ETV Bharat / bharat

ಬೆಳೆ ವಿಮೆ: ರೈತರ ಕೈ ಹಿಡಿಯಬೇಕಿದೆ ರಾಜ್ಯ ಸರ್ಕಾರಗಳು

author img

By

Published : Mar 19, 2020, 12:24 PM IST

ಬೆಳೆ ವಿಮಾ ಯೋಜನೆಗೆ ಮಾಡಲಾದ ಇತ್ತೀಚಿನ ಬದಲಾವಣೆಗಳ ದೆಸೆಯಿಂದ ರಾಜ್ಯಗಳು ದೊಡ್ಡ ಆರ್ಥಿಕ ಹೊರೆ ಹಂಚಿಕೊಳ್ಳಲು ಅಣಿ ಆಗಬೇಕಿದೆ. ಅದು ಸಾಧ್ಯವಾಗದೇ ಹೋದರೆ ಸುಸ್ಥಿರತೆಯ ಸಮಸ್ಯೆಗಳು ಎದುರಾಗಲಿವೆ.

crop insurance plan
ಬೆಳೆ ವಿಮೆ

ಬೆಳೆ ವಿಮಾ ಯೋಜನೆಗೆ ಮಾಡಲಾದ ಇತ್ತೀಚಿನ ಬದಲಾವಣೆಗಳ ದೆಸೆಯಿಂದ ರಾಜ್ಯಗಳು ದೊಡ್ಡ ಆರ್ಥಿಕ ಹೊರೆ ಹಂಚಿಕೊಳ್ಳಲು ಅಣಿ ಆಗಬೇಕಿದೆ. ಅದು ಸಾಧ್ಯವಾಗದೇ ಹೋದರೆ ಸುಸ್ಥಿರತೆಯ ಸಮಸ್ಯೆಗಳು ಎದುರಾಗಲಿವೆ.

ಕೃಷಿ ವಿಮಾ ಯೋಜನೆಯಲ್ಲಿನ ಕಂದರಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು (ಪಿಎಂಎಫ್‌ಬಿವೈ) ರೈತರಿಗೆ ಕಡ್ಡಾಯ ಮಾಡದೇ ಐಚ್ಛಿಕವಾಗಿ ಇಡುವ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು 2016 ರ ಫೆಬ್ರವರಿಯಲ್ಲಿ ಪ್ರಾರಂಭಿಸಿದ ಪಿಎಂಎಫ್‌ಬಿವೈ ಯೋಜನೆಯ ಅಡಿ ಸಾಲಗಾರರಾದ ರೈತರು ವಿಮೆ ಪಡೆಯುವುದು ಕಡ್ಡಾಯ ಆಗಿತ್ತು. ಪ್ರಸ್ತುತ, ಒಟ್ಟು ಶೇಕಡಾ 58% ರಷ್ಟು ರೈತರು ಸಾಲಗಾರರಾಗಿದ್ದಾರೆ. ಹೆಚ್ಚು ಚರ್ಚೆಗೆ ಒಳಗಾದ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಯನ್ನು ಎನ್​ಡಿಎ ಸರ್ಕಾರ 2016 ರ ಮುಂಗಾರು ಅವಧಿಯಲ್ಲಿ ಪ್ರಾರಂಭಿಸಿದ ಇದು, ರೈತಸ್ನೇಹಿ ಆಗಲು ಹಲವಾರು ಬದಲಾವಣೆಗಳನ್ನು ಕಂಡಿದೆ.

