ETV Bharat / bharat

ಇಂದಿನಿಂದ ಶಬರಿಮಲೆ ದೇಗುಲ ಪ್ರವೇಶಕ್ಕೆ ಮುಕ್ತ, ಆದರೆ ಮಹಿಳೆಯರಿಗೆ ಭದ್ರತೆ ಇದೆಯೇ?

author img

By

Published : Nov 16, 2019, 12:29 PM IST

Updated : Nov 16, 2019, 2:26 PM IST

ಎರಡು ದಿನಗಳ ಹಿಂದೆಷ್ಟೇ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಸಂಬಂಧದ ವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಈ ನಡುವೆ ಮಂಡಲ ಪೂಜೆ ನಿಮಿತ್ತ ಶಬರಿಮಲೆ ದೇಗುಲವನ್ನು ಇಂದು ತೆರೆಯಲಾಗುತ್ತಿದ್ದು, ಮಹಿಳೆಯರ ಪ್ರವೇಶಕ್ಕೂ ಅನುಮತಿ ಇದೆ. ಆದರೆ ಮಹಿಳೆಯರಿಗೆ ಅಲ್ಲಿನ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ಒದಗಿಸಿದೆಯೇ ಎಂಬುದು ಈಗಿನ ಪ್ರಶ್ನೆ.

ಶಬರಿಮಲೆ ದೇಗುಲ ಪ್ರವೇಶ ಮುಕ್ತ

ತಿರುವನಂತಪುರಂ: ಮಂಡಲ ಪೂಜೆಯ ನಿಮಿತ್ತ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಇಂದಿನಿಂದ ಯಾತ್ರಾರ್ಥಿಗಳ ಪ್ರವೇಶಕ್ಕೆ ಮುಕ್ತವಾಗಲಿದೆ. ಆದರೆ ಮಹಿಳೆಯರು ದೇಗುಲ ಪ್ರವೇಶಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

2018ರಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನ ಪ್ರಕಾರ, ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಬಹುದಾಗಿದೆ. ಆದ್ರೆ ಎರಡು ದಿನಗಳ ಹಿಂದಷ್ಟೇ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಈ ನಡುವೆ ಮಂಡಲ ಪೂಜೆ ನಿಮಿತ್ತ ಶಬರಿಮಲೆ ದೇಗುಲವನ್ನು ಇಂದು ತೆರೆಯಲಾಗುತ್ತಿದ್ದು, ಮಹಿಳೆಯರ ಪ್ರವೇಶಕ್ಕೂ ಅನುಮತಿ ಇದೆ. ಆದರೆ ಮಹಿಳೆಯರ ಪ್ರವೇಶದ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ.

10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವ ನಡೆಯನ್ನು ತೀವ್ರವಾಗಿ ಟೀಕಿಸುತ್ತಾ ಬಂದಿರುವ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ, ಇದೇ ನವೆಂಬರ್​ 20ರ ಬಳಿಕ ತಾನು ಅಯ್ಯಪ್ಪ ದೇಗುಲಕ್ಕೆ ತೆರಳಿ ದರ್ಶನ ಮಾಡುವುದಾಗಿ ತಿಳಿಸಿದ್ದಾರೆ. ನನಗೆ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಲಿ ಅಥವಾ ಬಿಡಲಿ. ನಾನು ದೇಗುಲ ಪ್ರವೇಶಿಸಿಯೇ ತೀರುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ.

ಶಬರಿಮಲೆ ವಿವಾದದ ಹಿನ್ನೆಲೆ?

1951 ರಲ್ಲೇ ಟ್ರಾವಂಕೂರ್​ ದೇವಸ್ವಂ ಬೋರ್ಡ್​, 10ರಿಂದ 50ರ ವಯೋಮಾನದ ಮಹಿಳೆಯರ ಶಬರಿಮಲೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಇದು ಮಹಿಳೆಯರ ಮುಟ್ಟಿನ ವಯಸ್ಸೆಂಬ ಕಾರಣಕ್ಕೆ ನಿಷೇಧ ಹೇರಲಾಗಿತ್ತು. ಆದರೆ 1965ರಿಂದ ಈ ಅಧಿಸೂಚನೆಯನ್ನು ಕಾನೂಬದ್ಧಗೊಳಿಸಲಾಗಿದ್ದು, 1991ರಲ್ಲಿ ಕೇರಳ ಹೈಕೋರ್ಟ್​ ಈ ನಿರ್ಧಾರವನ್ನೇ ಎತ್ತಿಹಿಡಿದಿತ್ತು.

