ETV Bharat / bharat

ವಿಶೇಷ ಅಂಕಣ: ವಿಶ್ವ ವ್ಯಾಪಾರದ ಮೇಲೆ ಪರಿಣಾಮ ಬೀರಿದ ಕೋವಿಡ್​​​!

author img

By

Published : Sep 2, 2020, 1:38 PM IST

ತಿಂಗಳುಗಟ್ಟಲೆ ಲಾಕ್‌ಡೌನ್ ಆದ ನಂತರದಲ್ಲಿ ಈಗ ವಿಶ್ವಕ್ಕೆ ಉತ್ಪಾದನೆ ಮಾಡುವ ಅಗತ್ಯ ಉಂಟಾಗುತ್ತದೆ. ಈವರೆಗೆ ಕಡಿಮೆ ಗತಿಯಲ್ಲಿ ಸಾಗಣೆಯಾಗುತ್ತಿದ್ದ ಸರಕುಗಳ ಸಂಗ್ರಹದ ಉದ್ದೇಶಕ್ಕೆ ಹೆಚ್ಚು ವೇಗದಲ್ಲಿ ಸಾಗಣೆ ಮಾಡುವ ಅಗತ್ಯವಿರುತ್ತದೆ. ಅಂದರೆ, ಅತ್ಯಂತ ಅಲ್ಪ ಅವಧಿಯಲ್ಲಿ ಒಂದಷ್ಟು ಸರಕು ಸಾಗಣೆಯನ್ನು ವಿಶ್ವ ಮರು ಆರಂಭಿಸಬೇಕಿದೆ.

Impact on world trade due to covid
ವಿಶೇಷ ಬರಹ: ಕೋವಿಡ್‌ನಿಂದಾಗಿ ವಿಶ್ವ ವ್ಯಾಪಾರದ ಮೇಲೆ ಪರಿಣಾಮ

ನವದೆಹಲಿ: ಕಳೆದ ಮೂರು ಶತಮಾನಗಳ ಇತಿಹಾಸವನ್ನು ನಾವು ನೋಡಿದರೆ, ಹೊಸ ಶತಮಾನದ ಮೊದಲಾರ್ಧವು ಎಂದಿಗೂ ಯದ್ಧಕ್ಕೆ ಸಾಕ್ಷಿಯಾಗಿರುವುದು ಕಂಡುಬರುತ್ತದೆ. ಈ ಸಮಯದಲ್ಲಿ ವಿಪರೀತ ಸಾವು ನೋವು, ವಿನಾಶ, ಸಾಂಕ್ರಾಮಿಕ ರೋಗಗಳು, ಕುಸಿತ, ಆರ್ಥಿಕ ಮತ್ತು ಸಾಮಾಜಿಕ ಸಂಘರ್ಷಗಳೇ ತುಂಬಿರುವುದನ್ನು ನಾವು ಗಮನಿಸಬಹುದು.

ದುರಾದೃಷ್ಟವಶಾತ್‌ ಮಾನವರು ಇತಿಹಾಸವನ್ನು ಮರೆಯುತ್ತಾರೆ ಮತ್ತು ಹೀಗಾಗಿ ಇದೆಲ್ಲವೂ ಹೊಸತರಂತೆಯೇ ನಮಗೆ ಕಾಣಿಸುತ್ತದೆ. ಭಾರತದಲ್ಲಿ ನಾವು ಬಹುತೇಕರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಜಾಗತಿಕ ಆರ್ಥಿಕತೆಯ ಮೇಲೆ ದೀರ್ಘಾವಧಿಗೆ ಕೋವಿಡ್‌ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ, ಭಾರತವೇನೂ ಕೋವಿಡ್‌ನಿಂದ ಉಂಟಾದ ಪರಿಣಾಮದಿಂದ ತಪ್ಪಿಸಿಕೊಳ್ಳಲಾಗದು.

