ETV Bharat / bharat

ಸಲಿಂಗ ವಿವಾಹ ಕಾನೂನು ಮಾನ್ಯತೆಗೆ ವಿರೋಧ: ಮೂಲಭೂತ ಹಕ್ಕು ಎನ್ನಲು ಸಾಧ್ಯವಿಲ್ಲ ಎಂದ ಕೇಂದ್ರ

author img

By

Published : Mar 12, 2023, 5:50 PM IST

ಸಲಿಂಗ ವಿವಾಹಕ್ಕೆ ದೇಶದ ಕಾನೂನುಗಳ ಅಡಿಯಲ್ಲಿ ಮಾನ್ಯತೆ ಪಡೆಯುವ ಮೂಲಭೂತ ಹಕ್ಕು ಎನ್ನಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್​ಗೆ ತಿಳಿಸಿದೆ.

centre-opposes-pleas-for-validation-of-same-sex-marriage-in-sc
ಸಲಿಂಗ ವಿವಾಹ ಕಾನೂನು ಮಾನ್ಯತೆಗೆ ವಿರೋಧ: ಮೂಲಭೂತ ಹಕ್ಕು ಎನ್ನಲು ಸಾಧ್ಯವಿಲ್ಲ ಎಂದು ಕೇಂದ್ರ

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದು ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನ ಮತ್ತು ಸ್ವೀಕೃತ ಸಾಮಾಜಿಕ ಮೌಲ್ಯಗಳಿಗೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಕೇಂದ್ರ ತಿಳಿಸಿದೆ.

ಸಲಿಂಗ ಮದುವೆಯನ್ನು ಊರ್ಜಿತಗೊಳಿಸಬೇಕೆಂದು ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಸೋಮವಾರ ಕೈಗೆತ್ತಿಕೊಳ್ಳಲಿದೆ. ಈ ಸಂಬಂಧ ಸರ್ಕಾರ ತನ್ನ ಅಫಿಡವಿಟ್​ ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರಡಿ ಅಪರಾಧ ಹೊರತಾಗಿಯೂ, ಅರ್ಜಿದಾರರು ಸಲಿಂಗ ವಿವಾಹಕ್ಕೆ ದೇಶದ ಕಾನೂನುಗಳ ಅಡಿಯಲ್ಲಿ ಮಾನ್ಯತೆ ಪಡೆಯುವ ಮೂಲಭೂತ ಹಕ್ಕು ಅಂತಾ ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಂಗ ವ್ಯಾಖ್ಯಾನದಿಂದ ದುರ್ಬಲಗೊಳಿಸಬಾರದು: ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹವು ಯಾವುದೇ ಕ್ರೋಢೀಕರಿಸದ ವೈಯಕ್ತಿಕ ಕಾನೂನುಗಳು ಅಥವಾ ಯಾವುದೇ ಕ್ರೋಢೀಕೃತ ಶಾಸನಬದ್ಧ ಕಾನೂನುಗಳಲ್ಲಿ ಗುರುತಿಸಲ್ಪಟ್ಟಿಲ್ಲ ಮತ್ತು ಅಂಗೀಕರಿಸಲ್ಪಟ್ಟಿಲ್ಲ. ಮದುವೆಯ ಕಲ್ಪನೆಯು ಅಗತ್ಯ ಹಾಗೂ ಅನಿವಾರ್ಯವಾಗಿ ವಿರುದ್ಧ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ಬಂಧವನ್ನು ಸೂಚಿಸುತ್ತಿದೆ. ಈ ವ್ಯಾಖ್ಯಾನವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಕಾನೂನುಬದ್ಧವಾಗಿ ಮದುವೆಯ ಕಲ್ಪನೆ ಮತ್ತು ಪರಿಕಲ್ಪನೆಯಲ್ಲಿ ಬೇರೂರಿದೆ. ಇದು ನ್ಯಾಯಾಂಗ ವ್ಯಾಖ್ಯಾನದಿಂದ ತೊಂದರೆಗೊಳಗಾಗಬಾರದು ಅಥವಾ ದುರ್ಬಲಗೊಳಿಸಬಾರದು ಎಂದು ಸರ್ಕಾರ ಹೇಳಿದೆ.

ಕಾನೂನು ಮತ್ತು ಸವಲತ್ತುಗಳಲ್ಲಿ ಅದರ ಪರಿಣಾಮಗಳನ್ನು ಹೊಂದಿರುವ ಮಾನವ ಸಂಬಂಧಗಳನ್ನು ಗುರುತಿಸುವ ಮಾನ್ಯತೆ ಮತ್ತು ಹಕ್ಕುಗಳನ್ನು ನೀಡುವುದು ಮೂಲಭೂತವಾಗಿ ಶಾಸಕಾಂಗ ಕಾರ್ಯವಾಗಿದೆ. ಎಂದಿಗೂ ನ್ಯಾಯಾಂಗ ತೀರ್ಪಿನ ವಿಷಯವಾಗಿರಲು ಸಾಧ್ಯವಿಲ್ಲ ಎಂದು ನೆನಪಿನಲ್ಲಿಡಬೇಕು. ನ್ಯಾಯಾಲಯದ ಮುಂದೆ ಅರ್ಜಿದಾರರು ಮಾಡಿದ ಪ್ರಾರ್ಥನೆಯು ಸಂಪೂರ್ಣವಾಗಿ ಸಮರ್ಥನೀಯವಲ್ಲ. ಇದು ತಪ್ಪು ಎಂದು ತಿಳಿಸಿದೆ.