ಈ ವಿಚಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿ, 2018ರ ಸೆಪ್ಟೆಂಬರ್​ 28ರಂದು ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶವನ್ನು ಮುಕ್ತಗೊಳಿಸಿ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿತು. ಆದರೆ ಈ ತೀರ್ಪು ಇಡೀ ಕೇರಳ ರಾಜ್ಯದಲ್ಲೇ ಕೋಲಾಹಲ ಸೃಷ್ಟಿಸಿತು. ಪರವಾದ ವಾದಕ್ಕಿಂತ ಹೆಚ್ಚು ವಿರೋಧಗಳೇ ಕೇಳಿಬಂದವು. ಸಂಘ ಪರಿವಾರ ಹಾಗೂ ಹಾಗೂ ಹಲವು ಹಿಂದೂ ಸಂಘಟನೆಗಳು ಮುಟ್ಟಿನ ಮಹಿಳೆಯರನ್ನು ದೇಗುಲದ ಪ್ರವೇಶಕ್ಕೆ ನಿರ್ಬಂಧಿಸಿತು.

ಶಬರಿಮಲೆ ದೇಗುಲ

ಸುಪ್ರೀಂಕೋರ್ಟ್​ನ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ, ನಿರ್ಧಿಷ್ಟ ವಯೋಮಾನದ ಮಹಿಳೆಯರನ್ನು ದೇಗುಲದ ಪ್ರವೇಶದಿಂದ ನಿಷೇಧಿಸುವುದು ಹಿಂದುತ್ವದಲ್ಲಿಲ್ಲ. ಬದಲಾಗಿ ಇದು ಧಾರ್ಮಿಕ ಪಿತೃಪ್ರಭುತ್ವದ ನಿಲುವಾಗುತ್ತದೆ ಎಂದು ಪ್ರತಿಪಾದಿಸಿದರು.

ಮಹಿಳಾ ಕಾರ್ಯಕರ್ತರು, ಪತ್ರಕರ್ತರ ಮೇಲೆ ಹಲ್ಲೆ!

ಕಳೆದ ವರ್ಷ ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ 17 ಅಕ್ಟೋಬರ್​ 2018ರಂದು ಮೊದಲ ಬಾರಿಗೆ ಅಯ್ಯಪ್ಪ ದೇಗುಲವನ್ನು ತೆರೆಯಲಾಯಿತು. ನಿಲಕ್ಕಲ್​ ಹಾಗೂ ಪಂಪಾದಲ್ಲಿ ಮಹಿಳೆಯರ ದೇವಸ್ಥಾನ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿತು. ಈ ವೇಳೆ ದೇವಸ್ಥಾನ ಪ್ರವೇಶಿಸಲು ಬಂದ ಹಲವು ಮಹಿಳಾ ಪತ್ರಕರ್ತರು, ಮಹಿಳಾ ಕಾರ್ಯಕರ್ತರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡಡೆಸಿದ್ದಾರೆ ಎಂದು ಹೇಳಲಾಗಿದೆ. ಮಹಿಳಾ ಪತ್ರಕರ್ತರ ಬಳಿ ಇದ್ದ ಕ್ಯಾಮರಾ ಕಿತ್ತುಕೊಂಡು, ಅವರ ವಾಹನಗಳಿಗೂ ಪ್ರತಿಭಟನಾಕಾರರು ಹಾನಿ ಮಾಡಿದ್ದರು.