ಭಾರತದ ಸಮಸ್ಯೆಗಳು ಅಲ್ಪಕಾಲದ್ದು ಮತ್ತು ಕೆಲವೇ ತಿಂಗಳಲ್ಲಿ ನಮ್ಮ ಆರ್ಥಕತೆಯು ಸಮಸ್ಯೆಯನ್ನು ಮೀರಿ ಎದ್ದುಬರಲಿದೆ ಎಂದು ಭಾರತ ಅತಿಯಾದ ವಿಶ್ವಾಸ ಹೊಂದಿದಂತಿದೆ. ಇತರ ಸಮಸ್ಯೆಗಳಿಗೆ ಹೋಲಿಸಿದರೆ ಕೋವಿಡ್‌ ಅತ್ಯಂತ ವಿಭಿನ್ನವಾಗಿದೆ. ಯಾಕೆಂದರೆ, ಇದು ಮಾನವನ ಅಸ್ತಿತ್ವಕ್ಕೇ ಪ್ರಶ್ನೆ ಒಡ್ಡುತ್ತದೆ. ಒಬ್ಬ ವ್ಯಕ್ತಿಯನ್ನು ಕಳೆದುಕೊಂಡರೆ ಕುಟುಂಬದ ಆದಾಯದ ಮೇಲೆ ಮತ್ತು ಕುಟುಂಬ ಮಾಡುವ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ.

ಈ ಅಸ್ತಿತ್ವದ ಪ್ರಶ್ನೆಯು ವಿಶ್ವದ ಎಲ್ಲ ದೇಶಗಳಿಗೂ ಬಾಧಿಸಿದರೆ, ಕೋಟ್ಯಂತರು ಜನರು ಇದರಿಂದ ಬಳಲುತ್ತಾರೆ. ಕುಟುಂಬಗಳು, ಕಂಪನಿಗಳು, ಸರ್ಕಾರಗಳಿಗೆ ಇದು ಬಾಧಿಸುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಆರ್ಥಿಕತೆಗೆ ಇದು ಬಾಧಿಸುತ್ತದೆ. ಬದುಕುಳಿದವರೂ ಕೂಡ ತಾವು ಆರೋಗ್ಯ ಸಮಸ್ಯೆಯಿಂದ ಆದಾಯದ ಮೂಲ ಬತ್ತಿ ಹೋದರೂ ಮುನ್ನೆಚ್ಚರಿಕೆ ಕ್ರಮಗಳು, ಔಷಧಗಳು ಇತ್ಯಾದಿಯ ಮೇಲೆ ಹಣ ವೆಚ್ಚ ಮಾಡುವ ಅಗತ್ಯ ಉಂಟಾಗುತ್ತದೆ.

ಕಳೆದ 100 ವರ್ಷಗಳಲ್ಲಿ ನಾವು ಗಮನಿಸಿದ ಹಾಗೆ ಯುದ್ಧ ಅಥವಾ ಇತರ ಆರ್ಥಿಕ ಸಮಸ್ಯೆಗಳಿಗಿಂತ ವಿಭಿನ್ನವಾಗಿ, ಆರೋಗ್ಯದಿಂದಾಗಿ ಆರ್ಥಿಕತೆಯ ಮೇಲೆ ಪರಿಣಾಮ ಉಂಟುಮಾಡಿದೆ. ಸಾಮಾನ್ಯವಾಗಿ ಆರ್ಥಿಕತೆಯ ಮೇಲಿನ ಪರಿಣಾಮದಿಂದಾಗಿ ಆರೋಗ್ಯ ಸಮಸ್ಯೆ ಕಂಡುಬರುತ್ತಿತ್ತು.

