ಬಿಹಾರದ ಕೂಲಿ ಕಾರ್ಮಿಕನಿಗೆ ಬಂತು ₹1.29 ಕೋಟಿ ವಿದ್ಯುತ್​ ಬಿಲ್​!

author img

By ETV Bharat Karnataka Desk

Published : Jan 18, 2024, 10:37 PM IST

ವಿದ್ಯುತ್​ ಬಿಲ್

ಚಿಕ್ಕ ಮನೆಯಲ್ಲಿ ದಿನದ ಕೂಲಿ ಮಾಡಿಕೊಂಡು ತಿನ್ನುವ ಕಾರ್ಮಿಕನಿಗೆ ಬರೋಬ್ಬರಿ 1.29 ಕೋಟಿ ರೂಪಾಯಿ ವಿದ್ಯುತ್​ ಬಿಲ್​ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ.

ಮುಜಾಫರ್​ಪುರ (ಬಿಹಾರ) : ಇಲ್ಲಿನ ಮುಜಾಫರ್​ಪುರದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿಯ ಕರಾಮತ್ತಿಗೆ ಕೂಲಿ ಕಾರ್ಮಿಕನೊಬ್ಬ ಬೆಚ್ಚಿ ಬಿದ್ದಿದ್ದಾರೆ. ಪ್ರತಿ ತಿಂಗಳಿನಂತೆ ಮನೆಗೆ ವಿದ್ಯುತ್​ ಬಿಲ್​ ಬಂದಿದೆ. ಅದರಲ್ಲಿದ್ದ ಮೊತ್ತ ಕಂಡು ಹೌಹಾರಿದ್ದಾರೆ. ಒಂದೇ ತಿಂಗಳಿಗೆ ಬಂದಿದ್ದು 1 ಕೋಟಿ 29 ಲಕ್ಷ!

ವಿಶುಂಪುರ ಚಂದ್ ಪ್ರದೇಶದ ನಿವಾಸಿ ಜಮೀರ್ ಅನ್ಸಾರಿ ಎಂಬುವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಚಿಕ್ಕ ಮನೆಯಲ್ಲಿ ಕುಟುಂಬದ ಜೊತೆ ಇದ್ದಾರೆ. ಈಚೆಗೆ ಅವರಿಗೆ ವಿದ್ಯುತ್​ ಇಲಾಖೆಯ ಸಿಬ್ಬಂದಿ ಬಂದು ಕರೆಂಟ್​​ ಬಿಲ್​ ನೀಡಿದ್ದಾರೆ. ಅದರಲ್ಲಿ 1 ಕೋಟಿ 29 ಲಕ್ಷ 846 ರೂಪಾಯಿ ಕಟ್ಟಬೇಕು ಎಂದು ನಮೂದಿಸಲಾಗಿದೆ. ಇದನ್ನು ಕಂಡು ಬೆಚ್ಚಿದ ಅನ್ಸಾರಿ, ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ವಿದ್ಯುತ್​ ಬಿಲ್​ ಬಗ್ಗೆ ಜಮೀರ್ ಅವರು ಗ್ರಾಹಕರ ವೇದಿಕೆಗೂ ದೂರು ನೀಡಿದ್ದಾರೆ. ಅಧ್ಯಕ್ಷ ಅಜಯ್ ಕುಮಾರ್ ಪಾಂಡೆ ಅವರು ಈ ಬಗ್ಗೆ ತನಿಖೆ ನಡೆಸಲು ವಿದ್ಯುತ್​ ಇಲಾಖೆಯ ಪೂರ್ವ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರವಣ್ ಕುಮಾರ್ ಠಾಕೂರ್ ಅವರಿಗೆ ಸೂಚಿಸಿದ್ದಾರೆ. ಈ ಕುರಿತು ಪರಿಶೀಲಿಸಿದಾಗ ಬಿಲ್ ತಪ್ಪಾಗಿ ಬಂದಿದೆ ಎಂದು ತಿಳಿದುಬಂದಿದೆ.

