ETV Bharat / bharat

ಪಿ.ವಿ.ನರಸಿಂಹರಾವ್ ಜನ್ಮ ಶತಾಬ್ಧಿ: ಹಲವು ಗೋಜಲುಗಳ ಬಿಡಿಸಿದ ರಾಜಕೀಯ ಸರದಾರ

author img

By

Published : Jun 28, 2020, 10:21 AM IST

ರಾವ್ ಅವರಲ್ಲಿ ನಾನು ಗಮನಿಸಿದ ಸಂಗತಿ ಎಂದರೆ ತಮ್ಮ ರಾಜಕೀಯ ವಿರೋಧಿಗಳು (ಹೆಚ್ಚಾಗಿ ತಮ್ಮದೇ ಪಕ್ಷದ ಕಾಂಗ್ರೆಸ್​ನಿಂದ) ಸೃಷ್ಟಿಸಿದ ಅನೇಕ ಬಿಕ್ಕಟ್ಟುಗಳ ನಡುವೆಯೂ ಅವರು ತಣ್ಣಗೆ, ಶಾಂತವಾಗಿ ಇರುತ್ತಿದ್ದರು. ಎಂದಿಗೂ ತೊಂದರೆಗೀಡಾದವರಂತೆ ಕಾಣುತ್ತಿರಲಿಲ್ಲ. ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಘಟನೆಗಳ ನಿಭಾಯಿಸುವಿಕೆಗೆ ಸಂಬಂಧಿಸಿದಂತೆ ಟೀಕೆಗಳು ಎದುರಾದಾಗಲೂ ಆಡಳಿತಾತ್ಮಕ ಮತ್ತು ರಾಜಕೀಯ ಸಮಸ್ಯೆಗಳನ್ನು ಅವರು ಸಮಚಿತ್ತದಿಂದ ಎದುರಿಸಿದ್ದರು.

ಪಿ.ವಿ ನರಸಿಂಹರಾವ್ ಜನ್ಮ ಶತಾಬ್ಧಿ
ಪಿ.ವಿ ನರಸಿಂಹರಾವ್ ಜನ್ಮ ಶತಾಬ್ಧಿ

2020ರ ಜೂನ್ 28, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಜನ್ಮ ಶತಮಾನೋತ್ಸವದ ದಿನ. ರಾಷ್ಟ್ರ ನಿರ್ಮಾಣ, ಸಾರ್ವಜನಿಕ ನೀತಿ ಹಾಗೂ ಆಡಳಿತದ ಬಗ್ಗೆ ಒಳನೋಟ ಮತ್ತು ವಿದ್ವತ್ತು ಇದ್ದ ಕಾರಣಕ್ಕಾಗಿ ಅವರನ್ನು ಆಧುನಿಕ ಚಾಣಕ್ಯ ಎನ್ನಲಾಗುತ್ತದೆ. ಅಲ್ಪಬಲದ ಸರ್ಕಾರವನ್ನು 5 ವರ್ಷಗಳ ಪೂರ್ಣ ಅವಧಿಯವರೆಗೆ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಜನ ಸಾಮಾನ್ಯರ ಕಣ್ಣಲ್ಲಿ ಕೂಡ ಅವರು ಆಧುನಿಕ ಚಾಣಕ್ಯ. ಅವರೊಬ್ಬ ಸುಧಾರಕ, ಶಿಕ್ಷಣ ತಜ್ಞ, ಭಾಷಾಶಾಸ್ತ್ರಜ್ಞ ಹಾಗೂ ಪ್ರಬುದ್ಧ ವಿದ್ವಾಂಸರಾಗಿದ್ದರು.

ರಾವ್ ತಮ್ಮ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ಜೊತೆಗೂಡಿ ಭಾರತೀಯ ಆರ್ಥಿಕತೆಯನ್ನು ಲೈಸೆನ್ಸ್ ರಾಜ್ ಕಪಿಮುಷ್ಠಿಯಿಂದ ಬಿಡಿಸಿದರು. ಉದಾರಿಕರಣದತ್ತ ಕೊಂಡೊಯ್ದರು. ಆ ಮೂಲಕ ಜಾಗತಿಕ ಸ್ಪರ್ಧೆಗೆ ದೇಶ ತೆರೆದುಕೊಳ್ಳುವಂತೆ ಮಾಡಿದರು. ಈ ಕುರಿತು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆದಿದ್ದು, ನಾನದನ್ನು ಪುನರಾವರ್ತಿಸುವುದಿಲ್ಲ. ಜಾಗತಿಕ ಆರ್ಥಿಕತೆಯಲ್ಲಿ ಮಂದಗತಿಯ ಪ್ರಗತಿಯಿಂದ ಗುರುತಿಸಿಕೊಂಡಿತ್ತು ‘ಹಿಂದೂ ಬೆಳವಣಿಗೆಯ ದರ’. ಭಾರತ ಐದು ದಶಕಗಳಿಂದಲೂ ಆ ಮುಗ್ಗಟ್ಟಿನಲ್ಲಿ ನಲುಗುತ್ತಿದ್ದಾಗ ರಾವ್ ಪರಿಹಾರ ರೂಪವಾಗಿ ಬಂದಿದ್ದರು.

