ETV Bharat / bharat

ದೆಹಲಿ ಅಬಕಾರಿ ನೀತಿ ಹಗರಣ: ಕೆಸಿಆರ್​ ಪುತ್ರಿ ಕವಿತಾ ನಿವಾಸಕ್ಕೆ ಬಂದ ಸಿಬಿಐ ಅಧಿಕಾರಿಗಳು

author img

By

Published : Dec 11, 2022, 3:59 PM IST

ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ಕವಿತಾ ನಿವಾಸಕ್ಕೆ ಎರಡು ತಂಡಗಳಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ಸಾಕ್ಷಿಯಾಗಿ ವಿಚಾರಣೆ ನಡೆಸಲಿದ್ದಾರೆ. ಸಂಜೆವರೆಗೂ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.

cbi-officials-reached-mlc-kavitha-house-to-question-her-in-delhi-liquor-scam-case
ದೆಹಲಿ ಅಬಕಾರಿ ನೀತಿ ಹಗರಣ: ಕೆಸಿಆರ್​ ಪುತ್ರಿ ಕವಿತಾ ನಿವಾಸಕ್ಕೆ ಬಂದ ಸಿಬಿಐ ಅಧಿಕಾರಿಗಳು, ಸಂಜೆವರೆಗೆ ವಿಚಾರಣೆ

ಹೈದರಾಬಾದ್ (ತೆಲಂಗಾಣ): ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆಗಾಗಿ ಹೈದರಾಬಾದ್​​ನ ಬಂಜಾರ ಹಿಲ್ಸ್‌ನಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಪುತ್ರಿ, ವಿಧಾನ ಪರಿಷತ್​ ಸದಸ್ಯೆ ಕವಿತಾ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ.

ಎರಡು ತಂಡಗಳಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು ಕವಿತಾ ಅವರನ್ನು ಸಾಕ್ಷಿಯಾಗಿ ಸಿಆರ್‌ಪಿಸಿ 161ರ ಅಡಿಯಲ್ಲಿ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ಆಗಮಿಸಿರುವ ಸಿಬಿಐ ತಂಡದಲ್ಲಿ ಮಹಿಳಾ ಅಧಿಕಾರಿಗಳೂ ಇದ್ದು, ಸಂಜೆವರೆಗೂ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ.6ರಂದು ಕವಿತಾ ಅವರಿಗೆ ಮೊದಲು ನೋಟಿಸ್​ ನೀಡಿತ್ತು. ಆದರೆ, ನ.11, 12, 14, 15ರಂದು ವಿಚಾರಣೆ ಹಾಜರಾಗುವುದಾಗಿ ಕವಿತಾ ಸಿಬಿಐಗೆ ಪತ್ರ ಬರೆದು ತಿಳಿಸಿದ್ದರು. ಅದರಂತೆ ಭಾನುವಾರ (ಇಂದು) ತನಿಖೆ ನಡೆಸುವುದಾಗಿ ಸಿಬಿಐ ತಿಳಿಸಿತ್ತು. ಇದಕ್ಕೆ ಕವಿತಾ ಒಪ್ಪಿಗೆ ಸೂಚಿಸಿದ್ದರಿಂದ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ

ಮತ್ತೊಂದೆಡೆ ಶನಿವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಕೆಸಿಆರ್​ ಅವರನ್ನು ಭೇಟಿಯಾಗಿ​ ಕವಿತಾ ಚರ್ಚಿಸಿದ್ದರು. ಸಿಬಿಐಗೆ ಸಹಕಾರಿಸಿ ಸೂಕ್ತ ಉತ್ತರ ನೀಡುವಂತೆ ಕವಿತಾಗೆ ತಂದೆ ಕೆಸಿಆರ್ ಸೂಚಿಸಿದ್ದಾರೆ. ಜೊತೆಗೆ ಸಿಬಿಐ ವಿಚಾರಣೆ ನಿಟ್ಟಿನಲ್ಲಿ ಕವಿತಾ ಈಗಾಗಲೇ ಹಲವು ಕಾನೂನು ತಜ್ಞರ ಸಲಹೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸಿಬಿಐ ವಿಚಾರಣೆ ಹಿನ್ನೆಲೆಯಲ್ಲಿ ಕವಿತಾ ನಿವಾಸ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದೇ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಮ್ಮ ನಿವಾಸದ ಬಳಿ ಬರಬೇಡಿ ಎಂದು ಕವಿತಾ ಮನವಿ ಮಾಡಿದ್ದಾರೆ.

ಏನಿದು ಅಬಕಾರಿ ನೀತಿ ಪ್ರಕರಣ?: ದೆಹಲಿಯ ಆಮ್​ ಆದ್ಮಿ ಪಕ್ಷ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ನೂತನ ಅಬಕಾರಿ ನೀತಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅಲ್ಲದೇ, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕರಣದ ಪ್ರಮುಖ ಆರೋಪಿ ಎಂದು ದೂರಿದ್ದರು.

ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿತ್ತು. ಈ ಹಗರಣದ ಬಗ್ಗೆ ಸಿಬಿಐ ಜೊತೆಗೆ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ. ಇತ್ತೀಚಿಗೆ ಸಿಬಿಐ ಮತ್ತು ಇಡಿ ಎರಡೂ ತನಿಖಾ ಸಂಸ್ಥೆಗಳು ಮದ್ಯ ಹಗರಣದಲ್ಲಿ ತಮ್ಮ ಮೊದಲ ಚಾರ್ಜ್​ಶೀಟ್​ ಸಲ್ಲಿಸಿವೆ. ಎರಡೂ ಚಾರ್ಜ್​ಶೀಟ್​ನಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೆಸರು ಕೈಬಿಟ್ಟಿದೆ.

ದೆಹಲಿ ಅಬಕಾರಿ ನೀತಿ ಹಗರಣವು ತೆಲಂಗಾಣಕ್ಕೂ ಸುತ್ತಿಕೊಂಡಿದ್ದು, ತನಿಖಾ ಸಂಸ್ಥೆಗಳು ಹೈದರಾಬಾದ್​ನ ಹಲವೆಡೆ ದಾಳಿ ಮಾಡಿ ಶೋಧ ಕಾರ್ಯ ಸಹ ನಡೆಸಿದ್ದವು. ಇದರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಪುತ್ರಿ ಕವಿತಾ ಹೆಸರು ಕೇಳಿ ಬಂದಿದ್ದರಿಂದ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.