ವಹಿವಾಟು ಸಾಮಾನ್ಯವಾಗಿ ಕೆಟ್ಟ ಸುದ್ದಿ ಅಥವಾ ಒಳ್ಳೆಯ ಸುದ್ದಿ ಎರಡನ್ನೂ ಹೊಂದಿರುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಯೋಜನೆ ಮಾಡಿಕೊಳ್ಳುತ್ತೇವೆ. ಜಾಗತಿಕ ಅನಿಶ್ಚಿತತೆ ಎಂದಿಗೂ ಇಷ್ಟು ವಿಪರೀತ ಪ್ರಮಾಣದಲ್ಲಿ ಇರಲಿಲ್ಲ. ಆದರೆ, ಅನಿಶ್ಚಿತತೆಯ ಕುರಿತು ಅವರು ಯೋಜನೆ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ವ್ಯತ್ಯಯಕ್ಕೆ ಮೊದಲ ಪ್ರತಿಕ್ರಿಯೆಯೆಂದರೆ, ಎಲ್ಲ ವೆಚ್ಚವನ್ನೂ ನಿಲ್ಲಿಸುವುದೇ ಆಗಿರುತ್ತದೆ. ಕೋಟ್ಯಂತರ ವಹಿವಾಟುಗಳು ಈ ರೀತಿ ವೆಚ್ಚವನ್ನು ನಿಲ್ಲಿಸಿದರೆ, ವಹಿವಾಟು ಆವರ್ತನ ಮತ್ತು ಅದರ ಜೊತೆಗೆ ಸಂಪರ್ಕ ಹೊಂದಿರುವ ಆರ್ಥಿಕತೆ ಕುಸಿಯುತ್ತದೆ ಮತ್ತು ಹಿಮ್ಮುಖ ಚಲನೆ ಆರಮಭವಾಗಿ ಆರ್ಥಿಕ ಚಟುವಟಿಕೆಗೆ ಬಾಧೆಯಾಗುತ್ತದೆ.

1990ರಿಂದ ಈವರೆಗಿನ ಜಾಗತಿಕ ಅನಿಶ್ಚಿತತೆ ಸೂಚ್ಯಂಕ

ಕೋವಿಡ್‌ನಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಉಂಟಾದ ಪರಿಣಾಮ ಅತ್ಯಂತ ವಿನಾಶಕಾರಿಯಾಗಿದೆ. 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗಡಿಗಳನ್ನು ಈಗ ಬಂದ್ ಮಾಡಲಾಗಿದೆ. ಮುಂದುವರಿದು, ಕನಿಷ್ಠ 3 ತಿಂಗಳವರೆಗೆ ವೈರಸ್‌ ಹರಡಿದ್ದರ ಪರಿಣಾಮ ಎಲ್ಲ ವ್ಯಾಪಾರ ಮಾರ್ಗಗಳಿಗೂ ಅಡ್ಡಿ ಉಂಟಾಗಿತ್ತು.

1980ರ ನಂತರದಲ್ಲಿ ಹಣ, ಮಾರ್ಕೆಟ್‌ ಮತ್ತು ಉತ್ಪನ್ನಗಳಿಗೂ ತಂತ್ರಜ್ಞಾನಕ್ಕೂ ಸಂಬಂಧ ಹೆಚ್ಚುತ್ತಲೇ ಇದೆ. ಇದರಿಂದಾಗಿ ಅಂತಾರಾಷ್ಟ್ರೀಯ ಗಡಿಗಳ ದಕ್ಷತೆ ಮತ್ತು ವೆಚ್ಚ ಇಳಿಕೆ ಗತಿ ಹೆಚ್ಚುತ್ತ ಸಾಗಿದೆ. ವಿಶ್ವದ ಯಾವುದೇ ಒಂದು ಭಾಗದಲ್ಲಿ ಅಡ್ಡಿ ಉಂಟಾದರೆ, ಇಡೀ ವಿಶ್ವಕ್ಕೆ ತೊಂದರೆಯಾಗುತ್ತದೆ. ಕೋವಿಡ್‌ನ ಒಂದು ಹೊಡೆತಕ್ಕೆ ಇಡೀ ವಿಶ್ವದ ಆರ್ಥಿಕತೆ ಕುಸಿದಿದೆ.

