ETV Bharat / bharat

ಗ್ರಾಮೀಣ ಮಹಿಳೆಯರ ದಿನ: ಹಳ್ಳಿ ಹೆಣ್ಣುಮಕ್ಕಳ ಮೇಲೆ ಕೋವಿಡ್-19 ಪರಿಣಾಮ ಹೀಗಿದೆ!

author img

By

Published : Oct 15, 2020, 6:16 PM IST

ಇಂದು ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಈ ಬಾರಿಯ ವಿಷಯವಾಗಿದೆ.

international-day-of-rural-women
international-day-of-rural-women

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗವು ಗ್ರಾಮೀಣ ಪ್ರದೇಶದಲ್ಲಿ ಉಲ್ಬಣಗೊಂಡಿದ್ದು, ಈಗಾಗಲೇ ತಮ್ಮ ದೈನಂದಿನ ಜೀವನದಲ್ಲಿ ಹೋರಾಟ ನಡೆಸುತ್ತಿರುವ ಗ್ರಾಮೀಣ ಮಹಿಳೆಯರು ಕೋವಿಡ್-19ನಿಂದಾಗಿ ಇನ್ನಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲ ಸಾಮಾಜಿಕ ನಿರ್ಬಂಧಗಳಿಂದಾಗಿ ಅವರಿಗೆ ಗುಣಮಟ್ಟದ ಆರೋಗ್ಯ ಸೇವೆಗಳು, ಅಗತ್ಯ ಔಷಧಗಳು ಮತ್ತು ಲಸಿಕೆಗಳು ಪಡೆಯುವ ಸಾಧ್ಯತೆ ಕಡಿಮೆಯಿದೆ.

ಇದಲ್ಲದೇ ಅವರಲ್ಲಿ ಹೆಚ್ಚಿನವರು ತಪ್ಪು ಮಾಹಿತಿಯ ಹರಡುವಿಕೆ ಮತ್ತು ತಂತ್ರಜ್ಞಾನಗಳ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಬಹು ದೊಡ್ಡ ಸಮಸ್ಯೆಯಾಗಿದೆ. ಈ ಮಹಿಳೆಯರು ತಮ್ಮ ಮನೆಯ ಸದಸ್ಯರ ಆರೋಗ್ಯ ನೋಡಿಕೊಳ್ಳುತ್ತ, ತಮ್ಮ ಆರೋಗ್ಯದ ಕಾಳಜಿ ವಹಿಸುವುದನ್ನು ನಿರ್ಲಕ್ಷಿಸುತ್ತಾರೆ.

ಈ ವರ್ಷದ ಅಂತರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆಯ ವಿಷಯವೆಂದರೆ "ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು". ಈ ಮಹಿಳೆಯರ ಹೋರಾಟಗಳು, ಅವರ ಅಗತ್ಯತೆಗಳು ಮತ್ತು ನಮ್ಮ ಸಮಾಜದಲ್ಲಿ ಅವರ ನಿರ್ಣಾಯಕ ಮತ್ತು ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಗ್ರಾಮೀಣ ಮಹಿಳೆಯರ ಪಾತ್ರ:

ಗ್ರಾಮೀಣ ಕುಟುಂಬಗಳು ಮತ್ತು ಸಮುದಾಯಗಳ ಸುಸ್ಥಿರತೆಯನ್ನು ಕಾಪಾಡುವಲ್ಲಿ, ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುವಲ್ಲಿ ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ಮಹಿಳೆಯರು ಮತ್ತು ಹುಡುಗಿಯರು ವಹಿಸುವ ನಿರ್ಣಾಯಕ ಪಾತ್ರವು ಹೆಚ್ಚು ಗುರುತಿಸಲ್ಪಟ್ಟಿದೆ. ಅನೌಪಚಾರಿಕ ಕೆಲಸ ಸೇರಿದಂತೆ ಕೃಷಿ ಕಾರ್ಮಿಕರ ಗಣನೀಯ ಪ್ರಮಾಣದಲ್ಲಿ ಮಹಿಳೆಯರು ಪಾಲು ಹೊಂದಿದ್ದಾರೆ ಮತ್ತು ಗ್ರಾಮೀಣ ಪ್ರದೇಶದ ಕುಟುಂಬಗಳು ಮತ್ತು ಮನೆಗಳಲ್ಲಿ ಹೆಚ್ಚಿನ ವೇತನ ಪಡೆಯದೇ ಆರೈಕೆ ಮತ್ತು ಮನೆಕೆಲಸಗಳನ್ನು ನಿರ್ವಹಿಸುತ್ತಾರೆ.

ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪೋಷಣೆ, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವಲ್ಲಿ ಗ್ರಾಮೀಣ ಮಹಿಳೆಯರು ಮಹತ್ವದ ಕೊಡುಗೆಗಳನ್ನು ನೀಡುತ್ತಾರೆ.

ಹಾಗಿದ್ದರೂ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಹುಡುಗಿಯರು ಬಹು ಆಯಾಮದ ಬಡತನದಿಂದ ಬಳಲುತ್ತಿದ್ದಾರೆ. ಜಾಗತಿಕವಾಗಿ ತೀವ್ರ ಬಡತನ ಕಡಿಮೆಯಾಗಿದ್ದರೂ, ವಿಶ್ವದ 1 ಬಿಲಿಯನ್ ಜನರು ಸ್ವೀಕಾರಾರ್ಹವಲ್ಲದ ಬಡತನದ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದು, ಅವರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಬಡತನದ ಪ್ರಮಾಣವು ನಗರ ಪ್ರದೇಶಗಳಿಗಿಂತ ಹೆಚ್ಚಾಗಿದೆ.

15 ಅಕ್ಟೋಬರ್ 2008ರಂದು ಮೊದಲ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸಲಾಯಿತು. ಈ ದಿನವು "ಸ್ಥಳೀಯ ಮಹಿಳೆಯರು ಸೇರಿದಂತೆ ಗ್ರಾಮೀಣ ಮಹಿಳೆಯರ ನಿರ್ಣಾಯಕ ಪಾತ್ರ ಮತ್ತು ಕೊಡುಗೆಯನ್ನು ಗುರುತಿಸುತ್ತದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಹೆಚ್ಚಿಸುವಲ್ಲಿ, ಆಹಾರ ಸುರಕ್ಷತೆಯನ್ನು ಸುಧಾರಿಸುವಲ್ಲಿ ಮತ್ತು ಗ್ರಾಮೀಣ ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಅವರ ಪಾತ್ರವನ್ನು ಗುರುತಿಸುತ್ತದೆ".

ವಿಶ್ವಸಂಸ್ಥೆ ಮತ್ತು ನಾಗರಿಕ ಸಮಾಜದ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮೀಣ ಮಹಿಳೆಯರ ಜೀವನವನ್ನು ಸುಧಾರಿಸುವಂತಹ ಕ್ರಮಗಳನ್ನು ಜಾರಿಗೆ ತರಲು ಒತ್ತಾಯಗಳು ಕೇಳಿಬರುತ್ತಿವೆ. ಸರ್ಕಾರಗಳು ಮತ್ತು ಸಮಾಜವು ಅವರ ಅಗತ್ಯತೆಗಳ ಬಗ್ಗೆ ಗಮನ ಹರಿಸಬೇಕು ಮತ್ತು ಗ್ರಾಮೀಣ ಮಹಿಳೆಯರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕು ಎಂಬ ಆಗ್ರಹಗಳಿವೆ.