ಭಾರೀ ವಿದ್ಯುತ್ ಬಿಲ್ ಕುರಿತು ಸಹಾಯಕ ಎಲೆಕ್ಟ್ರಿಕಲ್ ಇಂಜಿನಿಯರ್ ಹಾಗೂ ಜೆಇಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯಲ್ಲಿ ಅವ್ಯವಹಾರ ಬೆಳಕಿಗೆ ಬಂದಿದ್ದು, ನಂತರ 1 ಕೋಟಿ 29 ಲಕ್ಷ 846 ರೂ.ಗಳ ಬಿಲ್ಲಿನ ಬದಲಾಗಿ, 33 ಸಾವಿರದ 378 ರೂಪಾಯಿ ಇರುವ ಮತ್ತೊಂದು ಬಿಲ್​ ಅನ್ನು ಜಮೀರ್​ ಅವರಿಗೆ ನೀಡಲಾಗಿದೆ.

ಸ್ಮಾರ್ಟ್​ ಮೀಟರ್​ನಿಂದ ಸಮಸ್ಯೆ: ಈಚೆಗೆ ಜಮೀರ್​ ಅವರ ಮನೆಯಲ್ಲಿದ್ದ ಸಾಮಾನ್ಯ ಮೀಟರ್ ಅನ್ನು ತೆಗೆದು ನಂತರ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಡಿಸೆಂಬರ್ 2022 ರಿಂದ ಫೆಬ್ರವರಿ 2023 ರವರೆಗೆ 42 ಯೂನಿಟ್‌ಗಳಷ್ಟು ಖರ್ಚು ಮಾಡಲಾಗಿದೆ ಎಂದು ಗ್ರಾಹಕ ಜಮೀರ್​ ಹೇಳುತ್ತಾರೆ. ಆದರೆ, ಮಾರ್ಚ್‌ನಿಂದ ಜೂನ್‌ವರೆಗೆ 331 ಯೂನಿಟ್‌ಗಳ ಬಳಕೆ ಮಾಡಲಾಗಿದೆ ಎಂದು ಸಿಬ್ಬಂದಿ ಬಿಲ್ ನೀಡಿದ್ದಾರೆ. ಜುಲೈನಲ್ಲಿ 327 ಯೂನಿಟ್, ಆಗಸ್ಟ್​ನಲ್ಲಿ 64 ಮತ್ತು ಸೆಪ್ಟೆಂಬರ್​ನಲ್ಲಿ 67 ಯೂನಿಟ್ ವಿದ್ಯುತ್ ಬಳಕೆ ಮಾಡಿದ ಬಗ್ಗೆ ತೋರಿಸಲಾಗಿದೆ.

ಹೊಸ ಸ್ಮಾರ್ಟ್ ಮೀಟರ್​ನಲ್ಲಿ ಡಿಸೆಂಬರ್ ತಿಂಗಳಲ್ಲಿ 36,45,488 ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ತೋರಿಸಲಾಗಿದೆ. ಇದಕ್ಕಾಗಿ 1 ಕೋಟಿ 29 ಲಕ್ಷ 846 ರೂ. ಬಿಲ್ ನೀಡಲಾಗಿದೆ. ಆದರೆ, ನಮ್ಮ ಮನೆಯಲ್ಲಿ ಒಂದೇ ಬಲ್ಬ್ ಉರಿಸಲಾಗುತ್ತದೆ. ಬೇಸಿಗೆಯಲ್ಲಿ ತುಸು ಹೆಚ್ಚು ಬಳಕೆ ಮಾಡುತ್ತೇವೆ ಎನ್ನುತ್ತಾರೆ ಗ್ರಾಹಕ ಜಮೀರ್ ಅನ್ಸಾರಿ.

ಸ್ಮಾರ್ಟ್ ಮೀಟರ್ ಏಜೆನ್ಸಿಗೆ ನೋಟಿಸ್​: ಪೂರ್ವ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರವಣ್ ಕುಮಾರ್ ಠಾಕೂರ್ ಅವರು ಈ ಬಗ್ಗೆ ತನಿಖೆಗೆ ಸೂಚಿಸಿದ್ದಲ್ಲದೇ, ಸ್ಮಾರ್ಟ್​ ಮೀಟರ್ ಅಳವಡಿಸಿ ಏಜೆನ್ಸಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಸದ್ಯಕ್ಕೆ ಹಿಂದಿನ ಬಾಕಿ ಸೇರಿದಂತೆ 33,378 ರೂ.ಗಳ ಬಿಲ್ ಅನ್ನು ಗ್ರಾಹಕರು ಪಾವತಿಸಲು ಬಿಲ್​ ನೀಡಲಾಗಿದೆ. ಸಂಪೂರ್ಣ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 10 ಯೂನಿಟ್ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.