ಶೇ. 90ರಷ್ಟು ವ್ಯಾಪಾರವು ಹಡಗುಗಳು ಅಥವಾ ಏರ್ ಕಾರ್ಗೋ ಮೂಲಕ ನಡೆಯುತ್ತಿದೆ. ವಿಶ್ವದಲ್ಲೇ ಉತ್ತುಂಗದಲ್ಲಿದ್ದ 2018ರಲ್ಲಿ ತೈಲವೂ ಸೇರಿದಂತೆ ಎಲ್ಲ ಸರಕುಗಳ ವ್ಯಾಪಾರದ ಮೌಲ್ಯವು 19.5 ಟ್ರಿಲಿಯನ್ ಡಾಲರ್ ಆಗಿತ್ತು. ಈ ಪೈಕಿ ಅಭಿವೃದ್ಧಿಗೊಂಡ ದೇಶಗಳೇ 9.3 ಟ್ರಿಲಿಯನ್ ಡಾಲರ್ ಹೊಂದಿದ್ದವು. ಇಪತ್ತು ಅಡಿ ಕಂಟೇನರುಗಳನ್ನು ಬಳಸಿ ಅಂತಾರಾಷ್ಟ್ರೀಯವಾಗಿ ಸಾಗಣೆ ಮಾಡಿದ ಸರಕುಗಳ ಮೌಲ್ಯವು ಒಟ್ಟು ವ್ಯಾಪಾರವಾದ ಸರಕುಗಳ ಪೈಕಿ 1 ಟ್ರಿಲಿಯನ್ ಡಾಲರ್ ಆಗಿತ್ತು.

ಕೋವಿಡ್‌ನಿಂದಾಗಿ ಇದು ಶೇ. 14ರಿಂದ ಶೇ. 30ರ ವರೆಗೆ ಇಳಿಕೆ ಕಂಡಿದೆ ಎಂದು ಅಂದಾಜು ಮಾಡಲಾಗಿದೆ. 2020 ಫೆಬ್ರವರಿ – ಏಪ್ರಿಲ್‌ನಲ್ಲಿ ಕಂಡುಬಂದ ಇಳಿಕೆಗಿಂತ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದೆ. ಕಂಟೇನರ್ ಶಿಪ್‌ಗಳ ಸಾಗಣೆಯು ಆಗಸ್ಟ್ ಮಧ್ಯಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 7ಕ್ಕಿಂತ ಕಡಿಮೆ ಆಗಿತ್ತು. 2022ರ ವೇಳೆಗಷ್ಟೇ ಕೋವಿಡ್‌ಗಿಂತಲೂ ಮೊದಲಿನ ಸ್ಥಿತಿಗೆ ಕಂಟೇನರ್ ಸಾಗಣೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನೊಂದು ಪ್ರಮುಖ ಆರ್ಥಿಕತೆ ಮತ್ತು ವ್ಯಾಪಾರದ ಸೂಚಕವೆಂದರೆ, ಅಂತಾರಾಷ್ಟ್ರೀಯ ಪ್ರಯಾಣವಾಗಿದೆ. ಸೇವಾ ವಲಯದಲ್ಲಿನ ಬಹುತೇಕ ವ್ಯಾಪಾರವು ಪ್ರಯಾಣದ ಮೇಲೆ ಅವಲಂಬಿಸಿದೆ. ಈ ವರ್ಷದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟವು ಈಗಲೂ ಶೇ. 40ರಷ್ಟು ಕುಸಿತ ಕಂಡಿದೆ (ಫೆಬ್ರವರಿ-ಏಪ್ರಿಲ್‌ನಲ್ಲಿ ಶೇ. 80ರಷ್ಟು ಕುಸಿತಕ್ಕೆ ಹೋಲಿಸಿದರೆ ಸುಧಾರಣೆ ಕಂಡಿದೆ). 2019ರಲ್ಲಿ ಒಟ್ಟಾರೆ ವಿಶ್ವ ವ್ಯಾಪಾರವು 2018ರಿಂದ ಶೇ. 2.5ರಷ್ಟು ಇಳಿದಿದ್ದು, ಕೋವಿಡ್‌ನಿಂದಾಗಿ ಶೇ. 7ರಿಂದ ಶೇ. 13ರಷ್ಟು ಇಳಿಕೆ ಕಂಡಂತಾಗಿದೆ.