ಕಳೆದ ಹದಿನೈದು ದಿನಗಳ ಹಿಂದೆ (ಫೆಬ್ರವರಿ 19, 2020) ಪಿಎಂಎಫ್‌ಬಿವೈನಲ್ಲಿ ಹಲವು ಬದಲಾವಣೆಗಳನ್ನು ಘೋಷಣೆ ಮಾಡುವ ಮೂಲಕ ಕೇಂದ್ರ ಸಂಪುಟ ಅಂತಹ ಮತ್ತೊಂದು ಯತ್ನಕ್ಕೆ ಕೈ ಹಾಕಿತು. ಅದರಂತೆ ಎರಡು ಪ್ರಮುಖ ಬದಲಾವಣೆಗಳು ಆಗಿವೆ. ಮೊದಲನೆಯದು ಸಾಲಗಾರರಲ್ಲದ ರೈತರಿಗೆ ಈ ಯೋಜನೆಯನ್ನು ಸ್ವಯಂಪ್ರೇರಿತವಾಗಿ ಮಾಡುವ ನಿರ್ಧಾರ. ಎರಡನೆಯದಾಗಿ, ನೀರಾವರಿ ಅಲ್ಲದ ಪ್ರದೇಶಗಳು ಮತ್ತು ಬೆಳೆಗಳಿಗೆ ಪ್ರೀಮಿಯಂ ಸಬ್ಸಿಡಿಯ ಮೇಲೆ ಶೇ. 30% ಮತ್ತು ನೀರಾವರಿ ಪ್ರದೇಶಗಳು ಹಾಗೂ ಬೆಳೆಗಳಿಗೆ ಶೇಕಡಾ 25 % ಮಿತಿ ವಿಧಿಸುತ್ತದೆ. ಒಟ್ಟಾರೆ ಈ ಎರಡೂ ನಿರ್ಧಾರಗಳು ಯೋಜನೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಮತ್ತು ಮುಂಬರುವ ದಿನಗಳಲ್ಲಿ ಇದರ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ.

ಪ್ರಮುಖ ವಿಮಾ ಕಂಪನಿಗಳ ತಜ್ಞರು ಹೇಳುವಂತೆ, ಸಾಲಗಾರರಲ್ಲದ ರೈತರಿಗೆ ಪಿಎಂಎಫ್‌ಬಿವೈ ಸ್ವಯಂಪ್ರೇರಿತ ಮಾಡಿರುವುದರಿಂದ (ಇದು ಈಗಾಗಲೇ ಸಾಲಗಾರರಿಗೆ ಸ್ವಯಂಪ್ರೇರಿತ ಆಗಿದೆ), ಈ ಯೋಜನೆ ಆರಿಸಿಕೊಳ್ಳುವ ರೈತರ ಸಂಖ್ಯೆಯಲ್ಲಿ ಇಳಿಮುಖ ಆಗಲಿದೆ. ಏಕೆಂದರೆ ತಮ್ಮ ಸ್ಥಿತಿ ತೀರಾ ಅಪಾಯಕಾರಿ ಆಗಿದೆ ಎಂದು ಗ್ರಹಿಸಿದವರು ಮಾತ್ರ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಕೆಲವೇ ದಿನಗಳಲ್ಲಿ ಈ ನಿಬಂಧನೆ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಮೊಟಕುಗೊಳಿಸಲು ಕಾರಣ ಆಗಬಹುದು. ಏಕೆಂದರೆ ಅಲ್ಪಾವಧಿಯಲ್ಲಿ ಕೃಷಿ ಸಚಿವಾಲಯದ (ಕೇಂದ್ರ ಸರ್ಕಾರ) ಉನ್ನತ ಸರ್ಕಾರಿ ಅಧಿಕಾರಿಗಳು ಪಿಎಂಎಫ್‌ಬಿವೈ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಶೇಕಡಾ 10-20 ರಷ್ಟು ಕುಸಿತ ಕಂಡಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ, ಹೆಚ್ಚಿನ ಕಾಳಜಿ ಮತ್ತು ಪ್ರಚಾರದ ಹೊರತಾಗಿಯೂ 2016 ರಿಂದ ಈವರೆಗೆ ಶೇ. 22 ರಿಂದ ಶೇ. 30 ಕ್ಕೆ ಏರಿಕೆ ಆಗಿದೆ. ಇದಲ್ಲದೆ, 2020ರ ಮುಂಗಾರಿನಿಂದ ಈ ಯೋಜನೆಯ ಅಡಿಯಲ್ಲಿ ದಾಖಲಾಗುವ ಒಟ್ಟು ರೈತರ ಸಂಖ್ಯೆಯೂ ಇಳಿಮುಖ ಆಗಬಹುದು. ಈಗಾಗಲೇ ದತ್ತಾಂಶಗಳು ಹೇಳುವಂತೆ 2016 ರ ಮುಂಗಾರಿನಿಂದ 2018 ರ ನಡುವೆ ಈ ಯೋಜನೆಗೆ ದಾಖಲಾದ ಒಟ್ಟು ರೈತರ ಸಂಖ್ಯೆ ಸುಮಾರು ಶೇ. 14 ರಷ್ಟು. ಅಂದರೆ 40.4 ದಶಲಕ್ಷದಿಂದ 34.80 ದಶ ಲಕ್ಷದಷ್ಟು ಕಡಿಮೆ ಆಗಿದೆ. ಅಧಿಕಾರಿಗಳ ಪ್ರಕಾರ ವಿವಿಧ ರಾಜ್ಯ ಸರ್ಕಾರಗಳು ಘೋಷಿಸಿದ ಸಾಲ ಮನ್ನಾ ಮತ್ತು ಕಡ್ಡಾಯ ಆಧಾರ್ - ಸಂಪರ್ಕದಿಂದ ನಕಲಿ ಫಲಾನುಭವಿಗಳು ದೂರ ಆಗಿದ್ದಾರೆ. ಪರಿಣಾಮ ಈ ದಾಖಲಾತಿಯಲ್ಲಿ ಬಹುಮಟ್ಟಿಗೆ ಕುಸಿತ ಆಗಿದೆ.

