ETV Bharat / bharat

ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಮತ್ತೆ ಪ್ರತಿಭಟನೆ: ಬ್ರಿಜ್ ಭೂಷಣ್ ಬಂಧನಕ್ಕೆ ಪಟ್ಟು

author img

By

Published : Apr 24, 2023, 12:50 PM IST

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಖ್ಯಾತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್​ನಲ್ಲಿ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

All parties welcome to join our protest
ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಮತ್ತೆ ಪ್ರತಿಭಟನೆ: ಬ್ರಿಜ್ ಭೂಷಣ್ ಬಂಧನಕ್ಕೆ ಪಟ್ಟು

ನವದೆಹಲಿ : ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಹಿರಿಯ ಕುಸ್ತಿಪಟುಗಳು ತಮ್ಮ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎಲ್ಲ ಪಕ್ಷಗಳಿಗೂ ಸ್ವಾಗತ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಕರೆ ನೀಡಿದ್ದಾರೆ. ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪುನಿಯಾ ಹೇಳಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ರವಿ ದಹಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಇನ್ನೂ ಹಲವಾರು ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪಗಳ ಬಗ್ಗೆ ತನಿಖಾ ಸಮಿತಿ ರಚಿಸಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಆಗ ತಮ್ಮ ಪ್ರತಿಭಟನೆ ಹಿಂಪಡೆದಿದ್ದರು.

ಡಬ್ಲ್ಯುಎಫ್‌ಐ ಮುಖ್ಯಸ್ಥರಾಗಿರುವ ಬ್ರಿಜ್ ಭೂಷಣ್ ಅವರು ಅಪ್ರಾಪ್ತೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶುಕ್ರವಾರ (ಏಪ್ರಿಲ್ 21) ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಖ್ಯಾತ ಕುಸ್ತಿಪಟುಗಳು ಹೇಳಿದ್ದಾರೆ. ಆದರೆ ದೂರು ನೀಡಿ 48 ಗಂಟೆಗಳು ಕಳೆದರೂ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಪುನಿಯಾ ಮಾಧ್ಯಮಗಳಿಗೆ ತಿಳಿಸಿದರು. ಈ ಬಾರಿ ಯಾರ ಬೆಂಬಲವನ್ನೂ ತಿರಸ್ಕರಿಸುವುದಿಲ್ಲ ಮತ್ತು ತಮ್ಮನ್ನು ಬೆಂಬಲಿಸಲು ಬಯಸುವವರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಈ ಬಾರಿ, ಬಿಜೆಪಿ, ಕಾಂಗ್ರೆಸ್, ಎಎಪಿ ಅಥವಾ ಇನ್ನಾವುದೇ ಪಕ್ಷವಾಗಲಿ ನಮ್ಮ ಪ್ರತಿಭಟನೆಗೆ ಸೇರಲು ಸ್ವಾಗತವಿದೆ, ನಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಅವರು ಹೇಳಿದರು. ಈ ಕುರಿತು ಎಫ್​ಐಆರ್​ ದಾಖಲಿಸುವಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಏತನ್ಮಧ್ಯೆ ಕುಸ್ತಿಪಟು ವಿನೇಶ್ ಫೋಗಟ್ ಅವರು ಟ್ವೀಟ್ ಒಂದನ್ನು ಮಾಡಿದ್ದು, ಕುಸ್ತಿಪಟುಗಳು ರಾತ್ರಿಯಿಡೀ ಫುಟ್‌ಪಾತ್‌ನಲ್ಲಿ ಕಳೆದಿದ್ದಾರೆ ಎಂದು ತೋರಿಸುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಡಿಯಂ ಸೆ ಫುಟ್‌ಪಾತ್ ತಕ್ ಎಂದು ಫೋಗಟ್ ಟ್ವೀಟ್​ನಲ್ಲಿ ಬರೆದಿದ್ದಾರೆ.

ಇದೇ ವಿಷಯವಾಗಿ ಜನವರಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಆಗ ಇವರಿಗೆ ಬೆಂಬಲ ಸೂಚಿಸಲು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಹಿರಿಯ ನಾಯಕಿ ಬೃಂದಾ ಕಾರಟ್​ ಆಗಮಿಸಿದ್ದರು. ಆದರೆ ವಿಷಯದಲ್ಲಿ ರಾಜಕೀಯ ನಾಯಕರು ಲಾಭ ಪಡೆಯುವುದು ಬೇಡ ಎಂದು ಹೇಳಿ ಕಾರಟ್​ ಅವರನ್ನು ಪ್ರತಿಭಟನಾ ಸ್ಥಳದಿಂದ ಹೊರಹೋಗುವಂತೆ ಒತ್ತಾಯ ಮಾಡಲಾಗಿತ್ತು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಕುಸ್ತಿಪಟುಗಳು ಜನವರಿಯಲ್ಲಿ ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು. ಕುಸ್ತಿಪಟುಗಳ ದೂರುಗಳ ಬಗ್ಗೆ ತನಿಖೆ ನಡೆಸಲು ಕ್ರೀಡಾ ಸಚಿವಾಲಯವು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಿದೆ.

ಇದನ್ನೂ ಓದಿ : ಟ್ವಿಟರ್ ಯೂಟರ್ನ್: ಪೇ ಮಾಡದಿದ್ದರೂ ಅನೇಕರಿಗೆ ಮರಳಿ ಸಿಕ್ಕ ಬ್ಲೂಟಿಕ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.