ಗ್ರಾಮೀಣ ಮಹಿಳೆಯರನ್ನು ಬೆಂಬಲಿಸಲು ನಿರ್ದಿಷ್ಟ ನೆರವು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಗ್ರಾಮೀಣ ಆರ್ಥಿಕ ಕೌಶಲ್ಯಗಳನ್ನು ಉತ್ತೇಜಿಸಲು ಸಲಹಾ ಸೇವೆಗಳು, ಬ್ಯಾಂಕಿಂಗ್, ಆಧುನಿಕ ವ್ಯಾಪಾರ ಮತ್ತು ಹಣಕಾಸು ಕಾರ್ಯವಿಧಾನಗಳಲ್ಲಿ ಸಹಾಯ, ಮೈಕ್ರೊ ಕ್ರೆಡಿಟ್ ಮತ್ತು ಇತರ ಹಣಕಾಸು ಮತ್ತು ವ್ಯವಹಾರ ಸೇವೆಗಳನ್ನು ಒದಗಿಸುವುದು, ಅಥವಾ ಗ್ರಾಮೀಣ ಮಹಿಳೆಯರಿಗೆ ಭೂಮಿ ಮತ್ತು ಇತರ ಆಸ್ತಿ ಹೊಂದಲು ಸಂಪೂರ್ಣ ಮತ್ತು ಸಮಾನ ಹಕ್ಕುಗಳನ್ನು ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಾನೂನುಗಳನ್ನು ವಿನ್ಯಾಸಗೊಳಿಸಬೇಕೆಂಬ ಕೋರಿಕೆಗಳಿವೆ.

ಭಾರತದ ಗ್ರಾಮೀಣ ಮಹಿಳೆಯರ ಸ್ಥಿತಿ ಗತಿ:

ಜನಗಣತಿ 2011ರ ಪ್ರಕಾರ, ಭಾರತದ ಜನಸಂಖ್ಯೆ 121.06 ಕೋಟಿ ಇದ್ದು, ಅದರಲ್ಲಿ 48.5% ರಷ್ಟು ಮಹಿಳೆಯರಿದ್ದಾರೆ.

2011ರಲ್ಲಿ, ಅಖಿಲ ಭಾರತ ಮಟ್ಟದಲ್ಲಿ ಲಿಂಗ ಅನುಪಾತ (1000 ಪುರುಷರಿಗೆ ಮಹಿಳೆಯರ ಸಂಖ್ಯೆ) 943 ಇದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಕ್ರಮವಾಗಿ 949 ಮತ್ತು 929ರಷ್ಟಿದೆ. 0 - 19 ವಯೋಮಾನದ ಲಿಂಗ ಅನುಪಾತ 908 ಆಗಿದ್ದರೆ, 60+ ವಯೋಮಾನದವರ ಅನುಪಾತ 1033 ಇತ್ತು. ಆರ್ಥಿಕವಾಗಿ ಸಕ್ರಿಯವಾಗಿರುವ ವಯೋಮಾನದವರಲ್ಲಿ (15 - 59 ವರ್ಷಗಳು) ಲಿಂಗ ಅನುಪಾತ 944 ಆಗಿತ್ತು. 0 - 6 ವರ್ಷ ವಯಸ್ಸಿನ ಅನುಪಾತವು ಗ್ರಾಮೀಣ ಪ್ರದೇಶದಲ್ಲಿ 923 ಇತ್ತು.

ಅಖಿಲ ಭಾರತ ಮಟ್ಟದಲ್ಲಿ 2017ರಲ್ಲಿ ಮಹಿಳೆಯರ ಸರಾಸರಿ ವಯಸ್ಸು 22.1 ವರ್ಷಗಳು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರಮವಾಗಿ 21.7 ವರ್ಷಗಳು ಮತ್ತು 23.1 ವರ್ಷಗಳಾಗಿವೆ.

ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ (ಜುಲೈ 2011 - ಜೂನ್ 2012), ಗ್ರಾಮೀಣ ಪ್ರದೇಶಗಳಲ್ಲಿ 11.5% ಕುಟುಂಬಗಳು ಮತ್ತು ನಗರ ಪ್ರದೇಶಗಳಲ್ಲಿ 12.4% ಕುಟುಂಬಗಳು ಮಹಿಳಾ ಮುಖ್ಯಸ್ಥೆಯನ್ನು ಹೊಂದಿವೆ.

ಜನಗಣತಿ 2011ರ ಪ್ರಕಾರ, ಅಖಿಲ ಭಾರತ ಮಟ್ಟದಲ್ಲಿ ಸಾಕ್ಷರತಾ ಪ್ರಮಾಣ 72.98% ಮತ್ತು ಮಹಿಳೆಯರು ಮತ್ತು ಪುರುಷರ ಸಾಕ್ಷರತೆಯ ಪ್ರಮಾಣ ಕ್ರಮವಾಗಿ 64.63% ಮತ್ತು 80.9% ಆಗಿದೆ. ಕಳೆದ ಒಂದು ದಶಕದಲ್ಲಿ, ಗ್ರಾಮೀಣ ಮಹಿಳೆಯರ ಸಾಕ್ಷರತೆಯ ಪ್ರಮಾಣದಲ್ಲಿ ಹೆಚ್ಚಿನ ಸುಧಾರಣೆ (ಶೇ24) ಕಂಡುಬಂದಿದೆ.

ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಫಲಿತಾಂಶಗಳು 2017-18ರಲ್ಲಿ ಗ್ರಾಮೀಣ ವಲಯದ ಮಹಿಳೆಯರಿಗೆ ಕಾರ್ಮಿಕರ ಜನಸಂಖ್ಯೆಯ ಅನುಪಾತ 17.5 ಮತ್ತು ಪುರುಷರಿಗೆ 51.7 ಎಂದು ಸೂಚಿಸುತ್ತದೆ. ನಗರ ವಲಯದಲ್ಲಿ ಈ ಅನುಪಾತವು ಮಹಿಳೆಯರಿಗೆ 14.2 ಮತ್ತು ಪುರುಷರಿಗೆ 53.0 ಆಗಿದೆ.

ಪಿಎಲ್‌ಎಫ್‌ಎಸ್ (2017-18) ಪ್ರಕಾರ, ಗ್ರಾಮೀಣ ಪ್ರದೇಶದ ಮಹಿಳೆಯರ ನಿರುದ್ಯೋಗ ದರವು ಪುರುಷರಿಗೆ 5.7 ರಂತೆ 3.8 ಆಗಿದ್ದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಗರ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಇದು 10.8 ಮತ್ತು 6.9 ರಷ್ಟು ಅನುಪಾತದಲ್ಲಿದೆ.

ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆ ಉದ್ದೇಶ :

ಈ ಬಾರಿಯ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆಯ ವಿಷಯ: "ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು"

ಈ ವರ್ಷ ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನದಂದು (ಅಕ್ಟೋಬರ್ 15), ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ತುರ್ತು ಅಗತ್ಯವನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಗ್ರಾಮೀಣ ಮಹಿಳೆಯರ ಸುಸ್ಥಿರ ಜೀವನೋಪಾಯ ಮತ್ತು ಯೋಗಕ್ಷೇಮವನ್ನು ಬಲಪಡಿಸುವ ಗುರಿ ಹೊಂದಲಾಗಿದೆ.

ಭಾರತದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಲಕ್ಷಾಂತರ ಗ್ರಾಮೀಣ ಮಹಿಳೆಯರು ಮಾಸ್ಕ್ ಮತ್ತು ಸ್ಯಾನಿಟೈಸರ್ ಉತ್ಪಾದಿಸುವ ಮೂಲಕ, ಸಮುದಾಯ ಅಡಿಗೆಮನೆಗಳ ಮೂಲಕ ತಾಜಾ ಆಹಾರವನ್ನು ಒದಗಿಸುವ ಮೂಲಕ, ಹಣಕಾಸು ಸೇವೆಗಳನ್ನು ನೀಡುವ ಮೂಲಕ ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಪ್ರಮುಖ ಕೋವಿಡ್-19 ಮಾಹಿತಿಯನ್ನು ಸಂವಹನ ಮಾಡುವ ಮೂಲಕ ತಮ್ಮ ವತಿಯಿಂದ ಸಹಾಯ ಮಾಡಿದ್ದಾರೆ.

