ETV Bharat / bharat

CJI D Y Chandrachud:'ನ್ಯಾಯಾಧೀಶ ಸ್ಥಾನದಿಂದ ಕೆಳಗಿಳಿದ ಬಳಿಕ ಮಾತುಗಳು ಅಭಿಪ್ರಾಯವಷ್ಟೇ': ಸಿಜೆಐ ಡಿ.ವೈ.ಚಂದ್ರಚೂಡ್​

author img

By

Published : Aug 8, 2023, 4:18 PM IST

CJI DY Chandrachud: ಕೇಂದ್ರ ಸರ್ಕಾರದ ದೆಹಲಿ ಸೇವೆಗಳ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಾಜಿ ಸಿಜೆಐ ರಂಜನ್​ ಗೊಗೊಯ್​ ಅವರ ಹೇಳಿಕೆಯನ್ನು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸಿಜೆಐ ಡಿ.ವೈ.ಚಂದ್ರಚೂಡ್‌ ಸ್ಪಷ್ಟನೆ ನೀಡಿದರು.

CJI D Y chandrachud
ಸಿಜೆಐ ಡಿವೈ ಚಂದ್ರಚೂಡ್​

ನವದೆಹಲಿ: ಸಂವಿಧಾನದ ಮೂಲರಚನೆ ಚರ್ಚಾಸ್ಪದವಾಗಿದೆ ಎಂದು ಸುಪ್ರಿಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ರಂಜನ್​ ಗೊಗೊಯ್​​ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಹಿರಿಯ ವಕೀಲ ಕಪಿಲ್​ ಸಿಬಲ್​ ಅವರು, ಸಿಜೆಐ ಡಿ.ವೈ.ಚಂದ್ರಚೂಡ್​ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದೆದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯ ವೇಳೆ, ಅರ್ಜಿದಾರರಲ್ಲಿ ಒಬ್ಬರಾದ ಅಕ್ಬರ್​ ಲೋನ್​ ಪರವಾಗಿ ಸಿಬಲ್,​ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠಕ್ಕೆ, "ನಿಮ್ಮ ಗೌರವಾನ್ವಿತ ಸಹೋದ್ಯೋಗಿಗಳಲ್ಲಿ ಒಬ್ಬರು ವಾಸ್ತವವಾಗಿ ಮೂಲಭೂತ ರಚನೆಯ ಸಿದ್ಧಾಂತವೇ ಅನುಮಾನಾಸ್ಪದವಾಗಿದೆ. ಮೂಲಭೂತ ರಚನೆಯು ಸಂವಿಧಾನದ ಅತ್ಯಗತ್ಯ ಲಕ್ಷಣ. ಇದನ್ನು ಸಂಸತ್ತು ಬದಲಾವಣೆ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ ಎಂದು ಹೇಳಿದರು.

ಸಿಬಲ್​ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ.ಚಂದ್ರಚೂಡ್,​ "ಸಿಬಲ್​ ಅವರೇ, ನೀವು ಸಹೋದ್ಯೋಗಿಯೆಂದು ಉಲ್ಲೇಖಿಸುವಾಗ, ಪೀಠದಲ್ಲಿರುವ ಸಹೋದ್ಯೋಗಿಯನ್ನು ಉಲ್ಲೇಖಿಸಬೇಕು. ಯಾಕೆಂದರೆ ಒಮ್ಮೆ ನಾವು ನ್ಯಾಯಾಧೀಶರ ಸ್ಥಾನದಿಂದ ಕೆಳಗಿಳಿದ ಮೇಲೆ ನಮ್ಮ ಮಾತುಗಳು ಅಭಿಪ್ರಾಯಗಳಷ್ಟೇ ಆಗಿರುತ್ತವೆಯೇ ಹೊರತು ಪಾಲಿಸಲೇಬೇಕಾದ ವಾಸ್ತವಾಂಶ ಆಗಿರದು" ಸ್ಪಷ್ಟಪಡಿಸಿದರು.

ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಮಾತನಾಡಿ, "ನ್ಯಾಯಾಲಯದ ಕಲಾಪದ ವೇಳೆ ಏನಾಗುತ್ತದೆ ಎಂಬುದನ್ನು ಸಂಸತ್ತು ಚರ್ಚಿಸುವುದಿಲ್ಲ" ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದತ್ತ ಬೊಟ್ಟು ಮಾಡಿದರು. ಇದಕ್ಕೆ ಸಿಬಲ್​ ಸರಿ ಎಂದರು.

ದೆಹಲಿಯ ಆಡಳಿತ ಸೇವೆಗಳಿಗೆ ಸಂಬಂಧಿಸಿದಂತೆ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಕೇಂದ್ರ ಸರ್ಕಾರದ, ದೆಹಲಿ ಸೇವೆಗಳ (ತಿದ್ದುಪಡಿ) ಮಸೂದೆ 2023ರ ಮೇಲೆ ವಿಪಕ್ಷಗಳ ಟೀಕೆಗಳಿಗೆ ಮಾಜಿ ಸಿಜೆಐ ಹಾಗೂ ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ರಂಜನ್​ ಗೊಗೊಯ್​ ಅವರು ಪ್ರತಿಕ್ರಿಯಿಸಿ, "ಸಿದ್ಧಾಂತವು ಬಹಳ ಚರ್ಚಾಸ್ಪದ ನ್ಯಾಯಶಾಸ್ತ್ರದ ಆಧಾರದ ಮೇಲಿದೆ' ಎಂದು ನಿನ್ನೆ ಹೇಳಿದ್ದರು. ಸುಪ್ರೀಂ ಕೋರ್ಟ್​ ತೀರ್ಪನ್ನು ರದ್ದುಗೊಳಿಸುವ ಸುಗ್ರೀವಾಜ್ಞೆಯನ್ನು ಬದಲಿಸಲು ಕೇಂದ್ರ ಸರ್ಕಾರ ತಂದ ಈ ಮಸೂದೆಯ ಪರವಾಗಿ ರಂಜನ್​ ಗೊಗೊಯ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ರಾಜ್ಯಸಭೆಯಲ್ಲಿ ಇಂದು ದೆಹಲಿ ಸೇವೆಗಳ ಮಸೂದೆ ಮಂಡನೆ: ವಿಧೇಯಕಕ್ಕೆ ಎಎಪಿ ವಿರೋಧ, ತನ್ನ ಸದಸ್ಯರಿಗೆ ವಿಪ್​ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.