ನಾನು ಜೂನ್ 1994ರಿಂದ ಅಕ್ಟೋಬರ್ 1997ರವರೆಗೆ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಅವರೆಂದೂ ಅನುಕೂಲ ಸಿಂಧು ರಾಜಕಾರಣಕ್ಕೆ ಮುಂದಾದವರಲ್ಲ ಎಂಬುದಕ್ಕೆ ಉದಾಹರಣೆ ವಿರೋಧ ಪಕ್ಷದ ನಾಯಕ ಸುಬ್ರಮಣ್ಯಂ ಸ್ವಾಮಿ ಅವರಿಗೆ ಕ್ಯಾಬಿನೆಟ್ ಶ್ರೇಣಿಯ ಸ್ಥಾನಮಾನ ನೀಡಿದ್ದು. ಮತ್ತೊಬ್ಬ ವಿರೋಧ ಪಕ್ಷದ ನಾಯಕ ಮತ್ತು ಬಹುದೊಡ್ಡ ವಾಗ್ಮಿ ಎನಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಿಶ್ವಸಂಸ್ಥೆ ಸಭೆಗೆ ಭಾರತದ ಪ್ರತಿನಿಧಿಯಾಗಿ ಕಳುಹಿಸಿದ್ದು. ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯೇತರ ವ್ಯಕ್ತಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರನ್ನು ಭಾರತದ ಹಣಕಾಸು ಮಂತ್ರಿಯಾಗಿ ನೇಮಿಸಿದ್ದು ಮರೆಯಲಾಗದ ಸಂಗತಿ.

ರಾವ್ ಅವರಲ್ಲಿ ನಾನು ಗಮನಿಸಿದ ಸಂಗತಿ ಎಂದರೆ ತಮ್ಮ ರಾಜಕೀಯ ವಿರೋಧಿಗಳು (ಹೆಚ್ಚಾಗಿ ತಮ್ಮದೇ ಪಕ್ಷದ ಕಾಂಗ್ರೆಸ್​ನಿಂದ) ಸೃಷ್ಟಿಸಿದ ಅನೇಕ ಬಿಕ್ಕಟ್ಟುಗಳ ನಡುವೆಯೂ ಅವರು ತಣ್ಣಗೆ, ಶಾಂತವಾಗಿ ಇರುತ್ತಿದ್ದರು. ಎಂದಿಗೂ ತೊಂದರೆಗೀಡಾದವರಂತೆ ಕಾಣುತ್ತಿರಲಿಲ್ಲ. ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಘಟನೆಗಳ ನಿಭಾಯಿಸುವಿಕೆಗೆ ಸಂಬಂಧಿಸಿದಂತೆ ಟೀಕೆಗಳು ಎದುರಾದಾಗಲೂ ಆಡಳಿತಾತ್ಮಕ ಮತ್ತು ರಾಜಕೀಯ ಸಮಸ್ಯೆಗಳನ್ನು ಅವರು ಸಮಚಿತ್ತದಿಂದ ಎದುರಿಸಿದ್ದರು. ಬಾಬರಿ ಮಸೀದಿ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಲಿಬ್ರಹನ್ ಆಯೋಗ, ಪ್ರಧಾನಮಂತ್ರಿ ತೆಗೆದುಕೊಂಡ ನಿಲುವಿಗಾಗಿ ಅವರನ್ನು ದೂಷಿಸಲಾಗದು ಎಂದು ಅಭಿಪ್ರಾಯಪಟ್ಟಿತು. ‘ಸ್ಥಿತಪ್ರಜ್ಞ’ ಎಂಬುದಕ್ಕೆ ಅವರೊಂದು ವಿಶಿಷ್ಟ ಉದಾಹರಣೆ. ಅವರ ಆಡಳಿತದ ಅತ್ಯಂತ ವಿಶಿಷ್ಟ ವೈಖರಿ ಎಂದರೆ ಭಾರತದ ಸಂವಿಧಾನಕ್ಕೆ ಅವರ ಸಂಪೂರ್ಣ ಸಮರ್ಪಣೆ. ಪ್ರಧಾನಿ ಅಂಕಿತ ಪಡೆಯಲು ಯಾವುದೇ ಹೊಸ ನೀತಿಯ ಕಡತ ಅವರ ಎದುರು ಹೋದಾಗ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ: “ಇದು ಸಾಂವಿಧಾನಿಕವೇ?". ಎಂಬುದಾಗಿತ್ತು.