ಆದರೂ ಗ್ರಾಮೀಣ ಮಹಿಳೆಯರು ತೀವ್ರವಾಗಿ ಅನಾನುಕೂಲಕರ ಪರಿಸ್ಥಿತಿಯಲ್ಲಿ ದುಡಿಯುತ್ತಿದ್ದಾರೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಮೂಲಸೌಕರ್ಯ ಮತ್ತು ಸೇವೆಗಳನ್ನು ವಿಸ್ತರಿಸಲಾಗಿದೆ. ಆದರೂ ಸಾಂಕ್ರಾಮಿಕ ರೋಗದ ಸಮಯದಲ್ಲಿ ಗ್ರಾಮೀಣ ಮಹಿಳೆಯರು ಆರೈಕೆ ಮತ್ತು ಉತ್ಪಾದಕ ಕೆಲಸದಲ್ಲಿ ದುಡಿಯುತ್ತದ್ದಾರೆ.

ಕೋವಿಡ್-19 ನಂತರ ಗ್ರಾಮೀಣ ಮಹಿಳೆಯರು ತಮ್ಮ ಜೀವನವನ್ನು ಪುನರ್ನಿರ್ಮಿಸಲು ಮಾತ್ರವಲ್ಲದೇ ಭವಿಷ್ಯದ ಬಿಕ್ಕಟ್ಟುಗಳನ್ನು ಎದುರಿಸಲು ಉತ್ತಮವಾಗಿ ತಯಾರಾಗಲು ಅವರ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಗ್ರಾಮೀಣ ಮಹಿಳೆಯರು ಮತ್ತು ಹುಡುಗಿಯರನ್ನು ಬೆಂಬಲಿಸುವ ಕ್ರಮವನ್ನು ಹೆಚ್ಚಿಸಲು ಶ್ರಮಿಸುವುದು ಈ ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆಯ ಪ್ರಮುಖ ಗುರಿಯಾಗಿದೆ.
ಗ್ರಾಮೀಣ ಮಹಿಳೆಯರ ಮೇಲೆ ಕೋವಿಡ್ 19 ಪರಿಣಾಮ:

ಕೋವಿಡ್-19 ಸಾಂಕ್ರಾಮಿಕವು ಕೇವಲ ಆರೋಗ್ಯ ಸಮಸ್ಯೆಯಲ್ಲ. ಇದು ನಮ್ಮ ಸಮಾಜದ ಆರ್ಥಿಕತೆಗೆ ತೀವ್ರ ಆಘಾತವಾಗಿದೆ. ಗ್ರಾಮೀಣ ಮಹಿಳೆಯರು ಈ ಆಘಾತವನ್ನು ಅನುಭವಿಸುತ್ತಿದ್ದಾರೆ.

ಮನೆಯಲ್ಲಿ ಮತ್ತು ನಮ್ಮ ಸಮುದಾಯಗಳಲ್ಲಿ ಹೆಚ್ಚಿನ ಸಂಖ್ಯೆಯ ಆರೈಕೆದಾರರು ಮಹಿಳೆಯರಾಗಿದ್ದಾರೆ. ಅವರು ಸೋಂಕಿನ ಅಪಾಯ ಹೊಂದಿದ್ದಾರೆ. ಜೊತೆಗೆ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಕೌಟುಂಬಿಕ ಹಿಂಸಾಚಾರದಲ್ಲಿಯೂ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.