ರೈತರು ಕಡಿಮೆ ಪ್ರಮಾಣದಲ್ಲಿ ಈ ಯೋಜನೆಗೆ ಸೇರ್ಪಡೆಗೊಂಡ ಪರಿಣಾಮ, ಹಿಂಗಾರು ಋತುವಿನಲ್ಲಿ ಪಿಎಂಎಫ್‌ಬಿವೈ ಅಡಿಯಲ್ಲಿನ ವಾಸ್ತವಿಕ ಪ್ರೀಮಿಯಂ ಕಳೆದ ಕೆಲವು ವರ್ಷಗಳಲ್ಲಿ ಸ್ಥಿರವಾಗಿ ಇದ್ದು, ಅಂದರೆ ಶೇಕಡಾ 12 ರಷ್ಟು ಇದ್ದು ಮತ್ತು ಮುಂಗಾರು ಋತುವಿನ ಬೆಳೆಗಳಿಗೆ ಶೇ. 14 ಕ್ಕೆ ಏರಿಕೆ ಆಗಿದೆ. ಈಗ, ಇನ್ನೂ ಕಡಿಮೆ ರೈತರು ಈ ಯೋಜನೆ ಆರಿಸಿಕೊಂಡರೆ, ವಾಸ್ತವಿಕ ಪ್ರೀಮಿಯಂ ಮತ್ತಷ್ಟು ಹೆಚ್ಚಳ ಆಗುತ್ತದೆ. ಸಬ್ಸಿಡಿ ಮೇಲಿನ ಕೇಂದ್ರದ ಮಿತಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಅಡಿಯಲ್ಲಿ, ಯಾವುದೇ ಬೆಳೆ ಅಥವಾ ಪ್ರದೇಶದ ವಾಸ್ತವಿಕ ಪ್ರೀಮಿಯಂ ನೀರಾವರಿ ಪರಿಸ್ಥಿತಿಗಳ ಅಡಿಯಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಮತ್ತು ನೀರಾವರಿ ಪರಿಸ್ಥಿತಿಗಳಲ್ಲಿ ಶೇ 25ಕ್ಕಿಂತ ಹೆಚ್ಚು ಇದ್ದರೆ, ಸಬ್ಸಿಡಿ ಹೊರೆಯ ಕೇಂದ್ರದ ಪಾಲು ಆ ಮಟ್ಟಕ್ಕೆ ಮಾತ್ರ ಸೀಮಿತವಾಗಿ ಇರುತ್ತದೆ.

