ETV Bharat / bharat

ಭಾಷಣದ ವಿರುದ್ಧ ಸಿಎಂ ಸ್ಟಾಲಿನ್​ ನಿರ್ಣಯ.. ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ

author img

By

Published : Jan 9, 2023, 3:59 PM IST

Updated : Jan 9, 2023, 5:10 PM IST

ತಮಿಳುನಾಡಿನಲ್ಲಿ ರಾಜ್ಯಪಾಲರು ಸರ್ಕಾರದ ಮಧ್ಯೆ ಫೈಟ್​ - ರಾಜ್ಯಪಾಲರ ಭಾಷಣಕ್ಕೆ ಆಕ್ಷೇಪ - ಸರ್ಕಾರ ರೂಪಿಸಿದ ಭಾಷಣ ಓದಲು ನಿರ್ಣಯ - ವಿಧಾನಸಭೆ ಕಲಾಪ ಮಧ್ಯೆ ಹೊರನಡೆದ ರಾಜ್ಯಪಾಲರು

cm stalin resolution against tn governor ravi
ಭಾಷಣಕ್ಕೆ ಸಿಎಂ ಸ್ಟಾಲಿನ್​ ಆಕ್ಷೇಪ

ಚೆನ್ನೈ: ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ಮಧ್ಯೆ ಮುನಿಸು ಮುಂದುವರೆದಿದೆ. ಸರ್ಕಾರ ರೂಪಿಸಿದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದದೇ, ತಿದ್ದುಪಡಿ ಮಾಡಿದ್ದರ ವಿರುದ್ಧ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಅವರು ನಿರ್ಣಯ ಮಂಡಿಸಿದ್ದರು. ಇದರಿಂದ ಕೋಪಗೊಂಡ ರಾಜ್ಯಪಾಲ ಆರ್​ಎನ್​ ರವಿ ಅವರು ವಿಧಾನಸಭೆ ಕಲಾಪದಿಂದ ಹೊರನಡೆದ ಘಟನೆ ಇಂದು ನಡೆದಿದೆ.

ವಿಧಾನಸಭೆಯ ಕಲಾಪ ಇಂದಿನಿಂದ ಆರಂಭವಾಗಿದ್ದು, ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದರಲ್ಲಿ ಅನೇಕ ವಿಷಯಗಳನ್ನು ಅವರು ಓದಿರಲಿಲ್ಲ. ಮುಖ್ಯಮಂತ್ರಿ ಸ್ಟಾಲಿನ್​ ಅವರು ರಾಜ್ಯಪಾಲರ ಭಾಷಣದ ಮೇಲೆ ನಿರ್ಣಯ ಕೈಗೊಂಡರು. ಸರ್ಕಾರ ರೂಪಿಸಿದ ಭಾಷಣವನ್ನು ಮಾತ್ರ ಪೂರ್ಣವಾಗಿ ಓದಬೇಕು. ಅದನ್ನು ಮಾತ್ರ ದಾಖಲಿಸಬೇಕು ಎಂದು ನಿರ್ಣಯ ಅಂಗೀಕರಿಸಿದರು. ಇದರ ಮರುಕ್ಷಣವೇ ರಾಜ್ಯಪಾಲರು ರಾಷ್ಟ್ರಗೀತೆ ಮೊಳಗುವ ಮೊದಲೇ ಅವರ ಸ್ಥಾನದಿಂದ ಎದ್ದು ಹೊರನಡೆದರು.

ಜಾತ್ಯತೀತತೆಯ ಉಲ್ಲೇಖಗಳನ್ನು ಹೊಂದಿರುವ, ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲ ಭಾಗಗಳನ್ನು ರಾಜ್ಯಪಾಲ ರವಿ ಅವರು ಓದಲಿಲ್ಲ. ತಮಿಳುನಾಡು ಶಾಂತಿಯ ಸ್ವರ್ಗ ಎಂದು ಬಣ್ಣಿಸಿದರು. ಪೆರಿಯಾರ್, ಡಾ.ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನೂ ಬಿಟ್ಟಿದ್ದರು. ಇದಲ್ಲದೇ, ಮುಖ್ಯವಾಗಿ 'ದ್ರಾವಿಡ ಮಾದರಿ'ಯನ್ನು ಹೇಳದೇ ಇರುವುದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ವಿರುದ್ಧ ಮುಖ್ಯಮಂತ್ರಿ ನಿರ್ಣಯ ಮಂಡಿಸಿದರು.

ರಾಜ್ಯಪಾಲರ ಕ್ರಮವು ವಿಧಾನಸಭೆ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಸರ್ಕಾರ ರೂಪಿಸಿದ ಭಾಷಣವನ್ನು ರಾಜ್ಯಪಾಲರು ಯಥಾವತ್ತಾಗಿ ಪೂರ್ಣವಾಗಿ ಓದಬೇಕಿತ್ತು. ಅದು ಸಂಪ್ರದಾಯ. ಆದರೆ, ರಾಜ್ಯಪಾಲರು ಕೆಲ ಮಾತುಗಳನ್ನೇ ಬಿಟ್ಟಿದ್ದಾರೆ. ಇದು ಅಸಮಾಧಾನ ತಂದಿದೆ ಎಂದು ನಿರ್ಣಯದಲ್ಲಿ ಎಂಕೆ ಸ್ಟಾಲಿನ್ ಹೇಳಿದರು.

