ETV Bharat / bharat

ವಿಧಾನಸಭೆಗೆ ಗೋಮಯದೊಂದಿಗೆ ಆಗಮಿಸಿದ ಬಿಜೆಪಿ ಶಾಸಕರು

author img

By ETV Bharat Karnataka Team

Published : Dec 20, 2023, 3:45 PM IST

Updated : Dec 20, 2023, 5:46 PM IST

BJP Protest on Congress guarantees: ಹಿಮಾಚಲ ಪ್ರದೇಶ ವಿಧಾನಸಭೆಯ ಹೊರಗೆ ಬಿಜೆಪಿ ಶಾಸಕರು ಹಸುವಿನ ಸಗಣಿ ತುಂಬಿದ್ದ ಬುಟ್ಟಿಗಳನ್ನು ಹಿಡಿದುಕೊಂಡು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Etv Bharat
Etv Bharat

ಧರ್ಮಶಾಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಪ್ರತಿ ಕೆಜಿ ಹಸುವಿನ ಸಗಣಿಯನ್ನು ಎರಡು ರೂಪಾಯಿಗೆ ಖರೀದಿಸುವ ಗ್ಯಾರಂಟಿ ಈಡೇರಿಸುವಲ್ಲಿ ಕಾಂಗ್ರೆಸ್​ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಶಾಸಕರು ಇಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸೌಧಕ್ಕೆ ಬುಟ್ಟಿಗಳಲ್ಲಿ ಸಗಣಿ ತುಂಬಿಕೊಂಡು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಿಮಾಚಲದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಮೊದಲ ದಿನದಿಂದಲೇ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿ, ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳ ಬಗ್ಗೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಅಧಿವೇಶನದ ಎರಡನೇ ದಿವವಾದ ಇಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್​ಗೆ ತನ್ನ ಗ್ಯಾರಂಟಿಗಳನ್ನು ನೆನಪಿಸುವ ಉದ್ದೇಶದಿಂದ ಬುಟ್ಟಿಗಳಲ್ಲಿ ಸಗಣಿ ತುಂಬಿಕೊಂಡು ವಿಧಾನಸೌಧಕ್ಕೆ ಬರುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ವಿಧಾನಸಭೆಯ ಹೊರಗೆ ಸಗಣಿ ತುಂಬಿದ್ದ ಬುಟ್ಟಿಗಳನ್ನು ಹಿಡಿದುಕೊಂಡು 'ಸಗಣಿ ಎರಡು ರೂಪಾಯಿಗೆ ಕಿಲೋ' ಎಂಬ ಭಿತ್ತಿಚಿತ್ರಗಳ ಪ್ರದರ್ಶನ ಹಾಗೂ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ಪ್ರತಿ ಕೆಜಿ ಹಸುವಿನ ಸಗಣಿಯನ್ನು 2 ರೂ.ಗೆ ಖರೀದಿಸುವ ಭರವಸೆ ನೀಡಿತ್ತು. ಆದರೆ, ಈಗ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಇನ್ನೂ ರೈತರಿಂದ ಗೋವಿನ ಸಗಣಿ ಖರೀದಿ ಆರಂಭಿಸಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಜೈರಾಮ್ ಠಾಕೂರ್ ಮಾತನಾಡಿ, ''ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಜನತೆಗೆ ಸುಳ್ಳು ಗ್ಯಾರಂಟಿಗಳನ್ನು ನೀಡಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಯಾವುದೇ ಗ್ಯಾರಂಟಿಯನ್ನೂ ಈಡೇರಿಸಿಲ್ಲ. ಇದೇ ಗ್ಯಾರಂಟಿಗಳು ಕಾಂಗ್ರೆಸ್​ಗೆ ಕೊರಳಿಗೆ ಸುತ್ತಿಕೊಳ್ಳುತ್ತಿವೆ. ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಗೋವಿನ ಸಗಣಿ ಖರೀದಿ ಬಗ್ಗೆ ಮಾತನಾಡುತ್ತಿದೆ. ಆದರೆ, ಇದುವರೆಗೂ ರೈತರಿಂದ ಗೋವಿನ ಸಗಣಿ ಖರೀದಿಸಿಲ್ಲ. ಈ ಭರವಸೆಗಳನ್ನು ಸಾರ್ವಜನಿಕರಾಗಲಿ, ಕಾಂಗ್ರೆಸ್ ಮುಖಂಡರಾಗಲಿ ಮರೆಯಲು ನಾವು ಬಿಡುವುದಿಲ್ಲ. ಗ್ಯಾರಂಟಿಗಳ ಬಗ್ಗೆ ನಮ್ಮ ಹೋರಾಟ ನಿರಂತರ'' ಎಂದು ಎಚ್ಚರಿಸಿದರು.

ಮುಂದುವರೆದು ಮಾತನಾಡಿದ ಅವರು, ''ಚುನಾವಣೆ ಸಮಯದಲ್ಲಿ ಕಾಂಗ್ರೆಸ್ 10 ಗ್ಯಾರಂಟಿಗಳನ್ನು ಕೊಟ್ಟಿದೆ. ಈಗ ಕಾಂಗ್ರೆಸ್​ ನಾಯಕರು ಈ ಗ್ಯಾರಂಟಿಗಳನ್ನು ಜನತೆ ಮರೆಯಲಿ ಎಂದು ಕಾಯುತ್ತಿದ್ದಾರೆ. ಆದರೆ, ಇವುಗಳನ್ನು ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಕಾಲಕಾಲಕ್ಕೆ ನೆನಪಿಸುತ್ತಲೇ ಇರುತ್ತದೆ. ರಾಜ್ಯದ ಜಾನುವಾರು ಸಾಕಣೆದಾರರು ಸರ್ಕಾರ ಖರೀದಿಸುತ್ತದೆ ಎಂಬ ನಂಬಿಕೆಯಿಂಂದ ಗೋವಿನ ಸಗಣಿಯನ್ನು ಒಂದು ವರ್ಷ ಸಂಗ್ರಹಿಸಿಕೊಂಡು ಕುಳಿತಿದ್ದಾರೆ. ಈಗ ಸಗಣಿ ಕೂಡ ಒಣಗಿ ಹೋಗಿದೆ. ಸಾರ್ವಜನಿಕರಿಗೆ ನೀಡಿದ ಗ್ಯಾರಂಟಿಯನ್ನು ಸರ್ಕಾರ ನೆನಪಿಸಿಕೊಳ್ಳಲಿ'' ಎಂದು ಚಾಟಿ ಬೀಸಿದರು.

ಇದನ್ನೂ ಓದಿ: ಮದ್ಯ ಕಳ್ಳ ಸಾಗಾಟ: ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹರಿದ ಕಾರು.. ಎಎಸ್​ಐ​ ಸ್ಥಳದಲ್ಲೇ ಸಾವು

Last Updated :Dec 20, 2023, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.