ETV Bharat / bharat

ದಾಸ್ತಾನು ಸಾಕಷ್ಟಿದೆ, ಕಲ್ಲಿದ್ದಲು ಕೊರತೆಯಿಂದ ಉಷ್ಣವಿದ್ಯುತ್ ಸ್ಥಾವರ ಮುಚ್ಚಿಲ್ಲ: ಕೇಂದ್ರದ ಸ್ಪಷ್ಟನೆ

author img

By

Published : Jul 18, 2023, 7:57 PM IST

ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದಿಸಲಾಗುತ್ತಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Adequate coal available for thermal plants,
Adequate coal available for thermal plants,

ನವದೆಹಲಿ : ದೇಶಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳ ನಿರಂತರ ಕಾರ್ಯಾಚರಣೆಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ ಎಂದು ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಕಲ್ಲಿದ್ದಲು ಇಂಧನ ಲಭ್ಯತೆಯಿಲ್ಲದ ಕಾರಣ ಯಾವುದೇ ವಿದ್ಯುತ್ ಸ್ಥಾವರವನ್ನು ಮುಚ್ಚಲಾಗಿಲ್ಲ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಕೆಲ ಸ್ಥಾವರಗಳು ಮುಚ್ಚಲ್ಪಟ್ಟಿದ್ದರೂ ಅದು ಕಲ್ಲಿದ್ದಲು ಕೊರತೆ ಕಾರಣದಿಂದ ಅಲ್ಲ ಎಂದು ಕೇಂದ್ರ ತಿಳಿಸಿದೆ.

ಜುಲೈ 16 ರ ಹೊತ್ತಿಗೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಸ್ಟಾಕ್ 33.46 ಮಿಲಿಯನ್ ಟನ್‌ಗಳಷ್ಟಿದೆ, ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ 28 ಶೇಕಡಾ ಹೆಚ್ಚಾಗಿದೆ. ಪಿಟ್‌ಹೆಡ್ ಕಲ್ಲಿದ್ದಲು ದಾಸ್ತಾನು ಸೇರಿದಂತೆ ಎಲ್ಲ ಸ್ಥಳಗಳಲ್ಲಿನ ಗಣಿಗಳಲ್ಲಿ ಕಲ್ಲಿದ್ದಲು ಲಭ್ಯತೆ, ಸಾರಿಗೆಯಲ್ಲಿರುವ ಕಲ್ಲಿದ್ದಲು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಸ್ಟಾಕ್ 103 ಮಿಲಿಯನ್ ಟನ್‌ಗಳಾಗಿದೆ. ಇದು ಕಳೆದ ವರ್ಷ 76.85 ಮಿಲಿಯನ್ ಟನ್‌ಗಳಷ್ಟಿತ್ತು. ಈ ವರ್ಷ ದಾಸ್ತಾನು ಶೇಕಡಾ 34 ರಷ್ಟು ಹೆಚ್ಚಾಗಿದೆ.

ಸಚಿವಾಲಯವು ಎಲ್ಲ ಕೇಂದ್ರ ಉತ್ಪಾದನಾ ಕಂಪನಿಗಳು ಮತ್ತು ರಾಜ್ಯ ಘಟಕಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಮತ್ತು ವಿದ್ಯುತ್ ವಲಯಕ್ಕೆ ಯಾವುದೇ ರೀತಿಯಲ್ಲೂ ಕಲ್ಲಿದ್ದಲಿನ ಕೊರತೆಯಿಲ್ಲ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿದೆ. ಜುಲೈನಲ್ಲಿ ಕಲ್ಲಿದ್ದಲು ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಹೆಚ್ಚಾಗಿದೆ. ವಾಸ್ತವವಾಗಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಮಳೆ ಅಂಥ ಪರಿಣಾಮ ಬೀರಿಲ್ಲ. ಮುಂಗಾರು ಹಂಗಾಮಿಗೆ ಗಣಿವಾರು ಮುಂಗಡ ಯೋಜನೆ ಮೂಲಕ ಇದು ಸಾಧ್ಯವಾಗಿದೆ ಎಂದು ಕಲ್ಲಿದ್ದಲು ಸಚಿವಾಲಯವು ಹೇಳಿದೆ.

ಕಲ್ಲಿದ್ದಲು ಕಂಪನಿಗಳು ದೊಡ್ಡ ಗಣಿಗಳಿಂದ ಇದ್ದಿಲನ್ನು ಅಡೆತಡೆಯಿಲ್ಲದೇ ಸ್ಥಳಾಂತರಿಸಲು ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ಘಟಕಗಳ ಮೂಲಕ ಒಂಬತ್ತು ಕಲ್ಲಿದ್ದಲು ಗಣಿಗಳಿಂದ ರೈಲ್ವೆ ಸೈಡಿಂಗ್‌ಗಳಿಗೆ ಸಾಗಣೆ ಪ್ರಾರಂಭಿಸಲಾಗಿದೆ. ಕಲ್ಲಿದ್ದಲು ಕಂಪನಿಗಳು ಮೇಲಿನ ಸ್ತರಗಳಿಂದ ಕಲ್ಲಿದ್ದಲನ್ನು ಹೊರತೆಗೆಯಲು ಯೋಜಿಸಿವೆ.

ಇದರ ಪರಿಣಾಮವಾಗಿ 2023 ರ ಏಪ್ರಿಲ್ 1 ರಿಂದ ಜುಲೈ 16 ರವರೆಗೆ ಕಲ್ಲಿದ್ದಲು ಉತ್ಪಾದನೆಯು ಕಳೆದ ವರ್ಷ 236.69 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ 258.57 ಮಿಲಿಯನ್ ಟನ್ ಆಗಿದೆ. ಹಾಗೆಯೇ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆ ಕಳೆದ ವರ್ಷ ಇದ್ದ 224 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ ಈ ವರ್ಷ 233 ಮಿಲಿಯನ್ ಟನ್‌ಗಳಷ್ಟಿದೆ.

ವಾಸ್ತವವಾಗಿ ಕಲ್ಲಿದ್ದಲಿನ ಗಣನೀಯ ಲಭ್ಯತೆಯಿಂದಾಗಿ, ಕಲ್ಲಿದ್ದಲು ಕಂಪನಿಗಳು ಈ ಅವಧಿಯಲ್ಲಿ ಅನಿಯಂತ್ರಿತ ವಲಯಕ್ಕೆ ಭಾರಿ ಹೆಚ್ಚುವರಿ ಪ್ರಮಾಣ ದಲ್ಲಿ ಕಲ್ಲಿದ್ದಲು ಪೂರೈಸಿವೆ. ಈ ವರ್ಷ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಲ್ಲಿನ ಬೆಳವಣಿಗೆಯು ಕೇವಲ 2.04 ಪ್ರತಿಶತದಷ್ಟಿದ್ದರೆ, ಕಲ್ಲಿದ್ದಲು ಉತ್ಪಾದನೆಯಲ್ಲಿನ ಬೆಳವಣಿಗೆಯು ಶೇಕಡಾ 9 ಕ್ಕಿಂತ ಹೆಚ್ಚಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ : ಜುಲೈ 19ರಂದು realme C53 ಅರ್ಲಿ ಬರ್ಡ್ ಸೇಲ್; ಸಾವಿರ ರೂಪಾಯಿವರೆಗೆ ರಿಯಾಯಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.