ಇದನ್ನು ಓದಿ:ಕಾಂಗ್ರೆಸ್‌ ಭಾರತ್​​ ಜೋಡೋ ಯಾತ್ರೆಗಿಂದು ಮಹಿಳಾಮಣಿಗಳ ಸಾಥ್‌

ರಾಜ್ಯಪಾಲರ ವಿರುದ್ಧ ಕೂಗು: ರಾಜ್ಯಪಾಲ ರವಿ ಅವರ ವಿರುದ್ಧ ವಿಧಾನಸಭೆಯಲ್ಲಿ ಡಿಎಂಕೆ ಶಾಕಸರು ಘೋಷಣೆ ಕೂಗಿದರು. ತಮಿಳುನಾಡು ಬಿಟ್ಟು ತೊಲಗಿ ಘೋಷಣೆಗಳು ಪ್ರತಿಧ್ವನಿಸಿದವು. ಬಿಜೆಪಿ, ಆರೆಸ್ಸೆಸ್ ಸಿದ್ಧಾಂತವನ್ನು ಇಲ್ಲಿ ಹೇರಬೇಡಿ ಎಂದು ಆಡಳಿತಾರೂಢ ಡಿಎಂಕೆ ಶಾಸಕರು ಒಕ್ಕೊರಲಿನಿಂದ ಹೇಳಿದರು. ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಅವರು ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ಕರೆ ನೀಡಿದರು.

ಬಿಜೆಪಿಯ ಆಶಯದಂತೆ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ ಡಿಎಂಕೆ ಆರೋಪಿಸಿದೆ. ಬಿಜೆಪಿಯ ಎರಡನೇ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕು ಎಂದು ಪಕ್ಷದ ಸಂಸದರೊಬ್ಬರು ಟೀಕಿಸಿದ್ದರು. ಆನ್‌ಲೈನ್ ಜೂಜಾಟ, ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಿಸಲು ರಾಜ್ಯಪಾಲರ ಅಧಿಕಾರ ಕಡಿತ ಮಾಡುವುದು ಮಾಡುವುದು ಸೇರಿದಂತೆ ವಿಧಾನಸಭೆ ಅಂಗೀಕರಿಸಿದ 21 ಮಸೂದೆಗಳು ರಾಜ್ಯಪಾಲರು ಸಹಿ ಹಾಕದೇ ಹಾಗೆಯೇ ಬಾಕಿ ಉಳಿಸಿಕೊಂಡಿದ್ದಾರೆ.

ತಮಿಳುನಾಡು ಪದ ಸರಿಯಿಲ್ಲ: ರಾಜ್ಯಪಾಲ ರವಿ ಅವರು, ಜನವರಿ 4ರಂದು ಚೆನ್ನೈನ ರಾಜಭವನದಲ್ಲಿ ನಡೆದ ಕಾಶಿ ತಮಿಳು ಸಂಗಮದ ಸಂಘಟಕರು ಮತ್ತು ಸ್ವಯಂಸೇವಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ತಮಿಳುನಾಡಿಗೆ ‘ತಮಿಳಗಂ’ ಪದವು ಹೆಚ್ಚು ಸೂಕ್ತವಾಗಿದೆ. ರಾಜ್ಯದ ಹೆಸರನ್ನು ಬದಲಿಸಬೇಕು ಎಂದು ಹೇಳಿಕೆ ನೀಡಿದ್ದರು. ಇದು ಅವರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳುನಾಡು ಹೆಸರು ಸರಿಯಾಗಿಲ್ಲ ಎಂದು ಹೇಳಿರುವುದಕ್ಕೆ ಕಿಡಿಕಾರಿದ ಡಿಎಂಕೆ ಶಾಸಕರು, ಇಲ್ಲಿ ನೀವು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಹೇರಬೇಡಿ. ಇದು ನಾಗಾಲ್ಯಾಂಡ್ ಅಲ್ಲ. ಇದು ನಮ್ಮ ಹೆಮ್ಮೆಯ ತಮಿಳುನಾಡು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್. ರವಿ ನಡುವೆ ಹಲವು ವಿಚಾರಗಳಲ್ಲಿ ಬಿರುಕು ಉಂಟಾಗುತ್ತಲೇ ಇರುತ್ತದೆ. ಈ ಹಿಂದೆ ದ್ರಾವಿಡ ರಾಜಕೀಯವನ್ನು ‘ಪ್ರತಿಗಾಮಿ ರಾಜಕೀಯ’ ಎಂದು ಕರೆದಿದ್ದರು. ರಾಜ್ಯಪಾಲರ ಹೇಳಿಕೆಗೆ ಡಿಎಂಕೆ ಬಲವಾದ ವಿರೋಧ ವ್ಯಕ್ತಪಡಿಸಿತ್ತು.

ಇದನ್ನು ಓದಿ: ಕಾಂಗ್ರೆಸ್‌ ನಾಯಕರ ಪ್ರವಾಸ ಸಮಿತಿ ಸಭೆ; ಮಹತ್ವದ ವಿಚಾರಗಳ ಚರ್ಚೆ

Last Updated : Jan 9, 2023, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.