ಇನ್ನಷ್ಟು ವಿವರವಾಗಿ ಹೇಳುವುದಾದರೆ, ನೀರಾವರಿ ಇಲ್ಲದ ಪ್ರದೇಶದಲ್ಲಿ ಬೆಳೆಯ ವಾಸ್ತವಿಕ ಪ್ರೀಮಿಯಂ ಶೇಕಡಾ 40 ಕ್ಕೆ ಬರುತ್ತದೆ ಎಂದು ಭಾವಿಸೋಣ. ಇದರಲ್ಲಿ, ರೈತರ ಪಾಲನ್ನು ಶೇಕಡಾ 2 ಕ್ಕೆ ಅಂತಿಮಗೊಳಿಸಲಾಗುತ್ತದೆ ಮತ್ತು ಉಳಿದ 38 ಶೇಕಡಾ ಸಬ್ಸಿಡಿಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ 50:50 ಅನುಪಾತದಲ್ಲಿ ಸಮಾನವಾಗಿ ಹಂಚಲಾಗುತ್ತದೆ. ಆದರೂ, ಬರುವ ಮುಂಗಾರು ಋತುವಿನಿಂದ (2020), ವಾಸ್ತವಿಕ ಪ್ರೀಮಿಯಂನಲ್ಲಿ ರೈತರ ಪಾಲು ಶೇಕಡಾ 2 ರಷ್ಟು ಇರಲಿದೆ. ಆದರೆ ಕೇಂದ್ರ ತನ್ನ ಪಾಲಿನ ಸಬ್ಸಿಡಿಯನ್ನು ಕೇವಲ 30 ಪ್ರತಿ ಶತದವರೆಗೆ ಮಾತ್ರ ಭರಿಸಲಿದೆ, ಅಂದರೆ 50: 50 ಅನುಪಾತದಲ್ಲಿ ಶೇ. 14 ಪಾಲು. ಈ ಸಂದರ್ಭದಲ್ಲಿ ಯೋಜನೆಯಲ್ಲಿ ಭಾಗವಹಿಸಲು ಬಯಸಿದರೆ ಶೇಕಡಾ 24 ರಷ್ಟು ಬಾಕಿ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ.

ಈಗ, ಯಾವುದೇ ರಾಜ್ಯವು ಈ ಹೆಚ್ಚುವರಿ ಹೊರೆ ಹಂಚಿಕೊಳ್ಳಲು ಬಯಸದೆ ಇದ್ದರೆ, ಅಲ್ಲಿನ ರೈತರು ವಿಶ್ವಾಸಾರ್ಹ ವಿಮಾ ಉತ್ಪನ್ನದ ವ್ಯಾಪ್ತಿಯಿಂದ ಹೊರಗಡೆ ಉಳಿದು ಬಿಡಬಹುದು ಮತ್ತು ಬೆಳೆ ನಷ್ಟದ ಸಂದರ್ಭದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಅಡಿಯಲ್ಲಿ ಸಾಮಾನ್ಯ ಬೆಳೆ ಹಾನಿ ಪರಿಹಾರದ ಮೇಲೆ ಅವಲಂಬಿತರಾಗಬಹುದು. ಇದು ಯೋಜನೆಯ ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುವ ಸಾಧ್ಯತೆಗಳು ಇವೆ. ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಬದಲಾವಣೆಗಳಿಂದ ಉಂಟಾಗಿರುವ ಬೇಡಿಕೆಗಳನ್ನು ಈಡೇರಿಸಲು ಆಂಧ್ರಪ್ರದೇಶದಂತೆ ಆರ್ಥಿಕವಾಗಿ ಒತ್ತಡಕ್ಕೊಳಗಾದ ರಾಜ್ಯಗಳು ನಿಜವಾಗಿಯೂ ಸಿದ್ಧ ಆಗಲಿವೆಯೇ ಎಂದು ಕೆಲವು ಹಿರಿಯ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಬೆಳೆ ನಷ್ಟದ ಸಂದರ್ಭದಲ್ಲಿ ಎಸ್‌ಡಿಆರ್‌ಎಫ್ ಅಡಿಯಲ್ಲಿನ ಪರಿಹಾರವು ಪಿಎಂಎಫ್‌ಬಿವೈ ಅಡಿಯಲ್ಲಿ ಇತ್ಯರ್ಥಕ್ಕೆ ಆಧಾರವಾಗಿರುವ ಹಣಕಾಸಿನ ಪ್ರಮಾಣಕ್ಕಿಂತ ತೀರಾ ಕಡಿಮೆ ಇದೆ. ನೀರಾವರಿ ರಹಿತ ಪ್ರದೇಶಗಳಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹೆಕ್ಟೇರ್‌ಗೆ (ಬಿತ್ತಿದ ಪ್ರದೇಶದ) 6,800 ರೂ. ಮತ್ತು ನೀರಾವರಿ ಪ್ರದೇಶಗಳ ರೈತರಿಗೆ ಹೆಕ್ಟೇರ್‌ಗೆ 13,500 ರೂ. ಹಣ ನೀಡಲಾಗುತ್ತದೆ.

