ETV Bharat / bharat

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಆರೋಪ: ತನಿಖಾ ತಂಡ ಕಳುಹಿಸಲು ನಿರ್ಧಾರ

author img

By

Published : Mar 3, 2023, 9:07 PM IST

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಆರೋಪ ಪ್ರಕರಣದ ಬಿಹಾರದಿಂದ ಅಧಿಕಾರಿಗಳ ತನಿಖಾ ತಂಡ ಕಳುಹಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧಾರ ಕೈಗೊಂಡಿದ್ದಾರೆ.

bihar-team-will-go-tamil-nadu-over-alleged-assault-on-migrant-labourers
ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಆರೋಪ: ತನಿಖಾ ತಂಡ ಕಳುಹಿಸಲು ನಿರ್ಧಾರ

ಪಾಟ್ನಾ (ಬಿಹಾರ): ತಮಿಳುನಾಡಿನಲ್ಲಿ ಬಿಹಾರ ಮೂಲದ ಕಾರ್ಮಿಕರಿಗೆ ಥಳಿಸಿದ ಪ್ರಕರಣದಲ್ಲಿ ಬಿಹಾರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ತನಿಖೆ ನಡೆಸಲು ತಮಿಳುನಾಡಿಗೆ ತಂಡವನ್ನು ಕಳುಹಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿಯ ಒತ್ತಡದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಹಾರದಿಂದ ವಲಸೆ ಹೋಗಿರುವ ಕಾರ್ಮಿಕರಿಗೆ ತಮಿಳುನಾಡಿನಲ್ಲಿ ಥಳಿಸಿ, ಹತ್ಯೆ ಮಾಡಲಾಗಿದೆ ಎನ್ನುವ ವಿಡಿಯೋವೊಂದು ಹರಿದಾಡುತ್ತಿದೆ. ಆದರೆ, ಈಗಾಗಲೇ ತಮಿಳುನಾಡು ಪೊಲೀಸರು ಈ ಬಗ್ಗೆ ಹೇಳಿಕೆ ನೀಡಿ, ಬಿಹಾರದ ಕಾರ್ಮಿಕರ ಮೇಲೆ ಥಳಿಸಲಾಗಿದೆ ಎಂಬುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋ ನಕಲಿ ಎಂದು ಪೊಲೀಸರು: ಮತ್ತೊಂದೆಡೆ, ತಮಿಳುನಾಡಿನಲ್ಲಿ ನೆಲೆಸಿರುವ ಬಿಹಾರದ ಜನರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬಿಹಾರ ಪೊಲೀಸರು ಕೂಡ ಹೇಳಿಕೆ ನೀಡಿದ್ದಾರೆ. ಬಿಹಾರಿ ಕಾರ್ಮಿಕರನ್ನು ಥಳಿಸಿರುವ ಕುರಿತು ಹೊರ ಬರುತ್ತಿರುವ ವಿಡಿಯೋ ನಕಲಿಯಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ತಮಿಳುನಾಡು ಡಿಜಿಪಿ ಜೊತೆ ಬಿಹಾರದ ಡಿಜಿಪಿ ಮಾತನಾಡಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಸಹ ಪಡೆದಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ: ಇದಾದ ಬಳಿಕ ಶುಕ್ರವಾರ ಬಿಹಾರದ ವಿಧಾನಸಭೆಯಲ್ಲಿ ಬಿಜೆಪಿ ಕಾರ್ಮಿಕರ ಕುರಿತ ಈ ವಿಷಯವನ್ನು ಪ್ರಸ್ತಾಪಿಸಿತು. ಜೊತೆಗೆ ಈ ಘಟನೆ ಬಗ್ಗೆ ಬಿಹಾರ ಪೊಲೀಸರ ಹೇಳಿಕೆ ಸುಳ್ಳು ಎಂದು ಬಿಜೆಪಿ ಆರೋಪಿಸಿತು. ಅಲ್ಲದೇ, ಈ ಬಗ್ಗೆ ತಮಿಳುನಾಡು ಸರ್ಕಾರ ತನಿಖಾ ತಂಡ ರಚಿಸಿದೆ. ತಮ್ಮ ಹೇಳಿಕೆಗಳು ಸುಳ್ಳಾಗಿದ್ದರೆ, ಕ್ಷಮೆಯಾಚಿಸಲು ಸಿದ್ಧ ಎಂದು ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಚೌಧರಿ ಹೇಳಿದರು.

