UP polls-2022: 172 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್​​.. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

author img

By

Published : Jan 14, 2022, 8:56 AM IST

Updated : Jan 14, 2022, 1:40 PM IST

ಸಾಂದರ್ಭಿಕ ಚಿತ್ರ

ಬಿಜೆಪಿ 172 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೂಲಕ ಉತ್ತರ ಪ್ರದೇಶ ಚುನಾವಣೆಗೆ ಸಜ್ಜಾಗುತ್ತಿದೆ. ರಾಜ್ಯದಲ್ಲಿ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, 2017ರಲ್ಲಿ ಪಡೆದಿದ್ದಕ್ಕಿಂತ ಹೆಚ್ಚಿನ ಸ್ಥಾನವನ್ನು 2022ರಲ್ಲಿ ಪಕ್ಷವು ಪಡೆಯಲಿದೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭವಿಷ್ಯ ನುಡಿದಿದ್ದಾರೆ.

ನವದೆಹಲಿ: ಗುರುವಾರ ಇಲ್ಲಿ ಕರೆದಿದ್ದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವ 172 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಅಪ್ನಾ ದಳ (ಎಸ್) ಮತ್ತು ನಿಶಾದ್ ಪಕ್ಷದೊಂದಿಗೆ ಪಕ್ಷದ ಸೀಟು ಹಂಚಿಕೆ ಮಾತುಕತೆಯೂ ಅಂತಿಮ ಹಂತದಲ್ಲಿದೆ. ಪಕ್ಷದ ಮೂಲಗಳ ಪ್ರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಲಖನೌದಿಂದ ಕಣಕ್ಕಿಳಿಯಲಿದ್ದಾರೆ. ಶರ್ಮಾ ಅವರು ಲಖನೌ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಿಂದ ಸ್ಪರ್ಧಿಸಬಹುದು.

ಗೋರಖ್‌ಪುರದಿಂದ 5 ಬಾರಿ ಲೋಕಸಭಾ ಸದಸ್ಯರಾಗಿರುವ ಆದಿತ್ಯನಾಥ್ ಪ್ರಸ್ತುತ ವಿಧಾನ ಪರಿಷತ್​​​ ​​ಸದಸ್ಯರಾಗಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಗುರುವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 172 ಸ್ಥಾನಗಳ ಕುರಿತು ಚರ್ಚೆ ನಡೆಸಲಾಗಿದ್ದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. 2017ರಲ್ಲಿ ಪಡೆದಿದ್ದಕ್ಕಿಂತ ಹೆಚ್ಚಿನ ಸ್ಥಾನವನ್ನು 2022ರಲ್ಲಿ ಪಕ್ಷವು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಹಾಲಿ ಶಾಸಕರನ್ನು ಕೈಬಿಡುವ ಸಾಧ್ಯತೆ:

ಶುಕ್ರವಾರ(ಇಂದು) ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ ವಿಧಾನಸಭೆಯ 58 ಮತ್ತು 55 ಸ್ಥಾನಗಳಿಗೆ ಕ್ರಮವಾಗಿ ಫೆಬ್ರವರಿ 10 ಮತ್ತು ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಏಳು ಹಂತದ ಚುನಾವಣೆ ನಿಗದಿಯಾಗಿದೆ. ಉತ್ತರಾಖಂಡ, ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳು ಫೆಬ್ರವರಿ 14 ರಂದು ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ಆಡಳಿತ ವಿರೋಧ ಅಲೆ ತಟಸ್ಥಗೊಳಿಸಲು ಬಿಜೆಪಿ ಹಲವಾರು ಹಾಲಿ ಶಾಸಕರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೊದಲ ಬಾರಿಗೆ ಬಿಜೆಪಿಯೊಂದಿಗೆ ಮೈತ್ರಿ:

ಅಪ್ನಾ ದಳ (ಎಸ್) ಪ್ರಕಾರ ಅದು 13 ರಿಂದ 14 ಸ್ಥಾನಗಳಲ್ಲಿ ಮತ್ತು ನಿಶಾದ್ ಪಕ್ಷವು 13 ರಿಂದ 17 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಈಟಿವಿ ಭಾರತದೊಂದಿಗೆ ಮಾತನಾಡಿದ ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್ ಅವರು ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಬಿಜೆಪಿಯೊಂದಿಗೆ ಸೀಟ್​​ ಹಂಚಿಕೆ ಕುರಿತು ಫಲಪ್ರದ ಮಾತುಕತೆಗಳ ಭರವಸೆಯಲ್ಲಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸುತ್ತಿರುವ ನಿಶಾದ್ ಪಕ್ಷವು ರಾಜ್ಯದಲ್ಲಿ 15 ರಿಂದ 18 ಸ್ಥಾನಗಳನ್ನು ನೀಡಲು ಬಿಜೆಪಿ ಒಪ್ಪಿದೆ ಎಂದು ಹೇಳಿಕೊಂಡಿದೆ. ಇದೇ ಮೊದಲ ಬಾರಿಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಸಮ್ಮಿಶ್ರ ಸರ್ಕಾರ ರಚನೆ?:

ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್, "ನಾವು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಸೀಟು ಹಂಚಿಕೆ ವಿಷಯದ ಬಗ್ಗೆ ಚರ್ಚಿಸಿದ್ದೇವೆ. ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪರಸ್ಪರ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಪಕ್ಷವು ಈ ಬಾರಿ ಕಿಂಗ್‌ಮೇಕರ್ ಪಾತ್ರವನ್ನು ವಹಿಸಲಿದೆ ಎಂದು ಹೇಳಿರುವ ಅವರು ಉತ್ತರ ಪ್ರದೇಶದಲ್ಲಿ ಎನ್‌ಡಿಎ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇಂದು ನಾಮಪತ್ರ ಸಲ್ಲಿಕೆ ಆರಂಭ:

ಉತ್ತರ ಪ್ರದೇಶ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದ್ದು, ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಲಿದೆ. ಈ ಹಂತದಲ್ಲಿ, ಶಾಮ್ಲಿ, ಮೀರತ್, ಮುಜಾಫರ್‌ನಗರ, ಬಾಗ್‌ಪತ್, ಹಾಪುರ್, ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಬುಲಂದ್‌ಶಹರ್, ಮಥುರಾ, ಆಗ್ರಾ ಮತ್ತು ಅಲಿಗಢ್ ಸೇರಿದಂತೆ ರಾಜ್ಯದ 11 ಜಿಲ್ಲೆಗಳ ಒಟ್ಟು 58 ಸ್ಥಾನಗಳಿಗೆ ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಸಲು ಜ.21 ಕೊನೆಯ ದಿನ. ಜ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜ.27 ರವರೆಗೆ ನಾಮಪತ್ರ ಹಿಂಪಡೆಯಬಹುದು. ಮೊದಲ ಹಂತದ ಚುನಾವಣೆಯ ಮತದಾನ ನಡೆಯಲಿರುವ 11 ಜಿಲ್ಲೆಗಳ 58 ಸ್ಥಾನಗಳ ಪೈಕಿ 9 ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ.

ಇದನ್ನೂ ಓದಿ: UP polls: 10 ಗಂಟೆ ಸಭೆ ನಡೆಸಿದ ಹೈಕಮಾಂಡ್​ - ಪ್ರಾದೇಶಿಕ ಉಸ್ತುವಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದ ಅಮಿತ್ ಶಾ

Last Updated :Jan 14, 2022, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.