ಇದೇ ರೀತಿ, ಆರ್ಥಿಕತೆ ಕುಸಿದಿದ್ದರೂ ವಹಿವಾಟನ್ನು ಸ್ಥಗಿತಗೊಳಿಸಿದಾಗ ವ್ಯಾಪಾರದ ವೆಚ್ಚ ವಿಪರೀತ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕತೆ ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಸಾರಿಗೆ ಮತ್ತು ಪ್ರಯಾಣ ವೆಚ್ಚವು ವ್ಯಾಪಾರದ ಪ್ರಮುಖ ವೆಚ್ಚಗಳಾಗಿವೆ. ವಿವಿಧ ವಲಯಗಳಲ್ಲಿ ಈ ವೆಚ್ಚವು ಅಂದಾಜು ಶೇ. 15–31ರ ವರೆಗೆ ಇರುತ್ತದೆ ಎಂದು ಡಬ್ಲ್ಯೂಟಿಒ ಅಂದಾಜು ಮಾಡಿದೆ.

ಈ ವೆಚ್ಚದಲ್ಲಿ ಸ್ವಲ್ಪ ಹೆಚ್ಚಳವಾದರೂ, ಸರಕಿನ ವೆಚ್ಚದ ಮೇಲೆ ಹೆಚ್ಚಳವಾಗುತ್ತದೆ ಮತ್ತು ವಹಿವಾಟು ನಡೆಸುವ ಅನುಕೂಲತೆಯ ಮೇಲೂ ಪರಿಣಾಮ ಬೀರುತ್ತದೆ. ಕೋವಿಡ್‌ನಿಂದಾಗಿ ಹೇರಿರುವ ನಿರ್ಬಂಧಗಳು ಮತ್ತು ವಹಿವಾಟು ಮುಕ್ತಾಯ ಮಾಡಿರುವುದರಿಂದ ಬೇಡಿಕೆಯ ಜೊತೆಗೆ ಪೂರೈಕೆ ಕೊರತೆಯೂ ಉಂಟಾಗಿದೆ.

ಪ್ರಮುಖ ಬಂದರುಗಳಲ್ಲಿ ದಟ್ಟಣೆ ಕಡಿಮೆಯಾಗಿದೆ ಮತ್ತು ಬಹುತೇಕ ಶಿಪ್ಪಿಂಗ್ ಕಂಪನಿಗಳು ಡೀಸೆಲ್ ವೆಚ್ಚವನ್ನು ಉಳಿಸುವುದಕ್ಕಾಗಿ ತಮ್ಮ ಹಡಗುಗಳ ವೇಗವನ್ನು ಕಡಿಮೆ ಮಾಡುತ್ತಿವೆ. ಅಲ್ಲದೆ, ಹೆಚ್ಚು ದೂರದ ಮಾರ್ಗಗಳನ್ನು ಬಳಸುತ್ತಿವೆ. ಇದರಿಂದ ಸರಕುಗಳ ಮೇಲೆ ಅವರು ಹೆಚ್ಚು ಶುಲ್ಕ ವಿಧಿಸಬಹುದು ಎಂದು ಯೋಚಿಸುತ್ತಿವೆ.

