ETV Bharat / bharat

ಈ ನ್ಯಾಯ ಸರಿನಾ.. ಅತ್ಯಾಚಾರ ಮಾಡಿದವರ ಬಿಡುಗಡೆಗೆ ಬಿಲ್ಕಿಸ್​ ಬಾನೊ ತೀವ್ರ ಆಕ್ಷೇಪ

author img

By

Published : Aug 18, 2022, 7:49 AM IST

ಗುಜರಾತ್​ ಗಲಭೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದನ್ನು ಸಂತ್ರಸ್ತೆ ಬಿಲ್ಕಿಸ್​ ಬಾನೊ ತೀವ್ರವಾಗಿ ಆಕ್ಷೇಪಿಸಿದ್ದಾರೆ.

bilkis-bano-speaks-on-murderers-are-set-free
Etv Bharat

ಅಹಮದಾಬಾದ್: 2002ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕುಟುಂಬದ ಏಳು ಜನರನ್ನು ಬಲಿ ಪಡೆದಿದ್ದ 11 ಆರೋಪಿಗಳಿಗೆ ಕ್ಷಮಾದಾನ ನೀಡಿ ಜೈಲಿನಿಂದ ಮುಕ್ತಿ ನೀಡಿದ್ದಕ್ಕೆ ಸಂತ್ರಸ್ತೆ ಬಿಲ್ಕಿಸ್​ ಬಾನೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಜೈಲಿನಿಂದ ಹೊರಬಂದಿದ್ದು, ತನ್ನ ಜೀವನಕ್ಕೆ ಭದ್ರತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಮೂರು ದಿನಗಳ ಹಿಂದೆ ಹಿಂದೆ ಅಂದರೆ ಆಗಸ್ಟ್​ 15 ರಂದು ದೀರ್ಘಾವಧಿಯಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗೆ ಸಭ್ಯತೆ, ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಲಾಗಿದೆ. ಇದರಲ್ಲಿ ಗುಜರಾತ್​ ಗಲಭೆಯ ಸಂತ್ರಸ್ತೆ ಬಿಲ್ಕಿಸ್​ ಬಾನೋ ಅವರ ಮೇಲೆ ಅತ್ಯಾಚಾರ ಮಾಡಿದವರೂ ಇದ್ದು ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಲ್ಕಿಸ್​ ಬಾನೋ ಅವರು, 20 ವರ್ಷಗಳ ಹಿಂದೆ ನಡೆದ ಕ್ರೂರ ಘಟನೆ ನನ್ನನ್ನು ಇನ್ನೂ ಹಿಂಸಿಸುತ್ತಿದೆ. ಕುಟುಂಬ ಕಳೆದುಕೊಂಡ ಆಘಾತದಿಂದ ನಾನು ತತ್ತರಿಸಿದ್ದೇನೆ. ಆದರಿಂದ ನಾನು ನಿಶ್ಚೇಷ್ಟಿತಳಾಗಿದ್ದೇನೆ. ನನ್ನ ಮೇಲೆ ಕ್ರೌರ್ಯ ಮೆರೆದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದು ಆಘಾತ ತಂದಿದೆ ಎಂದು ಹೇಳಿದರು.

ಯಾವುದೇ ಮಹಿಳೆಗೆ ನ್ಯಾಯವು ಈ ರೀತಿ ಕೊನೆಗೊಳ್ಳುವುದು ಸರಿಯಲ್ಲ. ನಮ್ಮ ನೆಲದ ಕಾನೂನುಗಳನ್ನು ನಂಬಿದ್ದೇನೆ. ನನಗಾದ ಆಘಾತವನ್ನು ಮರೆತು ನಿಧಾನವಾಗಿ ಬದುಕಲು ಕಲಿತಿದ್ದೇನೆ. ಇದೀಗ ಅಪರಾಧಿಗಳು ಬಿಡುಗಡೆ ಹೊಂದಿರುವುದು ನನ್ನಲ್ಲಿ ಮತ್ತೆ ಆತಂಕವನ್ನು ಉಂಟು ಮಾಡಿದೆ. ನನ್ನ ಶಾಂತಿ ಕದಡಿದೆ. ಕಾನೂನಿನ ಮೇಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿದೆ ಎಂದು ಹೇಳಿದರು.

ಈ ಆದೇಶ ರದ್ದು ಮಾಡಿ : ಅಂದಿನ ಕ್ರೌರ್ಯದಿಂದ ನಾನು ಇನ್ನೂ ನಿಶ್ಚೇಷ್ಟಿತಳಾಗಿದ್ದೇನೆ. ದಯವಿಟ್ಟು ಸರ್ಕಾರ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ತನ್ನ ಆದೇಶವನ್ನು ವಾಪಸ್​ ಪಡೆಯಬೇಕು. ಅತ್ಯಾಚಾರಿಗಳು, ಕೊಲೆಗಾರರನ್ನು ಬಿಡುಗಡೆಗೊಳಿಸಿದ್ದನ್ನು ರದ್ದು ಮಾಡಬೇಕು ಎಂದು ಅವರು ಕೋರಿದ್ದಾರೆ.

ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನನ್ನ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಯಾರೂ ವಿಚಾರಿಸಲಿಲ್ಲ. ಬಿಡುಗಡೆ ಆದೇಶವನ್ನು ರದ್ದು ಮಾಡಿ, ಭಯವಿಲ್ಲದೇ ಮತ್ತು ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಕಾಪಾಡಿ. ಇದನ್ನು ನನಗೆ ಖಚಿತಪಡಿಸಿ ಎಂದು ಬಿಲ್ಕಿಸ್ ಬಾನೊ ಕೋರಿದರು.

2002 ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ 11 ಜನರು ಸಾಮೂಹಿಕ ಅತ್ಯಾಚಾರ ಮಾಡಿ, ಅವರ ಕುಟುಂಬದ 7 ಜನರನ್ನು ಆಕೆಯ ಎದುರೇ ಹತ್ಯೆ ಮಾಡಿದ್ದರು.

2004 ರಲ್ಲಿ ಇವರ ವಿರುದ್ಧ ಆರೋಪ ಸಾಬೀತಾಗಿ ಬಾಂಬೆ ಹೈಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಸನ್ನಡತೆ ಆಧಾರದ ಮೇಲೆ 20 ವರ್ಷಗಳ ಶಿಕ್ಷೆಯ ಬಳಿಕ 11 ಜನರನ್ನು ಕ್ಷಮಾದಾನ ನೀತಿಯಡಿ ಬಿಡುಗಡೆ ಮಾಡಲಾಗಿದ್ದು, 2 ದಿನಗಳ ಹಿಂದಷ್ಟೇ ಅವರು ಗುಜರಾತ್​ ಜೈಲಿನಿಂದ ಹೊರಬಂದಿದ್ದಾರೆ.

ಓದಿ: ನಮಾಜ್ ಮಾಡಲು ಬಿಟ್ಟಮೇಲೆ ಗಣಪತಿ ಇಡಲು ಬಿಡಬೇಕು: ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.