ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ

author img

By

Published : Oct 18, 2021, 1:05 PM IST

bengal-youth-bjp-leader-shot-dead-bjp-points-fingers-at-trinamool
ಗುಂಡು ಹಾರಿಸಿ ಬಿಜೆಪಿ ಯುವ ಮುಖಂಡನ ಹತ್ಯೆ ()

ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ನಾಯಕನ ಹತ್ಯೆ ನಡೆದಿದೆ. ಈ ಘಟನೆ ಬೆನ್ನಲ್ಲೆ ಬಿಜೆಪಿ ಹಾಗೂ ಟಿಎಂಸಿ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.

ಕೋಲ್ಕತ್ತಾ: ಇಲ್ಲಿನ ಇಟಹಾರ್​ನಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಹತ್ಯೆಯಾಗಿದ್ದು ರಾಜಕೀಯ ಕೆಸರೆರಚಾಟ ಉಂಟು ಮಾಡಿದೆ. ಉತ್ತರ ದಿನಾಜ್‌ಪುರ್ ಜಿಲ್ಲೆಯ ಇಟಹಾರ್‌ನ ಯುವ ಬಿಜೆಪಿ ನಾಯಕ ಮಿಥುನ್ ಘೋಷ್ ಅವರನ್ನು ಮನೆ ಮುಂಭಾಗದಲ್ಲೇ ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ.

ಭಾನುವಾರ ರಾತ್ರಿ 11 ಗಂಟೆಗೆ ಘೋಷ್ ಅವರು ರಾಜಗ್ರಾಮ್​ನಲ್ಲಿರುವ ತಮ್ಮ ಮನೆಯ ಮುಂದೆ ನಿಂತಿದ್ದಾಗ ಘಟನೆ ನಡೆದಿದೆ. ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಹೊಟ್ಟೆಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ರಾಯಗಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಘೋಷ್ ಸಾವು ಉತ್ತರ ದಿಂಜಾಪುರದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ತೃಣಮೂಲ ಕಾಂಗ್ರೆಸ್​​ ಪಕ್ಷ ಈ ಹತ್ಯೆಗೆ ಕಾರಣ ಎಂದು ಬಿಜೆಪಿ ಆರೋಪಿಸಿದ್ದು, ಟಿಎಂಸಿ ಅಲ್ಲಗಳೆದಿದೆ.

'ಟಿಎಂಸಿ ಗೂಂಡಾಗಳಿಗೆ ಆಶ್ರಯ ತಾಣವಾಗಿದೆ. ಮಿಥುನ್ ಘೋಷ್ ಅವರು ಪಕ್ಷದ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಅವರ ಮನೆ ಇಟಹಾರ್ ವಿಧಾನಸಭಾ ಕ್ಷೇತ್ರದ ರಾಜಗ್ರಾಮದಲ್ಲಿದೆ. ಆತನಿಗೆ ಈ ಹಿಂದೆ ಫೋನಿನಲ್ಲಿ ಜೀವ ಬೆದರಿಕೆ ಹಾಕಲಾಗಿತ್ತು. ನಾವು ಈ ಕುರಿತಾಗಿ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದೇವೆ. ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಜನರು ಮಿಥುನ್‌ಗೆ ಬೆದರಿಕೆ ಹಾಕುತ್ತಿದ್ದರು' ಎಂದು ಬಿಜೆಪಿ ಉತ್ತರ ದಿನಜ್​​​ಪುರ್​ ಜಿಲ್ಲಾಧ್ಯಕ್ಷ ಬಸುದೇಬ್ ಸರ್ಕಾರ್ ಆರೋಪಿಸಿದರು.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಇಟಹಾರ್ ಟಿಎಂಸಿ ಶಾಸಕ ಮೊಶರಫ್ ಹೊಸೇನ್, 'ಟಿಎಂಸಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಕತ್ತಲಲ್ಲಿ ದುಷ್ಕರ್ಮಿಗಳು ಗುಂಡುಹಾರಿಸಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದೆ. ತೃಣಮೂಲ ಕಾಂಗ್ರೆಸ್​​ಗೆ 'ಹತ್ಯಾ' ರಾಜಕೀಯದಲ್ಲಿ ನಂಬಿಕೆಯಿಲ್ಲ' ಎಂದರು.

ಇದನ್ನೂ ಓದಿ: ಪ್ರಯಾಣಿಕರಿಗೆ 'ರೈಲ್‌ ರೋಖೋ' ಬಿಸಿ : ಪಂಜಾಬ್-ಹರಿಯಾಣದಲ್ಲಿ ಹಳಿ ಮೇಲೆ ಕುಳಿತು ರೈತರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.