ಕೋವಿಡ್‌ನಿಂದಾಗಿ ಸಾಗಣೆಯನ್ನು ರದ್ದು ಮಾಡಲಾಗುತ್ತಿದ್ದು, ಇದು ಡೆಲಿವರಿ ಶೆಡ್ಯೂಲ್‌ಗಳ ಮೇಲೆ ಭಾರಿ ಆಘಾತ ಉಂಟು ಮಾಡುತ್ತಿದೆ. ಇದರಿಂದಾಗಿ ಹಲವು ಕಂಪನಿಗಳು ಹೆಚ್ಚುವರಿ ವೆಚ್ಚ ಭರಿಸುವಂತಾಗಿದೆ. ಹೀಗೆ ಮಾಡುವ ಮೂಲಕ ಅಮೆರಿಕದ ರಜಾ ಸೀಸನ್ ಆರಂಭಕ್ಕೂ ಮುನ್ನ ಸರಕನ್ನು ತಲುಪಿಸಬಹುದಾಗಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರು ದಾವೆ ಕುರಿತ ಶುಲ್ಕಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಪರಿಣಾಮಗಳು

ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಿಗೆ ಈ ಬೆಳವಣಿಗೆಗಳು ಆಘಾತಕಾರಿಯಾಗಿದೆ. ಅದರಲ್ಲೂ ಬೆಳೆಯುತ್ತಿರುವ ಮತ್ತು ಕ್ಷೀಣ ಆರ್ಥಿಕತೆಯನ್ನು ಹೊಂದಿರುವ ಭಾರತಕ್ಕೆ ಹಲವು ಕಾರಣದಿಂದ ಇದು ಆಘಾತಕಾರಿಯಾಗಿದೆ. ಮೊದಲನೆಯದಾಗಿ ವ್ಯಾಪಾರವು ದುಪ್ಪಟ್ಟು ಆರ್ಥಿಕತೆ ಪರಿಣಾಮವನ್ನು ಹೊಂದಿರುತ್ತದೆ. ಅಂದರೆ ವ್ಯಾಪಾರದಿಂದ ಉದ್ಭವವಾಗುವ ಒಂದು ರೂಪಾಯಿಯು ಆರ್ಥಿಕತೆಯ ಮೇಲೆ 2 ರೂಪಾಯಿ ಪರಿಣಾಮ ಉಂಟು ಮಾಡುತ್ತದೆ. ಮತ್ತು ಇದು ಕುಸಿದರೆ ಮತ್ತು ವಿಳಂಬವಾಗಿ ಚೇತರಿಸಿಕೊಂಡರೆ ಆರ್ಥಿಕತೆ ಚೇತರಿಕೆಗೂ ಹೆಚ್ಚು ಸಮಯ ಹಿಡಿಯುತ್ತದೆ.

ಎರಡನೆಯದಾಗಿ, ಅಭಿವೃದ್ಧಿಗೊಳ್ಳುತ್ತಿರುವ ದೇಶಗಳು ಬಹುತೇಕ ಕಚ್ಚಾ ಸಾಮಗ್ರಿಗಳನ್ನು ರಫ್ತು ಮಾಡುತ್ತವೆ ಮತ್ತು ಕಡಿಮೆ ಮೌಲ್ಯದ ಸಾಮಗ್ರಿಯ ವಹಿವಾಟು ನಡೆಸುತ್ತವೆ. ಮೂರನೆಯದಾಗಿ, ಭಾರತದಂತಹ ಬಹುತೇಕ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳು, ಆದಾಯ, ಬಂಡವಾಳ ಮತ್ತು ವಿತ್ತೀಯ ಕೊರತೆಯನ್ನು ಹೊಂದಿರುತ್ತವೆ.

