ETV Bharat / bharat

ಅರಬ್​ ರಾಜಕುಮಾರ 10 ವರ್ಷದ ಹಿಂದೆ ಉಡುಗೊರೆಯಾಗಿ ನೀಡಿದ್ದ ಏಕೈಕ ಚೀತಾ ಸಾವು

author img

By

Published : Mar 26, 2023, 2:32 PM IST

ಹೈದರಾಬಾದ್​ನ ನೆಹರು ಝೂಲಾಜಿಕಲ್ ಪಾರ್ಕ್​ನಲ್ಲಿದ್ದ ಏಕೈಕ ಚೀತಾ ಸಾವನ್ನಪ್ಪಿದೆ. ಇದನ್ನು ಸೌದಿ ಅರೇಬಿಯಾದ ರಾಜ 2012 ರಲ್ಲಿ ಉಡುಗೊರೆಯಾಗಿದ್ದ ನೀಡಿದ್ದರು.

ಏಕೈಕ ಚೀತಾ ಸಾವು
ಏಕೈಕ ಚೀತಾ ಸಾವು

ಹೈದರಾಬಾದ್: ದಶಕದ ಹಿಂದೆ ಸೌದಿ ರಾಜಕುಮಾರ ಉಡುಗೊರೆಯಾಗಿ ನೀಡಿದ 15 ವರ್ಷದ ಗಂಡು ಚೀತಾ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿದೆ. ‘ಅಬ್ದುಲ್ಲಾ’ ಹೆಸರಿನ ಚೀತಾ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾಗಿ ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ 2012 ರಲ್ಲಿ ನಡೆದ CoP11 ಶೃಂಗಸಭೆಯ ವೇಳೆ ಮೃಗಾಲಯಕ್ಕೆ ಭೇಟಿ ನೀಡಿದ್ದ ಸೌದಿಯ ರಾಜಕುಮಾರ ಬಂದರ್ ಬಿನ್ ಸೌದ್ ಬಿನ್ ಮೊಹಮ್ಮದ್ ಅಲ್ ಸೌದ್ ಅವರು ಎರಡು ಆಫ್ರಿಕನ್ ಸಿಂಹಗಳು ಮತ್ತು 2 ಚೀತಾಗಳನ್ನು ಉಡುಗೊರೆ ನೀಡುವುದಾಗಿ ಘೋಷಿಸಿದ್ದರು. ವರ್ಷದ ಬಳಿಕ ಸೌದಿ ಅರೇಬಿಯಾದ ರಾಷ್ಟ್ರೀಯ ವನ್ಯಜೀವಿ ಸಂಶೋಧನಾ ಕೇಂದ್ರದಿಂದ ಪ್ರಾಣಿಗಳನ್ನು ಕರೆತರಲಾಗಿತ್ತು.

7 ವರ್ಷದ ಬಳಿಕ ಅಂದರೆ 2020 ರಲ್ಲಿ ಹೆಣ್ಣು ಚೀತಾ ಹಿಬಾ ತನ್ನ ಎಂಟನೇ ವಯಸ್ಸಿನಲ್ಲಿ ಪ್ಯಾರಾಪ್ಲೆಜಿಯಾ ರೋಗದಿಂದಾಗಿ ಸಾವನ್ನಪ್ಪಿತ್ತು. ಪ್ಯಾರಾಪ್ಲೆಜಿಯಾ ನರ ದೌರ್ಬಲ್ಯದಿಂದ ಕೂಡಿದ ಪಾರ್ಶ್ವವಾಯು ರೋಗದ ವರ್ಗಕ್ಕೆ ಸೇರಿದ್ದಾಗಿದೆ. ದುರ್ಬಲ ಸಂವೇದನೆಯಿಂದ ಹಿಬಾ ಕಣ್ಮರೆಯಾಗಿದ್ದಳು. ಅಂದಿನಿಂದ 'ಅಬ್ದುಲ್ಲಾ' ಒಂಟಿಯಾಗಿದ್ದ.