ತೇಜಸ್ವಿ ಯಾದವ್‌ಗೆ ನೇರ ಸವಾಲು: ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ತಮಿಳುನಾಡು ಪೊಲೀಸರ ಹೇಳಿಕೆ ಉಲ್ಲೇಖಿಸಿ ಬಿಹಾರಿ ಕಾರ್ಮಿಕರನ್ನು ಥಳಿಸುತ್ತಿದ್ದಾರೆ ಎಂಬುವುದು ಸುಳ್ಳು ಸುದ್ದಿ. ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟೀಕಿಸಿದರು. ಆಗ ಬಿಜೆಪಿ ಸದಸ್ಯರು, ಈ ಬಗ್ಗೆ ತನಿಖೆಗೆ ತಂಡವನ್ನು ಕಳುಹಿಸುವಂತೆ ತೇಜಸ್ವಿ ಯಾದವ್‌ಗೆ ನೇರ ಸವಾಲು ಎಸೆದರು.

ಸಿಎಂ ನಿತೀಶ್ ಭೇಟಿಯಾದ ಬಿಜೆಪಿ ನಾಯಕರು: ಇದಾದ ನಂತರ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದರು. ಬಿಹಾರಿ ಕಾರ್ಮಿಕರನ್ನು ಹೊಡೆದು ಕೊಲೆ ಮಾಡಿರುವ ಬಗ್ಗೆ ತನಿಖೆ ನಡೆಸಲು ತಮಿಳುನಾಡಿಗೆ ತಂಡವನ್ನು ಕಳುಹಿಸುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಸಿಎಂ, ಡಿಜಿಪಿಗೆ ಕರೆ ಮಾಡಿ ಕೂಡಲೇ ತಮಿಳುನಾಡಿಗೆ ತಂಡ ಕಳುಹಿಸುವಂತೆ ಸೂಚನೆ ನೀಡಿದರು ಎಂದು ವಿಜಯ್ ಸಿನ್ಹಾ ತಿಳಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ತಮಿಳುನಾಡಿಗೆ ನಾಳೆ ಅಧಿಕಾರಿಗಳ ತಂಡ ಕಳುಹಿಸಬೇಕು ಎಂದು ಸೂಚಿಸಿದ್ದಾರೆ. ಇದೇ ವೇಳೆ ತಮಿಳುನಾಡಿನಿಂದ ಬಿಹಾರಕ್ಕೆ ಬರಲು ಬಯಸುವ ಎಲ್ಲರನ್ನೂ ವಾಪಸ್ ಕರೆತರಲಾಗುವುದು ಎಂದು ಸಿಎಂ ನಿತೀಶ್ ಭರವಸೆ ನೀಡಿದ್ದಾರೆ ಎಂದು ವಿಜಯ್ ಸಿನ್ಹಾ ಮಾಹಿತಿ ನೀಡಿದರು. ಮತ್ತೊಂದೆಡೆ, ತಮಿಳುನಾಡಿನಲ್ಲಿ ಬಿಹಾರಿಗಳ ಮೇಲಿನ ದೌರ್ಜನ್ಯದ ಬಗ್ಗೆ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಕಳವಳ ವ್ಯಕ್ತಪಡಿಸಿ, ಸಿಎಂಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ವಿಧಾನಸೌಧವೇ ಕೋರ್ಟ್, ಸ್ಪೀಕರೇ ಜಡ್ಜ್:​ ಆರು ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.