ಅಂದರೆ, ಈ ದೇಶಗಳು ದೀರ್ಘ ಸಮಯದವರೆಗೆ ವ್ಯತ್ಯಯವನ್ನು ತಡೆದುಕೊಳ್ಳಲಾರವು. ಜರ್ಮನಿ, ಜಪಾನ್ ಮತ್ತು ಚೀನಾದಷ್ಟು ತಾಳಿಕೆ ಸಾಮರ್ಥ್ಯವನ್ನು ಇವು ಹೊಂದಿರುವುದಿಲ್ಲ. ಇದರಿಂದಾಗಿ ಆದಾಯ ಕಡಿಮೆಯಾಗುತ್ತದೆ, ಉದ್ಯೋಗ ನಷ್ಟವಾಗುತ್ತದೆ. ಇದು ಕರೆನ್ಸಿಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಆರ್ಥಿಕ ಸಮಸ್ಯೆಯು ಕರೆನ್ಸಿ ಸಮಸ್ಯೆಯಾಗಿ ಪರಿವರ್ತನೆಯಾದರೆ, ಇಳಿಕೆ ಗತಿಯನ್ನು ತಡೆಯುವುದು ಅತ್ಯಂತ ಕಷ್ಟಕರ.

ಆದರೆ ಈ ಕುಸಿತಕ್ಕೆ ಅನುಕೂಲವೂ ಇದೆ. ತಿಂಗಳುಗಟ್ಟಲೆ ಲಾಕ್‌ಡೌನ್ ಆದ ನಂತರದಲ್ಲಿ ಈಗ ವಿಶ್ವಕ್ಕೆ ಉತ್ಪಾದನೆ ಮಾಡುವ ಅಗತ್ಯ ಉಂಟಾಗುತ್ತದೆ. ಈವರೆಗೆ ಕಡಿಮೆ ಗತಿಯಲ್ಲಿ ಸಾಗಣೆಯಾಗುತ್ತಿದ್ದ ಸರಕುಗಳ ಸಂಗ್ರಹದ ಉದ್ದೇಶಕ್ಕೆ ಹೆಚ್ಚು ವೇಗದಲ್ಲಿ ಸಾಗಣೆ ಮಾಡುವ ಅಗತ್ಯವಿರುತ್ತದೆ. ಅಂದರೆ, ಅತ್ಯಂತ ಅಲ್ಪ ಅವಧಿಯಲ್ಲಿ ಒಂದಷ್ಟು ಸರಕು ಸಾಗಣೆಯನ್ನು ವಿಶ್ವ ಮರು ಆರಂಭಿಸಬೇಕು. ಎಲ್ಲ ಫ್ಯಾಕ್ಟರಿ ಮತ್ತು ವ್ಯಾಪಾರವನ್ನು ಮರು ಆರಂಭ ಮಾಡದಿದ್ದರೂ, ಒಂದಷ್ಟು ವಹಿವಾಟು ಆರಂಭವಾಗಲೇಬೇಕು.

ವಿಶ್ವ ಈ ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳುವವರೆಗೆ ಅಲ್ಪಾವಧಿ ನಿರಾಳತೆಯನ್ನು ಇವು ನೀಡಬಲ್ಲವು. ಇನ್ನೊಂದು ಪ್ರಮುಖ ಸಂಗತಿಯೆಂದರೆ, ಈಗಾಗಲೇ ಆರು ತಿಂಗಳು ಕಳೆದಿದ್ದು, ಕೋವಿಡ್‌ ಗೆದ್ದು ಬಂದವರು ಅನಿಶ್ಚಿತತೆಯಿಂದ ಹೊರಬಂದಿರುತ್ತಾರೆ. ಅವರು ಹೊಸ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಅನಿಶ್ಚಿತತೆಯೇ ಈಗ ಸಹಜ ಎಂಬುದಾಗಿರುವುದರಿಂದ, ಇದಕ್ಕೆ ನಾವು ರೂಢಿಯಾಗುತ್ತೇವೆ. ಹೀಗಾಗಿ ಜನರಿಗೆ ಈ ಸನ್ನಿವೇಶ ಅತ್ಯಂತ ಸಹಜ ಎಂಬ ಭಾವ ಮೂಡುತ್ತದೆ. ಇದು ಒಂದು ರೀತಿಯಲ್ಲಿ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.

ವಿಶೇಷ ಅಂಕಣ ಬರಹ: ಡಾ. ಎಸ್‌.ಅನಂತ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.