ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು: ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಮುಂದೆ ಭಾರಿ ಪ್ರತಿಭಟನೆ

author img

By

Published : Jan 2, 2023, 5:41 PM IST

Updated : Jan 2, 2023, 6:26 PM IST

delhi-girls-dragging-video-on-road-

ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು - 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ - ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು- ಕುಟುಂಬಸ್ಥರು ಆಪ್​ನಿಂದ ಭಾರಿ ಪ್ರತಿಭಟನೆ

ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು ಸಿಸಿಟಿವಿ ವಿಡಿಯೋ

ನವದೆಹಲಿ: ಕುಡಿದ ಮತ್ತಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯನ್ನು ಕೊಂದ ಘಟನೆ ತೀವ್ರ ಸ್ವರೂಪ ಪಡೆದಿದೆ. ಕಾರಿನಡಿ ಸಿಲುಕಿದ ದೇಹವನ್ನು 4 ಕಿಮೀ ಎಳೆದೊಯ್ಯಲಾದ ಭೀಕರತೆಯ ವಿರುದ್ಧ ಕುಟುಂಬಸ್ಥರು, ಆಮ್​ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ. ಘಟನೆಯ ಹೊಣೆ ಹೊತ್ತು ಲೆಫ್ಟಿನೆಂಟ್​ ಗವರ್ನರ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.

ದೆಹಲಿಯ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಭದ್ರತೆ ಒದಗಿಸಲು ದೆಹಲಿ ಪೊಲೀಸರು ಮತ್ತು ಲೆಫ್ಟಿನೆಂಟ್ ಗವರ್ನರ್ ವಿಫಲರಾಗಿದ್ದಾರೆ ಎಂದು ಎಎಪಿ ನಾಯಕ ಆದಿಲ್ ಖಾನ್ ಆರೋಪಿಸಿದ್ದಾರೆ. ದೆಹಲಿಯಲ್ಲಿ ನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸರು ಮಾತ್ರ ಸಾರ್ವಜನಿಕರಿಗೆ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ದೂರಿದರು.

ದೆಹಲಿಯಲ್ಲಿ ಅಕ್ರಮ ಮದ್ಯ ಮತ್ತು ಡ್ರಗ್ಸ್​ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಲೆಫ್ಟಿನೆಂಟ್​ ಗವರ್ನರ್​ ಮತ್ತು ಪೊಲೀಸರು ವಿಫಲರಾಗಿದ್ದಾರೆ. ಯುವತಿಯ ಭೀಕರ ಸಾವಿನ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಘಟನೆಯ ಬಗ್ಗೆ ಕುಟುಂಬಕ್ಕೆ ನಿಖರವಾಗಿ ಮಾಹಿತಿ ನೀಡದೇ ಮುಚ್ಚಿಹಾಕಲಾಗುತ್ತಿದೆ. ಹೊಸ ವರ್ಷದ ವೇಳೆ ಪೊಲೀಸರು ವಿವಿಧೆಡೆ ನಿಯೋಜಿಸಲಾಗುವುದು ಎಂದು ಹೇಳಿದ್ದರೂ ಅದನ್ನು ಪಾಲಿಸದೇ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಬಳಕೆ: ಪ್ರತಿಭಟನೆ ತೀವ್ರ ಕಾವು ಪಡೆದು ಜನರು ಲೆಫ್ಟಿನೆಂಟ್​ ಗವರ್ನರ್​ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದಾರೆ. ಅಧಿಕಾರಿಗಳು ಕಾರುಗಳನ್ನು ತಡೆದು ದಾಂಧಲೆ ನಡೆಸಲಾಗಿದೆ. ನಗರದ ಕೆಲ ಮುಖ್ಯರಸ್ತೆಗಳನ್ನೂ ಮುಚ್ಚಲಾಗಿದೆ. ಪ್ರತಿಭಟನಾಕಾರರು ಚದುರಿದ ಬಳಿಕ ರಸ್ತೆಗಳನ್ನು ಮರು ಆರಂಭಿಸಲಾಗಿದೆ.

ಗವರ್ನರ್​ ಜೊತೆ ಸಿಎಂ ಕೇಜ್ರಿವಾಲ್ ಚರ್ಚೆ: ಯುವತಿಯ ಭೀಕರ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಲೆಫ್ಟಿನೆಂಟ್​ ಗವರ್ನರ್​ ವಿನಯ್ ಸಕ್ಸೇನಾ ಅವರ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಆರೋಪಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರನ್ನು ಬಿಡಬಾರದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅತ್ಯಾಚಾರ ಆರೋಪ ಮಾಡಿದ ಕುಟುಂಬ: ಕಾರಿನಡಿ ಯುವತಿಯನ್ನು ಎಳೆದೊಯ್ಯುವ ಮೊದಲು ಆರೋಪಿಗಳು ಅತ್ಯಾಚಾರ ನಡೆಸಿದ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದ ವೇಳೆ ಯುವಕರು ಕುಡಿದ ಮತ್ತಿನಲ್ಲಿ ಸ್ಕೂಟಿಯನ್ನು ಗುದ್ದಿ, ಬಳಿಕ ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಇದು ಗೊತ್ತಾಗಬಾರದು ಎಂದು ಆಕೆಯನ್ನು ಕಾರಿನಡಿ ಎಳೆದೊಯ್ದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಮಹಿಳಾ ಆಯೋಗ ಟೀಕೆ: ಘಟನೆ ಕುರಿತು ಪೊಲೀಸರ ತನಿಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಿಳಾ ಆಯೋಗ, ಪ್ರಕರಣವನ್ನು ಅಪಘಾತದ ಕೋನದಲ್ಲಿ ಮಾತ್ರ ತನಿಖೆ ನಡೆಸಲಾಗುತ್ತಿದೆ. ಯಾವುದೇ ವಿಚಾರಣೆ, ಸಾಕ್ಷಿಗಳ ಹೇಳಿಕೆಗಳನ್ನು ಪಡೆದುಕೊಂಡಿಲ್ಲ. ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ವರದಿ ಮಾಡಲು ಬಂದ ಪತ್ರಕರ್ತರು, ಮಾಧ್ಯಮಗಳ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ತನ್ನ ವೈಫಲ್ಯ ಮರೆಮಾಚಲು ಪೊಲೀಸರು ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವುದು ಸರ್ವಾಧಿಕಾರವಾಗಿದೆ ಎಂದು ಟೀಕಿಸಿದ್ದಾರೆ.

ಆರೋಪಿಗಳು ಪೊಲೀಸ್ ಕಸ್ಟಡಿಗೆ: ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ದೆಹಲಿಯ ರೋಹಿಣಿ ನ್ಯಾಯಾಲಯ ಎದುರು ಹಾಜರುಪಡಿಸಿದ ಪೊಲೀಸರು, ಬಳಿಕ ಅವರನ್ನು ವಿಚಾರಣೆಗಾಗಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಓದಿ: ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು.. 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ

Last Updated :Jan 2, 2023, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.