ಭಾರತದ “ಲುಕ್ ಈಸ್ಟ್ ನೀತಿ” ಯನ್ನು ವಿಕಸಿಸಿದ ಮೊದಲ ನಾಯಕ ಇವರು. ಅಲ್ಲಿಯವರೆಗೆ ಪಾಶ್ಚಾತ್ಯ ರಾಷ್ಟ್ರಗಳ ಕಡೆಗೆ ಅಥವಾ ಕೊಲ್ಲಿ ದೇಶಗಳತ್ತ ಮಾತ್ರ ಗಮನ ಹರಿಸಲಾಗುತ್ತಿತ್ತು. ಬಾಂಗ್ಲಾದೇಶ, ಮಯನ್ಮಾರ್, ಥಾಯ್ಲೆಂಡ್ ಮತ್ತಿತರ ಆಸಿಯಾನ್ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದರಿಂದ ಮಾತ್ರ ಏಷ್ಯಾದಲ್ಲಿ ಭಾರತದ ಸ್ಥಾನ ಗಟ್ಟಿಯಾಗಬಹುದು ಎಂದು ಅವರು ಭಾವಿಸಿದ್ದರು. 1992ರ ಹೊತ್ತಿಗೆ ಇಸ್ರೇಲ್ ಜೊತೆ ಬಲವಾದ ಸಂಬಂಧ ಬೆಳೆಸಿ ಅದು ನವದೆಹಲಿಯಲ್ಲಿ ತನ್ನ ರಾಯಭಾರ ಕಚೇರಿ ತೆರೆಯುವಂತೆ ಮಾಡಿಕೊಟ್ಟದ್ದು ಇದೇ ನರಸಿಂಹರಾವ್. ಇರಾನ್‌ನೊಂದಿಗೆ ಕೂಡ ಬಲವಾದ ಬಾಂಧವ್ಯ ಬೆಸೆದರು. ದೇಶದ ಪರಮಾಣು ಪರೀಕ್ಷೆಗಳನ್ನು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಪಿವಿಎನ್ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು. ವಾಸ್ತವವಾಗಿ, 1996ರ ಮೇನಲ್ಲಿ, ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳ ಮೊದಲು, ಡಾ. ಅಬ್ದುಲ್ ಕಲಾಂ ಅವರಿಗೆ ಪರಮಾಣು ಬಾಂಬ್ ಪರೀಕ್ಷೆಗೆ ಸಿದ್ಧರಾಗುವಂತೆ ಆದೇಶ ನೀಡಿದ್ದರು. ಹಾಗಿದ್ದರೂ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ವಿರುದ್ಧ ಹೊರಹೊಮ್ಮಿದವು. ಅಂತಿಮವಾಗಿ 1998 ರಲ್ಲಿ ವಾಜಪೇಯಿ ಸರ್ಕಾರ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿತು.