ಮದುವೆಯ ಸ್ವರೂಪವು ವಿಭಿನ್ನ: ಮಿತಾಕ್ಷರ, ದಯಾಭಾಗ ಮುಂತಾದ ಪ್ರತಿಯೊಂದು ಧರ್ಮದ ಎಲ್ಲ ಶಾಖೆಗಳನ್ನು ಕ್ರೋಡೀಕರಿಸಿದ ಮತ್ತು ಕ್ರೋಡೀಕರಿಸದ ವೈಯಕ್ತಿಕ ಕಾನೂನುಗಳು ನೋಡಿಕೊಳ್ಳುತ್ತವೆ. ಹಿಂದೂಗಳಲ್ಲಿ ಮತ್ತು ಇತರ ಧರ್ಮಗಳಲ್ಲಿನ ಇದೇ ರೀತಿಯ ವ್ಯತ್ಯಾಸಗಳು ಮತ್ತು ಅನ್ವಯವಾಗುವ ವೈಯಕ್ತಿಕ ಕಾನೂನುಗಳನ್ನು ಅವಲಂಬಿಸಿದ್ದು, ಮದುವೆಯ ಸ್ವರೂಪವು ವಿಭಿನ್ನವಾಗಿರುತ್ತದೆ ಅಷ್ಟೇ ಎಂದಿದೆ.

ಹಿಂದೂಗಳಲ್ಲಿ ಇದು ಸಂಸ್ಕಾರವಾಗಿದೆ. ಪುರುಷ ಮತ್ತು ಮಹಿಳೆಯ ನಡುವಿನ ಪರಸ್ಪರ ಕರ್ತವ್ಯಗಳನ್ನು ನಿರ್ವಹಿಸುವ ಪವಿತ್ರ ಬಂಧನವಾಗಿದೆ. ಮುಸ್ಲಿಮರಲ್ಲಿ ಇದು ಒಪ್ಪಂದವಾಗಿದೆ. ಆದರೆ, ಮತ್ತೆ ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ಕಲ್ಪಿಸಲಾಗಿದೆ. ಆದ್ದರಿಂದ ಧಾರ್ಮಿಕ ಮತ್ತು ಸಾಮಾಜಿಕ ಮಾನದಂಡಗಳಲ್ಲಿ ಆಳವಾಗಿ ಹುದುಗಿರುವ ದೇಶದ ಸಂಪೂರ್ಣ ಶಾಸಕಾಂಗ ನೀತಿಯನ್ನು ಬದಲಾಯಿಸಲು, ನ್ಯಾಯಾಲಯದ ರಿಟ್‌ಗಾಗಿ ಪ್ರಾರ್ಥಿಸಲು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಸ್ಟಷ್ಟಪಡಿಸಿದೆ.

ಸಂಸತ್ತು ವಿವಾಹ ಕಾನೂನುಗಳನ್ನು ವಿನ್ಯಾಸಗೊಳಿಸಿದೆ ಮತ್ತು ರೂಪಿಸಿದೆ ಇದು ವೈಯಕ್ತಿಕ ಕಾನೂನುಗಳು, ವಿವಿಧ ಧಾರ್ಮಿಕ ಸಮುದಾಯಗಳ ಸಂಪ್ರದಾಯಗಳಿಗೆ ಸಂಬಂಧಿಸಿದ ಕ್ರೋಡೀಕೃತ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ. ಯಾವುದೇ ಹಸ್ತಕ್ಷೇಪವು ದೇಶದಲ್ಲಿನ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನ ಹಾಗೂ ಸ್ವೀಕೃತ ಸಾಮಾಜಿಕ ಮೌಲ್ಯಗಳಿಗೆ ಹಾನಿ ಉಂಟಾಗುತ್ತದೆ ಎಂದು ಕೇಂದ್ರ ಪ್ರತಿಪಾದಿಸಿದೆ.

ದೆಹಲಿ ಹೈಕೋರ್ಟ್ ಸೇರಿದಂತೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಜನವರಿ 6ರಂದು ಸುಪ್ರೀಂಕೋರ್ಟ್ ಒಂದು ಗುಂಪಾಗಿ ಮಾಡಿ ವರ್ಗಾವಣೆ ಮಾಡಿಕೊಂಡಿತ್ತು.

ಇದನ್ನೂ ಓದಿ: ಸಲಿಂಗ ವಿವಾಹ: ಸುಪ್ರೀಂಕೋರ್ಟ್​​ನಿಂದ ಹೈಕೋರ್ಟ್​ಗಳಲ್ಲಿರುವ ಎಲ್ಲ ಅರ್ಜಿಗಳ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.