recommends 18 Names For Appointment As High Court Judges

ನವದೆಹಲಿ: ದೇಶದ ವಿವಿಧ ಹೈಕೋರ್ಟ್​ಗಳಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ 18 ನ್ಯಾಯಾಂಗ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರನ್ನೂ ಒಳಗೊಂಡ ಕೊಲಿಜಿಯಂ ನ್ಯಾಯಾಂಗ ಅಧಿಕಾರಿಗಳಾದ ಶ್ರೀಮತಿ ಶಾಲಿಂದರ್ ಕೌರ್ ಮತ್ತು ರವೀಂದರ್ ದುಡೇಜಾ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.

ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಇಬ್ಬರು ಹಿರಿಯ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಮೇ 30 ರಂದು ನ್ಯಾಯಾಂಗ ಅಧಿಕಾರಿಗಳನ್ನು ಆ ಹೈಕೋರ್ಟ್​ನ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಶಿಫಾರಸು ಮಾಡಿದ್ದಾರೆ ಎಂದು ಕೊಲಿಜಿಯಂ ತಿಳಿಸಿದೆ.

ವೈವಿಧ್ಯತೆ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ನ್ಯಾಯಪೀಠದಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಗಮನಿಸಿದ ಕೊಲಿಜಿಯಂ, ಶ್ರೀಮತಿ ಕೌರ್ ಇತ್ತೀಚೆಗೆ ಸೆಪ್ಟೆಂಬರ್ 30, 2023 ರಂದು ದೆಹಲಿ ಉನ್ನತ ನ್ಯಾಯಾಂಗ ಸೇವೆಯಿಂದ ನಿವೃತ್ತರಾಗಿದ್ದಾರೆ ಎಂಬ ಅಂಶದ ಬಗ್ಗೆ ತಿಳಿದಿದೆ ಎಂದು ಹೇಳಿದೆ.

ಮತ್ತೊಂದು ನಿರ್ಧಾರದಲ್ಲಿ, ಕೊಲಿಜಿಯಂ ಕೇರಳ ಹೈಕೋರ್ಟ್​ನ ನ್ಯಾಯಾಧೀಶರಾಗಿ ನೇಮಕ ಮಾಡಲು ಐದು ನ್ಯಾಯಾಂಗ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಿದೆ. ಎಂ.ಬಿ. ಸ್ನೇಹಲತಾ, ಜಾನ್ಸನ್ ಜಾನ್, ಜಿ. ಗಿರೀಶ್, ಸಿ. ಪ್ರದೀಪ್ ಕುಮಾರ್, ಪಿ. ಕೃಷ್ಣಕುಮಾರ್ ಇವರು ಕೇರಳ ಹೈಕೋರ್ಟ್​ನ ನ್ಯಾಯಾಧೀಶರಾಗಲಿದ್ದಾರೆ.

ಮೂವರು ನ್ಯಾಯಾಂಗ ಅಧಿಕಾರಿಗಳಾದ ಅಭಯ್ ಜೈನಾರಾಯನ್​ ಜಿ ಮಂತ್ರಿ, ಶ್ಯಾಮ್ ಛಗನ್ಲಾಲ್ ಚಂಡಕ್ ಮತ್ತು ನೀರಜ್ ಪ್ರದೀಪ್ ಧೋಟೆ ಅವರನ್ನು ಬಾಂಬೆ ಹೈಕೋರ್ಟ್​ನ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಶಿಫಾರಸು ಮಾಡಿದೆ.

ಇದಲ್ಲದೆ, ನ್ಯಾಯಾಂಗ ಅಧಿಕಾರಿ ವಿಮಲ್ ಕನಯ್ಯಾಲಾಲ್ ವ್ಯಾಸ್ ಅವರನ್ನು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಮತ್ತು ನ್ಯಾಯಾಂಗ ಅಧಿಕಾರಿಗಳಾದ ಬಿಸ್ವಜಿತ್ ಪಾಲಿತ್ ಮತ್ತು ಸಬ್ಯಸಾಚಿ ದತ್ತಾ ಪುರ್ಕಾಯಸ್ಥ ಅವರನ್ನು ತ್ರಿಪುರಾ ಹೈಕೋರ್ಟ್​ನ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ. ವಕೀಲ ರವೀಂದ್ರ ಕುಮಾರ್ ಅಗರ್ವಾಲ್ ಅವರನ್ನು ಛತ್ತೀಸ್ ಗಢ ಹೈಕೋರ್ಟ್​​ನ ನ್ಯಾಯಾಧೀಶರನ್ನಾಗಿ ನೇಮಿಸಲು ಅದು ಶಿಫಾರಸು ಮಾಡಿದೆ.

ವಕೀಲರಾಗಿರುವ ಹರಿನಾಥ್ ನುನೆಪಲ್ಲಿ, ಕಿರಣ್ಮಯಿ ಮಾಂಡವ, ಸುಮತಿ ಜಗದಮ್ ಮತ್ತು ನ್ಯಾಪತಿ ವಿಜಯ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.

ಇದನ್ನೂ ಓದಿ : ಗೂಗಲ್​ ಸೈನ್​ಇನ್​ಗೆ ಕಡ್ಡಾಯವಾಗಲಿದೆ ಪಾಸ್​ ಕೀ.. ಏನಿದು ಹೊಸ ವಿಧಾನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.