1993-97ರ ಅವಧಿಯಲ್ಲಿ ಕಾಶ್ಮೀರದಲ್ಲಿ ಬಂಡಾಯ ಪರಾಕಾಷ್ಠೆ ತಲುಪಿದಾಗ ಕೂಡ ಅವರು ಕಾಶ್ಮೀರ ಸಮಸ್ಯೆ ಪರಿಹರಿಸಲು ತೀವ್ರ ಅಪೇಕ್ಷೆ ಹೊಂದಿದ್ದರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸುವ ಯಾವುದೇ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಸಿದ್ಧ ಎಂದು ಡಾ.ಫಾರೂಕ್ ಅಬ್ದುಲ್ಲಾ ಮತ್ತಿತರ ಮುಖಂಡರಿಗೆ ತಿಳಿಸಿದರು. 8 ವರ್ಷಗಳ ಕಾಲ ಅಲ್ಲಿ ಯಾವುದೇ ಚುನಾವಣೆಗಳು ನಡೆದಿರಲಿಲ್ಲ. ಚುನಾಯಿತ ಸರ್ಕಾರ ಪಡೆಯುವುದು ಜನರ ಹಕ್ಕು. ಅದನ್ನು ನಿರಾಕರಿಸಲಾಗದು ಎಂದು ಅವರು ನಂಬಿದ್ದರು. ಹೀಗಾಗಿ ಸಂಸತ್ತು ಮತ್ತು ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಮುಂದಾದರು. ಚುನಾವಣೆ ಎಂಬುದು ಬಂಡಾಯಕ್ಕೆ ಪ್ರತಿವಿಷವಾಗಿ ಪರಿಣಮಿಸಬಲ್ಲದು. ಕಾಶ್ಮೀರದಂತೆಯೇ ಗಲಭೆ ಪೀಡಿತ ಅಸ್ಸಾಂ ಮತ್ತು ಪಂಜಾಬ್‌ನಲ್ಲಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದರು. ಅಂತಿಮವಾಗಿ ಆ ರಾಜ್ಯಗಳು ಸಹಜ ಸ್ಥಿತಿಗೆ ಮರಳಲು ಚುನಾವಣೆಗಳು ದಾರಿ ಮಾಡಿಕೊಟ್ಟವು.

ರಾವ್ ಅವರು ನಾಗಾಲ್ಯಾಂಡ್ ಬಂಡುಕೋರ ಸಂಘಟನೆಗಳೊಂದಿಗೆ ಸಂವಾದ ಪ್ರಾರಂಭಿಸಿದರು ಎಂಬುದು ಅನೇಕರಿಗೆ ತಿಳಿದಿಲ್ಲ. 1995ರ ಜೂನ್​ನಲ್ಲಿ ಅವರು ಪ್ಯಾರಿಸ್​ನಲ್ಲಿ ನಾಗಾಲ್ಯಾಂಡಿನ ಭೂಗತ ನಾಯಕರಾದ ಮುಯಿವಾ ಮತ್ತು ಇಸಾಕ್ ಸ್ವಾರನ್ನು ಭೇಟಿಯಾದರು. ಇದಕ್ಕೂ ಮುನ್ನ ನಾಗಾ ಸಮಸ್ಯೆಯನ್ನು ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಸಮಸ್ಯೆಯೆಂದು ಪರಿಗಣಿಸಲಾಗಿತ್ತು. ಇದು ರಾಜಕೀಯ ಸಮಸ್ಯೆ ಎಂಬ ನಾಗಾ ನಾಯಕರ ವಾದವನ್ನು ರಾವ್ ಒಪ್ಪಿ ಅವರನ್ನು ಮಾತುಕತೆಗೆ ಆಹ್ವಾನಿಸಿದರು. 1997ರ ಆಗಸ್ಟ್ ವೇಳೆಗೆ ದಂಗೆಕೋರರೊಟ್ಟಿಗೆ ಕದನ ವಿರಾಮ ಏರ್ಪಡಲು ಅವರ ಈ ನಿರ್ಧಾರ ಕಾರಣವಾಯಿತು ಮತ್ತು ರಾಜಕೀಯ ಮಾತುಕತೆಗೆ ಮುನ್ನುಡಿ ಬರೆಯಿತು. ನಾಗಾಲ್ಯಾಂಡ್ ಮತ್ತು ನಾಗಾ ಸಮುದಾಯ ವಾಸಿಸುವ ಈಶಾನ್ಯದ ಇತರ ಭಾಗಗಳಲ್ಲಿ ಶಾಂತಿ ಮೂಡಿತು.