ಇದೀಗ ಅಬ್ದುಲ್ಲಾ ಚೀತಾ ಕೂಡ ಸಾವಿಗೀಡಾಗಿದ್ದು, ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಚೀತಾಗಳೇ ಇಲ್ಲವಾಗಿವೆ. ಸುಮಾರು 70 ವರ್ಷಗಳ ಹಿಂದೆಯೇ ಭಾರತದಲ್ಲಿ ಚೀತಾಗಳ ಸಂತತಿ ನಿರ್ನಾಮವಾಗಿವೆ ಎಂದು ಘೋಷಿಸಲಾಯಿತು. ಕಳೆದ ವರ್ಷವಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮೀಬಿಯಾದಿಂದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಂದು ಬಿಟ್ಟಿದೆ. ಈ ಮೂಲಕ ಭಾರತದಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸಲಾಗಿದೆ.

ಕುನೋ ಅರಣ್ಯದಲ್ಲಿ 20 ಚೀತಾ: ಇದಾದ ಬಳಿಕ ಮತ್ತೆ 12 ಚೀತಾಗಳನ್ನು ಅದೇ ಕುನೊ ಅರಣ್ಯಕ್ಕೆ ತಂದು ಬಿಡಲಾಗಿದೆ. ಇದೀಗ ಒಟ್ಟು 20 ಚೀತಾಗಳು ಕಾಡಿನಲ್ಲಿ ಓಡಾಡುತ್ತಿವೆ. ಚೀತಾಗಳನ್ನು ಕ್ರೇಟ್‌ಗಳಲ್ಲಿ ಇಟ್ಟುಕೊಂಡು ಜೋಹಾನ್ಸ್‌ಬರ್ಗ್‌ನ ಟ್ಯಾಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತರಲಾಗಿದೆ. ಭಾರತೀಯ ವಾಯುಪಡೆಯ C-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಹೊತ್ತು ತಂದಿತು.

ಇದರಲ್ಲಿ 7 ಗಂಡು ಮತ್ತು 5 ಹೆಣ್ಣು ಚೀತಾಗಳಿವೆ. ಆಫ್ರಿಕನ್ ಚೀತಾವನ್ನು ಹೋಲುವ ಇತರ ಉಪಜಾತಿ ಚೀತಾಗಳು ಅತ್ಯಂತ ವೇಗವಾಗಿ ಓಡುವ ಪ್ರಾಣಿಯಾಗಿವೆ. ಆದರೆ, 1952ರಲ್ಲಿ ಈ ಜಾತಿಯ ಚೀತಾಗಳ ಸಂತತಿ ನಾಶವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ಸರ್ಕಾರ ಭಾರತಕ್ಕೆ ಚೀತಾಗಳ ಮರು ಪರಿಚಯಕ್ಕೆ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದ್ದವು.

ಮುಂದಿನ 8 ರಿಂದ 10 ವರ್ಷಗಳವರೆಗೆ ವಾರ್ಷಿಕವಾಗಿ ಇನ್ನೂ 12 ಚಿರತೆಗಳನ್ನು ಸ್ಥಳಾಂತರಿಸುವ ಯೋಜನೆ ಇದೆ. ವಿಶ್ವಾದ್ಯಂತ ಚೀತಾಗಳ ಸಂಖ್ಯೆ 1975ರಲ್ಲಿ ಅಂದಾಜು 15,000 ಇದ್ದವು. ಕಾಲಕ್ರಮೇಣ ಅದು 7,000 ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದು ವರದಿಯಾಗಿದೆ.

ಓದಿ: ಆಫ್ರಿಕಾದಿಂದ 12 ಚಿರತೆಗಳು ಭಾರತಕ್ಕೆ ಆಗಮನ: ಚೀತಾಗಳ ಕುರಿತು ಪ್ರಮುಖ ಅಂಶಗಳಿವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.