ETV Bharat / bharat

ಬಾರಾ ಹತ್ಯಾಕಾಂಡ: 31 ವರ್ಷದ ಬಳಿಕ ಆರೋಪಿ ಕಿರಾನಿ ಯಾದವ್​ಗೆ​ ಜೀವಾವಧಿ ಶಿಕ್ಷೆ

author img

By

Published : Mar 2, 2023, 8:15 PM IST

ಬಿಹಾರದ ಗಯಾದಲ್ಲಿ ನಡೆದ ಹತ್ಯಾಕಾಂಡ - ಪ್ರಮುಖ ಆರೋಪಿ ಕಿರಾನಿ ಯಾದವ್‌ಗೆ ಜೀವಾವಧಿ ಶಿಕ್ಷೆ- 31 ವರ್ಷಗಳ ಬಳಿಕ ಹತ್ಯಾಕಾಂಡದಲ್ಲಿ ಮಡಿದವರಿಗೆ ನ್ಯಾಯ

bara-massacre-convict-kirani-yadav-to-be-sentenced
ಬಾರಾ ಹತ್ಯಾಕಾಂಡ : 31 ವರ್ಷದ ಬಳಿಕ ಆರೋಪಿ ಕಿರಾಣಿ ಯಾದವ್​ ಜೀವಾವಧಿ ಶಿಕ್ಷೆ

ಗಯಾ (ಬಿಹಾರ) : ಬಿಹಾರದ ಬಾರಾ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಕ್ಸಲೇಟ್​​ ರಾಮಚಂದ್ರ ಯಾದವ್​ ಅಲಿಯಾಸ್​​ ಕಿರಾನಿ ಯಾದವ್‌ಗೆ ಗಯಾ ಸಿವಿಲ್​ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸುದೀರ್ಘ ಮೂರು ದಶಕಗಳ ಕಾಲ ನಡೆದ ವಿಚಾರಣೆ ಬಳಿಕ ನ್ಯಾಯಾಲಯವು ಇಂದು ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.

1992ರ ಫೆ.12ರಂದು ಗಯಾ ಬಳಿಯ ಬಾರಾ ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಕಿರಾನಿ ಯಾದವ್ ಸುಮಾರು 35 ಮಂದಿಯನ್ನು ಕೊಂದ ಆರೋಪ ಹೊತ್ತಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯವು ಫೆ.26ರಂದು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಕಿರಾನಿ ಯಾದವ್​ನನ್ನು ದೋಷಿ ಎಂದು ಹೇಳಿತ್ತು. ಬಳಿಕ ತೀರ್ಪನ್ನು ಮಾ.2ಕ್ಕೆ ಕಾಯ್ದಿರಿಸಿದ್ದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಂದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷದ 5 ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.

ಪ್ರಾಸಿಕ್ಯೂಷನ್​ ಪರ ವಕೀಲ ಪ್ರಭಾತ್ ಕುಮಾರ್ ವಾದ ಮಂಡಿಸಿದ್ದರು. ಅಲ್ಲದೇ ಆರೋಪಿಗಳ ಪರವಾಗಿ ವಕೀಲರಾದ ತಾರಿಕ್ ಅಲಿ ಮತ್ತು ಸುರೇಂದ್ರ ನಾರಾಯಣ್ ವಾದ ಮಂಡಿಸಿದರು. ಇನ್ನು ವಾದ - ಪ್ರತಿವಾದವನ್ನು ಆಲಿಸಿದ ಗಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮನೋಜ್ ಕುಮಾರ್ ತಿವಾರಿ ಈ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ತೀರ್ಪಿನ ವಿರುದ್ಧ ಸುಪ್ರೀಕೋರ್ಟ್​ಗೆ ಹೋಗುವುದಾಗಿ ಆರೋಪಿ ಪರ ವಕೀಲರು ಹೇಳಿದ್ದಾರೆ.

ಏನಿದು ಬಾರಾ ಹತ್ಯಾಕಾಂಡ : 1992ರ ಫೆಬ್ರವರಿ 12ರ ಮಧ್ಯರಾತ್ರಿ ಬಿಹಾರದ ಗಯಾ ಬಳಿಯ ಬಾರಾ ಗ್ರಾಮದಲ್ಲಿ ಮಾವೋವಾದಿ ಕಮ್ಯುನಿಸ್ಟ್​ ಸೆಂಟರ್​ನ (ಎಂಸಿಸಿ) ಸದಸ್ಯರು ಮೇಲ್ಜಾತಿಯ ಭೂಮಿಹಾರ್​ಗಳನ್ನು ಗುರಿಯಾಗಿಸಿ ಹತ್ಯಾಕಾಂಡ ನಡೆಸಿದ್ದರು. ಈ ವೇಳೆ, ಸುಮಾರು 35 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಮೊದಲು ಶಸ್ತ್ರಸಜ್ಜಿತ ಎಂಸಿಸಿ ಸದಸ್ಯರು ಬಾರಾ ಗ್ರಾಮಸ್ಥರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಬಳಿಕ ಗ್ರಾಮದ 35 ಜನರನ್ನು ಇಲ್ಲಿನ ಕಾಲುವೆಯ ದಂಡೆಗೆ ಕರೆದುಕೊಂಡು ಬಂದು ಅವರ ಕೈ ಕಾಲುಗಳನ್ನು ಕಟ್ಟಿ ಹಾಕಿ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಇಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದರು. ಈ ಸಂಬಂಧ ಜಿಲ್ಲೆಯ ಟಿಕಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 31 ವರ್ಷಗಳ ನಂತರ ಈ ಹತ್ಯಾಕಾಂಡದಲ್ಲಿ ಮಡಿದವರ ಕುಟುಂಬಗಳಿಗೆ ನ್ಯಾಯ ಸಿಕ್ಕಿದೆ.

ಇನ್ನು ಬಾರಾ ಹತ್ಯಾಕಾಂಡದ ಪ್ರತೀಕಾರವಾಗಿ 1997ರಲ್ಲಿ ವಿವಿಧ ಪ್ರಕರಣಗಳಲ್ಲಿ 59 ಮಂದಿ ಹತ್ಯೆ ನಡೆಸಲಾಯಿತು. ರಣವೀರ್ ಸೇನಾ ಎಂಬ ಸಂಘಟನೆ ಲಕ್ಷ್ಮಣಪುರ ಬಾಥೆಯಲ್ಲಿ ಸುಮಾರು 59 ಮಂದಿ ಮಾರಣ ಹೋಮಕ್ಕೆ ಕಾರಣರಾಗಿದ್ದರು. ಇದನ್ನು ಲಕ್ಷ್ಮಣಪುರ ಬಾಥೆ ಹತ್ಯಾಕಾಂಡ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : ಮಿನಿ ಬಸ್ ಪಲ್ಟಿ: ಇಬ್ಬರ ಸಾವು 12 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.