ಅಧಿಕಾರದಲ್ಲಿದ್ದಾಗ ಮತ್ತು ಆ ಹುದ್ದೆ ತೊರೆದ ಬಳಿಕವೂ ಹಲವಾರು ಕ್ರಿಮಿನಲ್ ಪ್ರಕರಣಗಳ ಕಿರುಕುಳಕ್ಕೆ ತುತ್ತಾದ ಏಕೈಕ ಪ್ರಧಾನಿ ರಾವ್. ತನಿಖೆ ಹಾಗೂ ವಿಚಾರಣೆಗೆ ಹಲವು ವರ್ಷಗಳು ಹಿಡಿದು ರಾವ್ ಅವರನ್ನು ಜರ್ಜರಿತಗೊಳಿಸಿದವು. 1996 ರಿಂದ 2002 ರವರೆಗೆ ಹಿಂಜಿದ ಜೆಎಂಎಂ ಭ್ರಷ್ಟಾಚಾರ ಪ್ರಕರಣ, ಸೇಂಟ್ ಕಿಟ್ಸ್ ಪ್ರಕರಣ, ಲಖುಭಾಯ್ ಪಠಾಣ್ ಪ್ರಕರಣ ಇವುಗಳಲ್ಲಿ ಮುಖ್ಯವಾದವು. ಈ ಎಲ್ಲಾ ಪ್ರಕರಣಗಳಲ್ಲಿ ಅಂತಿಮವಾಗಿ ಅವರು ಮುಕ್ಕಾಗದೆ ಯಶಸ್ವಿಯಾಗಿ ಹೊರಬಂದರು. ಈ ಎಲ್ಲಾ ಪ್ರಕರಣಗಳು ರಾಜಕೀಯ ಭಿನ್ನಮತೀಯರಿಂದ ಪ್ರಚೋದಿತಗೊಂಡಿದ್ದವು. ಅನೇಕ ಕಾಂಗ್ರೆಸ್ಸಿಗರು ಮತ್ತು ಕೆಲವು ವಿರೋಧ ಪಕ್ಷದ ನಾಯಕರು ಎಸಗಿದ ಭ್ರಷ್ಟಾಚಾರದ ವಿರುದ್ಧ ಪಿವಿಎನ್ ಸಿಬಿಐ ತನಿಖೆಗೆ ಆದೇಶಿಸಿದ್ದರು. ಜೈನ್ ಡೈರಿಯ ಉಲ್ಲೇಖದ ಆಧಾರದ ಮೇಲೆ (ಜೈನ ಹವಾಲಾ ಪ್ರಕರಣ ಎಂದೇ ಕುಖ್ಯಾತ) ಹೀಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗಾಗಿ ಆ ನಾಯಕರೆಲ್ಲಾ ರಾವ್ ವಿರುದ್ಧ ಅಸಮಾಧಾನಗೊಂಡಿದ್ದರು. ಆದರೆ ಇವರಿಗೆ ಯಾವುದೇ ಪರ್ಯಾಯಗಳಿರಲಿಲ್ಲ. ಏಕೆಂದರೆ ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್, ವಾರಕ್ಕೊಮ್ಮೆ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆದರೂ ತಮ್ಮದೇ ಪಕ್ಷದ ಕೆಲವು ನಾಯಕರು ರಾವ್ ವಿರುದ್ಧ ನಿರ್ದಯವಾಗಿ ನಡೆದುಕೊಂಡರು ಎಂಬುದು ದುರದೃಷ್ಟಕರ.

ರಾವ್ ಅವರು 1996ರ ಮೇನಲ್ಲಿ ಪ್ರಧಾನಿ ಸ್ಥಾನ ತೊರೆದರು ಮತ್ತು ಮಾಜಿ ಪ್ರಧಾನಿಗಳಿಗೆ ನಿಯೋಜಿಸಲಾದ ಸರ್ಕಾರಿ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ನಾನು ಆಗ ದೆಹಲಿಯಲ್ಲಿಯೇ ಇದ್ದೆ. ಆಗಾಗ್ಗೆ ರಾವ್ ಸಾಹೇಬರನ್ನು ಅವರ ಮನೆಯಲ್ಲಿ ಭೇಟಿಯಾಗುತ್ತಿದ್ದೆ. ಆಗ ಆ ಮಹಾನ್ ವ್ಯಕ್ತಿ ಏಕಾಂಗಿ ಜೀವನ ನಡೆಸುತ್ತಿದ್ದರು. ಬರಹ ಮತ್ತು ಪುಸ್ತಕಗಳಲ್ಲಿ ಮುಳುಗಿಹೋಗಿದ್ದರು. ಆ ಮಹಾನ್ ಚೇತನಕ್ಕೆ ಭಾರತ ರತ್ನ ನೀಡಲು ಇದು ಸೂಕ್ತ ಸಮಯವಾಗಿದ್ದು, ಹಿರಿಯ ರಾಜಕಾರಣಿ ನಟವರ್ ಸಿಂಗ್ ಅವರು ರಾವ್ ಕುರಿತು ಆಡಿದ ಮಾತುಗಳು ಹೀಗಿವೆ: “ಭಾರತದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಣ್ಣಿನಲ್ಲಿ ಅವರ ಬೇರುಗಳು ಆಳವಾಗಿ ಇಳಿದಿವೆ. ಅವರಿಗೆ ‘ಭಾರತವನ್ನು ಅನ್ವೇಷಿಸುವ’ ದರ್ದು ಇರಲಿಲ್ಲ.”

- ಕೆ ಪದ್ಮನಾಭಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.