ETV Bharat / bharat

ಬೀದಿ ನಾಯಿ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ: ಬಾಲಕನ ಥಳಿಸಿ ಕೊಂದ ನೆರೆಮನೆ ವ್ಯಕ್ತಿ

author img

By

Published : Aug 18, 2023, 9:17 PM IST

Angry neighbor killed 12 year old boy: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 12 ವರ್ಷದ ಬಾಲಕನನ್ನು ಥಳಿಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Angry neighbor killed 12 year old boy when his family saving stray dog from beating in UP
ಬೀದಿ ನಾಯಿಯ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ: ಬಾಲಕನಿಗೆ ಥಳಿಸಿ ಕೊಂದ ಕೀಚಕ

ಕುಶಿನಗರ (ಉತ್ತರ ಪ್ರದೇಶ): ಬೀದಿ ನಾಯಿಯ ರಕ್ಷಣೆಗೆ ಯತ್ನಿಸಿದ್ದ ನೆರೆಯ ಕುಟುಂಬದ ಮೇಲಿನ ಕೋಪದಿಂದ ವ್ಯಕ್ತಿಯೋರ್ವ ಆ ಕುಟುಂಬದ 12 ವರ್ಷದ ಬಾಲಕನನ್ನು ಕೊಲೆ ಮಾಡಿ ಶವ ಚರಂಡಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಮೈನ್​ಪುರ ಗ್ರಾಮದ ನಿವಾಸಿ ಮಧುಕರ್​ ಲಲಿತ್​ ತ್ರಿಪಾಠಿ ಎಂಬವರ ಪುತ್ರಿ ರಮಣ್ ತ್ರಿಪಾಠಿ ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಶಮ್ಶುದ್ದೀನ್​ ಅಲಿಯಾಸ್​ ಮಾಂಗ್ರೂ ಎಂಬಾತನೇ ಬಾಲಕನ ಕೊಲೆಗೈದ ಹಂತಕ. ಈಗಾಗಲೇ ಈತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಗುರುವಾರ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಘಟನೆಯ ಹಿನ್ನೆಲೆ: ''ಬಾಲಕ ರಮಣ್ ತ್ರಿಪಾಠಿ ಕಾಣೆಯಾಗಿರುವ ಬಗ್ಗೆ ಆಗಸ್ಟ್​ 1ರಂದು ಕಾಸಿಯಾ ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಮನೆ ಸುತ್ತಮುತ್ತಲು ಹುಡುಕಾಡಿದರೂ ಪತ್ತೆಯಾಗುತ್ತಿಲ್ಲ ಎಂದು ತಮ್ಮ ದೂರಿನಲ್ಲಿ ಕುಟುಂಬಸ್ಥರು ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ ಮರುದಿನವೇ ಎಂದರೆ ಆಗಸ್ಟ್​ 2ರಂದು ಚರಂಡಿಯಲ್ಲಿ ಬಾಲಕನೋರ್ವನ ಶವ ದೊರೆತ ಬಗ್ಗೆ ಮಾಹಿತಿ ಸಿಕ್ಕಿತ್ತು'' ಎಂದು ಪೊಲೀಸ್​ ಅಧಿಕಾರಿ ಕುಂದನ್​ ಸಿಂಗ್​ ತಿಳಿಸಿದ್ದಾರೆ.

''ಈ ಮೃತದೇಹವನ್ನು ಪರಿಶೀಲಿಸಿದಾಗ ಇದು, ನಾಪತ್ತೆಯಾಗಿದ್ದ ರಮಣ್ ತ್ರಿಪಾಠಿ ಎಂದೇ ಖಚಿತವಾಗಿದೆ. ಈ ವೇಳೆ ಮುಖಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದರಿಂದ ಹೆಚ್ಚಿನ ತನಿಖೆ ಕೈಗೊಂಡ ಬೀದಿ ನಾಯಿ ಕುರಿತಾಗಿ ಜಗಳ ನಡೆದ ವಿಷಯ ಗೊತ್ತಾಗಿದೆ. ಬಾಲಕ ನಾಪತ್ತೆಯಾಗುವ ಕೆಲ ದಿನಗಳ ಹಿಂದೆ ಬೀದಿ ನಾಯಿಗೆ ಆರೋಪಿ ಶಮ್ಶುದ್ದೀನ್​ ಥಳಿಸುತ್ತಿದ್ದ. ಇದನ್ನು ಗಮನಿಸಿದ ತ್ರಿಪಾಠಿ ಕುಟುಂಬ ಥಳಿತಕ್ಕೆ ಒಳಗಾಗುತ್ತಿದ್ದ ನಾಯಿಯನ್ನು ರಕ್ಷಿಸಿತ್ತು. ಈ ವೇಳೆ ಆರೋಪಿ ಅಲ್ಲಿಂದ ತೆರಳಿದ್ದ. ಆದರೆ, ಇದೇ ಕಾರಣಕ್ಕೆ ಆ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ'' ಎಂದು ಅವರು ​ಹೇಳಿದ್ದಾರೆ.

''ಆರೋಪಿ ಶಮ್ಶುದ್ದೀನ್ ಹಾಗೂ ತ್ರಿಪಾಠಿ ಕುಟುಂಬ ನೆರೆಹೊರೆಯವಾಗಿದ್ದು, ಬೀದಿ ನಾಯಿಗೆ ಊಟ ಹಾಕುತ್ತಿದ್ದರು. ಇದರಿಂದ ಅಲ್ಲಿಯೇ ಅದು ವಾಸವಾಗಿತ್ತು. ತ್ರಿಪಾಠಿ ಅವರ ಮನೆಗೆ ಮುಂದೆ ಹೋಗುತ್ತಿದ್ದಾಗ ಆ ನಾಯಿ ಕೂಗಲು ಆರಂಭಿಸಿತ್ತು. ಇದರಿಂದ ಅದಕ್ಕೆ ಥಳಿಸುತ್ತಿದ್ದ. ಇದನ್ನು ರಕ್ಷಣೆ ಮಾಡಿದ್ದ ಕಾರಣಕ್ಕೆ ಕೋಪಗೊಂಡಿದ್ದ ಆರೋಪಿ ಆಗಸ್ಟ್​ 1ರಂದು ಬಾಲಕ ಒಬ್ಬನೇ ಇದ್ದಾಗ ಆತನನ್ನು ಚರಂಡಿ ಬಳಿಗೆ ಕರೆದೊಯ್ದು ಥಳಿಸಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕ ಚರಂಡಿಗೆ ಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದಾನೆ. ಆರೋಪಿಯಿಂದ ಹಲ್ಲೆಗೆ ಒಳಗಾಗಿರುವುದೇ ಬಾಲಕನ ಸಾವಿಗೆ ಕಾರಣ. ಅಲ್ಲದೇ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗಾಯ ಗುರುತುಗಳು ಪತ್ತೆಯಾಗಿವೆ'' ಎಂದು ಅಧಿಕಾರಿ ಕುಂದನ್ ವಿವರಿಸಿದ್ದಾರೆ.

ಇದನ್ನೂ ಓದಿ: MP crime: ಗುಂಡು ಹಾರಿಸಿ ಇಬ್ಬರ ಹತ್ಯೆಗೈದ​ ಬ್ಯಾಂಕ್‌ ಸೆಕ್ಯೂರಿಟಿ ಗಾರ್ಡ್! ಗರ್ಭಿಣಿ ಸೇರಿ 6 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.