2018ರ ಸುಪ್ರೀಂ ತೀರ್ಪು ಮರುಪರಿಶೀಲಿಸುವಂತೆ ಕೋರ್ಟ್​ಗೆ ಸಾಕಷ್ಟು ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದೆ ಕೋರ್ಟ್, ಇದೇ ನವೆಂಬರ್​ 14ಕ್ಕೆ ತೀರ್ಪು ಕಾಯ್ದಿರಿಸಿತ್ತು. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯಿ ನೇತೃತ್ವದ ಪಂಚ ನ್ಯಾಯಪೀಠ, ಪೂಜಾ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಕೇವಲ ಹಿಂದೂಗಳ ದೇವಾಲಯಕ್ಕಷ್ಟೇ ಸೀಮಿತವಾಗಿಲ್ಲ. ಇದು ಎಲ್ಲಾ ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೂ ಅನ್ವಯಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.​ ಅಲ್ಲದೇ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿದ ಕೋರ್ಟ್​, ಅರ್ಜಿಯನ್ನು ವಿಸ್ತ್ರತ ಪೀಠಕ್ಕೆ ವರ್ಗಾಯಿಸಿತು.

ವಿವಾದ ವಿಸ್ತೃತ ಪೀಠಕ್ಕೆ:

ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಭಿನ್ನಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ 3:2 ರ ಬಹುಮತದಿಂದ ಸುಪ್ರೀಂಕೋರ್ಟ್ ಮರುಪರಿಶೀಲನಾ ಅರ್ಜಿಗಳನ್ನು ಸಂವಿಧಾನದ ವಿಸ್ತೃತ ಪೀಠಕ್ಕೆ ವರ್ಗಾಯಿಸಿತು. ಹೀಗಾಗಿ 2018ರ ತೀರ್ಪಿನ ಪ್ರಕಾರ ಈ ಬಾರಿಯೂ ದೇಗುಲಕ್ಕೆ ಮಹಿಳೆಯರ ಪ್ರವೇಶ ಮುಂದುವರಿಯಲಿದೆ.

'ಮಹಿಳೆಯರಿಗೆ ಪೊಲೀಸ್​ ರಕ್ಷಣೆಯೇ ಇಲ್ಲ'

ಮೂಲಗಳ ಮೂಲಕ ಪ್ರಕಾರ, ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ಇದ್ದರೂ ಕೇರಳ ಸರ್ಕಾರ ಮಾತ್ರ ಮಹಿಳೆಯರಿಗಾಗಿ ಯಾವುದೇ ಭದ್ರತೆಯ ವ್ಯವಸ್ಥೆ ಮಾಡಿಲ್ಲ. ದೇಗುಲ ಪ್ರವೇಶಿಸುವ ಮಹಿಳಾ ಕಾರ್ಯಕರ್ತರು ಹಾಗೂ ಪತ್ರಕರ್ತರಿಗೆ ಪೊಲೀಸ್​ ಭದ್ರತೆ ವ್ಯವಸ್ಥೆ ಮಾಡದ ಸಿಎಂ ಪಿಣರಾಯಿ ವಿಜಯನ್​ ನೇತೃತ್ವದ ಸರ್ಕಾರ, ಅವರನ್ನು ದೇಗುಲದಿಂದ ಹೊರಗಿಡಲು ನಿರ್ಧರಿಸಿದೆ. ಈ ಬಗ್ಗೆ ಖಡಕ್​ 'ಲಾ ಆ್ಯಂಡ್​ ಆರ್ಡರ್'​ ಇರಲಿದೆ ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಲ್ಲದರ ನಡುವೆ ದೇಗುಲ ಪ್ರವೇಶಕ್ಕೆ ಸಿದ್ಧತೆ

ಇಷ್ಟೆಲ್ಲಾ ಗೊಂದಲಗಳ ನಡುವೆ ಕೇರಳ ಸರ್ಕಾರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದು, ಭದ್ರತೆಗಾಗಿ ಒಟ್ಟು 10,017 ಪೊಲೀಸ್​ ಸಿಬ್ಬಂದಿ ನೇಮಕ ಮಾಡಿದೆ. ಅಲ್ಲದೇ ಪತನಮತಿಟ್ಟ ಜಿಲ್ಲಾಧಿಕಾರಿ ಹೆಚ್ಚುವರಿ 800 ಮೆಡಿಕಲ್​ ಸಿಬ್ಬಂದಿಯನ್ನೂ ನೇಮಿಸಿದ್ದಾರೆ. ಇವೆಲ್ಲದರ ನಡುವೆ ಮಹಿಳೆಯರ ರಕ್ಷಣೆಯ ಹೊಣೆಯನ್ನು ಹೊರುವವರು ಯಾರು? ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

Intro:Body:

shabarimala


Conclusion:
Last Updated : Nov 16, 2019, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.