ರೈತರು 2 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ ಹೊಂದಿದ್ದರೂ, ನೆರವು ಕೇವಲ 2 ಹೆಕ್ಟೇರ್‌ಗೆ ಸೀಮಿತ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಗುಜರಾತಿನ ರಾಜ್‌ಕೋಟ್ ಜಿಲ್ಲೆಯಲ್ಲಿ 2018 ರ ಮುಂಗಾರು ವೇಳೆಗೆ ಹಣಕಾಸು ನೆರವಿನ ಪ್ರಮಾಣವು ನೀರಾವರಿ ಪ್ರದೇಶದಲ್ಲಿ ಬೆಳೆದ ಹೆಕ್ಟೇರ್‌ ಹರಳಿಗೆ 39,000 ರೂ., ಹೆಕ್ಟೇರ್‌ ಹತ್ತಿಗೆ 58,000 ರೂ. ಮತ್ತು ಹೆಕ್ಟೇರ್ ನೆಲಗಡಲೆಗೆ 42,000 ರೂ. ಇತ್ತು. ಆದ್ದರಿಂದ, ಬೆಳೆ ವಿಮೆ ಸಿಗದೇ ಹೋದರೆ ಎಸ್‌ಡಿಆರ್‌ಎಫ್‌ನ ಪ್ರಸ್ತುತ ಮಾನದಂಡಗಳ ಅಡಿಯಲ್ಲಿ ರೈತರು ಬಹಳ ಕಡಿಮೆ ಮೊತ್ತದ ಪರಿಹಾರ ಪಡೆಯಲಿದ್ದಾರೆ.

ರಾಜ್ಯಗಳು ಆಲಿಕಲ್ಲು ಮಳೆಯಂತಹ ಘಟನೆಗಳಿಗೆ ಪಿಎಂಎಫ್‌ಬಿವೈ ಅಡಿಯಲ್ಲಿ ಅವಕಾಶ ಇರಲಿ ಇಲ್ಲದಿರಲಿ ಮೂಲ ಪರಿಹಾರಕ್ಕೆ ಮುಂದಾಗಬೇಕಾದ ತಮ್ಮ ಏಕ ಅಪಾಯಕಾರಿ ಉತ್ಪನ್ನಗಳಿಂದ ಹೊರಬಂದರೆ ಮಾತ್ರ ಅವುಗಳಿಗೆ ಸಬ್ಸಿಡಿಯಲ್ಲಿ ಕಡಿಮೆ ಪಾಲು ದೊರೆಯಬಹುದು ಮತ್ತು ರೈತರು ಕೂಡ ಉತ್ತಮ ವಿಮಾ ಲಾಭ ಪಡೆಯಬಹುದು. ಇತ್ತೀಚೆಗೆ ಕೈಗೊಳ್ಳಲಾದ ಸಂಪುಟ ನಿರ್ಧಾರ ಇವುಗಳಿಗೆ ಅವಕಾಶ ನೀಡಿದೆ. ಸಾಮಾನ್ಯ ಅವಧಿಯಲ್ಲಿ ಅಂತಹ ಉತ್ಪನ್ನವನ್ನು ಕಸ್ಟಮೈಸ್ ಮಾಡಲಾಗಿರುತ್ತದೆ. ಆಗ ಅಪಾಯವನ್ನು ಸರಿದೂಗಿಸಲು ಕಡಿಮೆ ಪ್ರೀಮಿಯಂ ಸಲ್ಲಿಸಬಹುದು. ಇದು ಪಿಎಂಎಫ್‌ಬಿವೈಗೆ ಪುನಶ್ಚೇತನ ನೀಡುತ್ತದೆಯೇ ಎಂಬುದರ ಕುರಿತು ಮುಂಬರುವ ವರ್ಷಗಳಲ್ಲಿ ನಿಕಟ ಮೇಲ್ವಿಚಾರಣೆ ನಡೆಸುವುದು ಅಗತ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.