ETV Bharat / bharat

ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ: ಪೊಲೀಸ್​ ಲಾಠಿ ಜಾರ್ಜ್​, ಬಿಜೆಪಿ ಕಾರ್ಯಕರ್ತ ಸಾವು

author img

By

Published : Jul 13, 2023, 3:47 PM IST

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ವೇಳೆ ಪೊಲೀಸರು ಲಾಠಿ ಜಾರ್ಜ್​ ನಡೆಸಿದ್ದ, ಇದರಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದಾನೆ.

Bihar BJP Worker killed as police lathicharge on protesters in Patna
ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ: ಪೊಲೀಸ್​ ಲಾಠಿ ಜಾರ್ಜ್​, ಓರ್ವ ಬಿಜೆಪಿ ಕಾರ್ಯಕರ್ತ ಸಾವು

ಪಾಟ್ನಾ (ಬಿಹಾರ): ನಿತೀಶ್​ ಕುಮಾರ್​ ನೇತೃತ್ವದ ಬಿಹಾರ ಸರ್ಕಾರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಗುರುವಾರ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದೆ. ವಿಧಾನಸೌಧದ ಒಳಗೆ ಹಾಗೂ ಹೊರಗಡೆ ಎರಡೂ ಕಡೆಗಳಲ್ಲಿ ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಪ್ರತಿಭಟನಾ ಮೆರವಣಿಗೆ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಮೃತಪಟ್ಟಿದ್ದಾನೆ ಎಂದು ರಾಜ್ಯಸಭಾ ಸದಸ್ಯ ಸುಶೀಲ್​ ಕುಮಾರ್​ ಮೋದಿ ಹೇಳಿದ್ದಾರೆ.

ಬಿಹಾರ ವಿಧಾನಸಭೆಯ ಅಧಿವೇಶನದ ನಡೆಯುತ್ತಿದೆ. ನಾಲ್ಕನೇ ದಿನವಾದ ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾದ ನಿತ್ಯಾನಂದ ರೈ, ಅಶ್ವಿನಿ ಕುಮಾರ್ ಚೌಬೆ, ರಾಜೀವ್ ಪ್ರತಾಪ್ ರೂಡಿ, ಸುಶೀಲ್ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ಮುಂತಾದ ನಾಯಕರು ಐತಿಹಾಸಿಕ ಗಾಂಧಿ ಮೈದಾನದಿಂದ ಬಿಹಾರ ವಿಧಾನಸೌಧದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮತ್ತೊಂಡೆದೆ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ನೇತೃತ್ವದಲ್ಲಿ ಸದನದ ಬಿಜೆಪಿ ಸದಸ್ಯರು ಒಳಗೆ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ನಡೆದ ಶಿಕ್ಷಕರ ನೇಮಕಾತಿ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧದ ಆರೋಪಗಳು ಹಾಗೂ 10 ಲಕ್ಷ ಉದ್ಯೋಗ ಸೃಷ್ಟಿ ಬಗ್ಗೆ ಸರ್ಕಾರ ಸುಳ್ಳು ಹೇಳಿದೆ ಎಂದು ಆರೋಪಿಸಿ ಕೇಸರಿ ಪಕ್ಷದ ನಾಯಕರು ಹೋರಾಟ ಕೈಗೊಂಡಿದ್ದಾರೆ.

ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್​ ಅನ್ನು ಪೊಲೀಸರು ಮಾಡಿದ್ದಾರೆ. 300 ವಿಶೇಷ ಕಮಾಂಡೋಗಳು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ ತಲುಪದಂತೆ ದ.ಕ.ಬಂಗಲೆ ಚೌಕ್​ನಲ್ಲಿ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದಾರೆ. ಇದೇ ವೇಳೆ, ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಜಲಫಿರಂಗಿಯನ್ನು ಪ್ರಯೋಗಿಸಿದ್ದಾರೆ. ಆದರೂ, ಕಾರ್ಯಕರ್ತರು ನಿಲ್ಲದಿದ್ದಾಗ ಪೊಲೀಸರು ಬಲಪ್ರಯೋಗ ಮಾಡಿ, ಲಾಠಿ ಪ್ರಹಾರ ನಡೆಸಿದ್ದಾರೆ.

ಈ ಲಾಠಿ ಪ್ರಹಾರದಲ್ಲಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಸೇರಿದಂತೆ ಹಲವು ನಾಯಕರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿವೆ. ಅಲ್ಲದೇ, ಸ್ವಲ್ಪದರಲ್ಲೇ ಗುಂಪಿನಲ್ಲಿದ್ದ ಕಾರ್ಯಕರ್ತ ವಿಜಯ್ ಕುಮಾರ್ ಸಿಂಗ್ ಎಂಬುವವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್​ ಮೋದಿ ಟ್ವೀಟ್​ ಮಾಡಿದ್ದು, 'ಪಾಟ್ನಾದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದೇವೆ. ಜೆಹಾನಾಬಾದ್ ಜಿಲ್ಲೆಯ ಜಿಎಸ್ ವಿಜಯ್ ಕುಮಾರ್ ಸಿಂಗ್ ಕ್ರೂರ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಸಾವನ್ನಪ್ಪಿದ್ದಾರೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Woman slaps MLA: ಪ್ರವಾಹ ಪೀಡಿತ ಪ್ರದೇಶ ಪರಿಶೀಲಿಸುತ್ತಿದ್ದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.