ETV Bharat / bharat

ನಕಲಿ ದಾಖಲೆ ಪಡೆದು ಭಾರತದ ನಿವಾಸಿಗಳಲ್ಲದವರಿಗೆ ಪಾಸ್‌ಪೋರ್ಟ್ ವಿತರಣೆ.. ಸೇವಾ ಕೇಂದ್ರದ ಹಿರಿಯ ಅಧಿಕಾರಿ ಸೇರಿ ಇಬ್ಬರ ಬಂಧನ

author img

By ETV Bharat Karnataka Team

Published : Oct 14, 2023, 8:14 PM IST

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರಮುಖ ಪಾಸ್‌ಪೋರ್ಟ್​ ದಂಧೆಯ ಜಾಲವನ್ನು ಸಿಬಿಐ ಪತ್ತೆ ಹಚ್ಚಿಸಿದೆ. ಇದರ ಭಾಗವಾಗಿ ಕೋಲ್ಕತ್ತಾ, ಗ್ಯಾಂಗ್ಟಕ್, ಸಿಲಿಗುರಿ, ಡಾರ್ಜಿಲಿಂಗ್, ಅಲಿಪುರ್ ದ್ವಾರ್ ಸೇರಿ 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

CBI busts fake passport racket, searches 50 locations in WB, Sikkim, arrests 2 including Sr Superintendent
ನಕಲಿ ದಾಖಲೆ ಪಡೆದು ಭಾರತದ ನಿವಾಸಿಗಳಲ್ಲದವರಿಗೆ ಪಾಸ್‌ಪೋರ್ಟ್ ವಿತರಣೆ: ಸೇವಾ ಕೇಂದ್ರದ ಹಿರಿಯ ಅಧಿಕಾರಿ ಸೇರಿ ಇಬ್ಬರ ಬಂಧನ

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರಮುಖ ಪಾಸ್‌ಪೋರ್ಟ್​ ದಂಧೆಯ ಜಾಲವನ್ನು ಭೇದಿಸಲಾಗಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ತಿಳಿಸಿದೆ. ಸುಳ್ಳು ಮತ್ತು ನಕಲಿ ಗುರುತಿನ ದಾಖಲೆಗಳ ಆಧಾರದ ಮೇಲೆ ಪಾಸ್‌ಪೋರ್ಟ್‌ ನೀಡಲು 1.90 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಪಾಸ್‌ಪೋರ್ಟ್ ಸೇವಾ ಲಘು ಕೇಂದ್ರದ ಹಿರಿಯ ಸೂಪರಿಂಟೆಂಡೆಂಟ್​ ಸೇರಿ ಇಬ್ಬರು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌತಮ್ ಕುಮಾರ್ ಸಹಾ ಎಂಬುವವರೇ ಬಂಧಿತ ಹಿರಿಯ ಸೂಪರಿಂಟೆಂಡೆಂಟ್ ಆಗಿದ್ದಾರೆ. ಸಿಕ್ಕಿಂನ ಗ್ಯಾಂಗ್ಟಾಕ್​ನಲ್ಲಿರುವ ಪಾಸ್‌ಪೋರ್ಟ್ ಸೇವಾ ಲಘು ಕೇಂದ್ರ (ಪಿಎಸ್‌ಎಲ್‌ಕೆ)ದ ಹಿರಿಯ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮತ್ತೋರ್ವ ಆರೋಪಿಯನ್ನು ದೀಪು ಚೆಟ್ರಿ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನೂ 1.90 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸೆರೆಹಿಡಿಯಲಾಗಿದೆ.

ಪಾಸ್‌ಪೋರ್ಟ್​ ದಂಧೆಯ ಸಂಬಂಧ 16 ಸಾರ್ವಜನಿಕ ಸೇವಕರು ಸೇರಿದಂತೆ ಒಟ್ಟು 24 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಕೋಲ್ಕತ್ತಾದ ಡೆಪ್ಯುಟಿ ಪಾಸ್‌ಪೋರ್ಟ್ ಅಧಿಕಾರಿ (DPO), ಕೋಲ್ಕತ್ತಾ, ಗ್ಯಾಂಗ್ಟಾಕ್​ನ ಹಿರಿಯ ಸೂಪರಿಂಟೆಂಡೆಂಟ್, ಇತರ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳು ಸೇರಿದ್ದಾರೆ ಎಂದು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಕೋಲ್ಕತ್ತಾದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮತ್ತು ಗ್ಯಾಂಗ್ಟಾಕ್​ನ ಪಿಎಸ್‌ಎಲ್‌ಕೆಯ ಸಾರ್ವಜನಿಕ ಸೇವಕರು ಪಾಸ್‌ಪೋರ್ಟ್ ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳೊಂದಿಗೆ ಈ ಕ್ರಿಮಿನಲ್ ಸಂಚು ರೂಪಿಸಿದ್ದಾರೆ. ಭಾರತದ ನಿವಾಸಿಗಳಲ್ಲದ ಅರ್ಜಿದಾರರು ಸಲ್ಲಿಸಿದ ಸುಳ್ಳು ಮತ್ತು ನಕಲಿ ಗುರುತಿನ ದಾಖಲೆಗಳ ಆಧಾರದ ಮೇಲೆ ಪಾಸ್‌ಪೋರ್ಟ್‌ಗಳನ್ನು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಅಕ್ರಮ ಹಣಕ್ಕಾಗಿ ಇದನ್ನು ಮಾಡುತ್ತಿದ್ದು, ಸಿಲಿಗುರಿಯಲ್ಲಿ ವ್ಯಕ್ತಿಯೊಬ್ಬರಿಂದ ಹಣವನ್ನು ಸ್ವೀಕರಿಸುತ್ತಿದ್ದಾಗ ಸೂಪರಿಂಟೆಂಡೆಂಟ್​ ಗೌತಮ್ ಕುಮಾರ್ ಸಹಾ ಅವರಿಂದ 1.90 ಲಕ್ಷ ರೂ. ನಗದು ವಶಕ್ಕೆ ಪಡಲಾಗಿದೆ. ನಂತರ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಹೆಚ್ಚಿನ ಶೋಧದ ಕಾರ್ಯದ ವೇಳೆ ಸಹಾ ಬಳಿ ಇನ್ನೂ ಹೆಚ್ಚಿನ 3.08 ಲಕ್ಷ ರೂ. ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಕಲಿ ಪಾಸ್‌ಪೋರ್ಟ್ ದಂಧೆ ನಿಗ್ರಹದ ಭಾಗವಾಗಿ ಕೋಲ್ಕತ್ತಾ, ಗ್ಯಾಂಗ್ಟಕ್, ಸಿಲಿಗುರಿ, ಡಾರ್ಜಿಲಿಂಗ್, ಅಲಿಪುರ್ ದ್ವಾರ್ ಸೇರಿದಂತೆ 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ, ಗುರುತಿನ ಪುರಾವೆಗಳು, ನಕಲಿ ಪಾಸ್‌ಪೋರ್ಟ್‌ಗಳ ವಿತರಣೆ ಹಾಗೂ ಇತ್ಯಾದಿ ಅಂಶಗಳಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ದೋಷಾರೋಪಣೆಯ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಕೋಟಿ ಮೌಲ್ಯದ 1.7 ಕೆಜಿ ಚಿನ್ನ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.