ETV Bharat / bharat

ಶವಾಗಾರದಲ್ಲಿ 3 ವರ್ಷಗಳಿಂದ ಅಸ್ಥಿಪಂಜರ: ಸತ್ತವರಿಗೆ ಕೊಡುವ ಗೌರವದಿಂದಲೂ ಕಾನೂನು, ಸುವ್ಯವಸ್ಥೆಯ ಮೌಲ್ಯಮಾಪನ ಅಗತ್ಯ - ಹೈಕೋರ್ಟ್​​​

author img

By ETV Bharat Karnataka Team

Published : Oct 28, 2023, 2:32 PM IST

ಸಾವು ಜೀವನದ ಅತ್ಯಲ್ಪತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಖ್ಯಾತಿಯು ಜೀವನದ ಅರ್ಥಪೂರ್ಣತೆಗೆ ಸಾಕ್ಷಿ. ಸತ್ತವರ ಪ್ರತಿಷ್ಠೆ ಸುರಕ್ಷಿತವಲ್ಲದಿದ್ದರೆ, ಬದುಕಿರುವವರ ಖ್ಯಾತಿಯೂ ಸುರಕ್ಷಿತವಲ್ಲ ಎಂದು ಉತ್ತರ ಪ್ರದೇಶದ ಅಲಹಾಬಾದ್​ ಹೈಕೋರ್ಟ್​​​ ಹೇಳಿದೆ

allahabad-high-court
ಅಲಹಾಬಾದ್​ ಹೈಕೋರ್ಟ್​​​

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಕಳೆದ 3 ವರ್ಷಗಳಿಂದ ಉತ್ತರ ಪ್ರದೇಶದ ಇಟಾವ ಶವಾಗಾರದಲ್ಲಿ ಮಹಿಳೆಯ ಅಸ್ಥಿಪಂಜರವನ್ನು ಅಂತ್ಯಸಂಸ್ಕಾರ ಮಾಡದೆ ಇರಿಸಲಾಗಿದೆ ಎಂಬ ವಿಷಯವನ್ನು ಅಲಹಾಬಾದ್​ ಹೈಕೋರ್ಟ್​​​ ಗಂಭೀರವಾಗಿ ಪರಿಗಣಿಸಿದೆ. ಸತ್ತವರು ಕೂಡ ತಮ್ಮದೇ ಆದ ಹಕ್ಕುಗಳನ್ನು ಹೊಂದಿರುತ್ತಾರೆ, ಆ ಹಕ್ಕುಗಳು ಜೀವಂತ ವ್ಯಕ್ತಿ ಹೊಂದಿರುವಷ್ಟೇ ಪ್ರಮುಖ್ಯತೆ ಪಡೆದಿರುತ್ತವೆ ಎಂದು ಉಚ್ಛ ನ್ಯಾಯಾಲಯ ತಿಳಿಸಿದೆ.

ಶವಾಗಾರದಲ್ಲಿ 3 ವರ್ಷಗಳಿಂದ ಮಹಿಳೆಯ ಅಸ್ಥಿಪಂಜರ ಇರಿಸಲಾಗಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ನು ಪರಿಗಣಿಸಿ ಅಲಹಾಬಾದ್​ ಹೈಕೋರ್ಟ್​ ಶುಕ್ರವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದೆ. ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಅಜಯ್ ಭಾನೋಟ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದ ವಿವರವಾದ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.

ಅಲ್ಲದೇ, ರಾಜ್ಯ ಸರ್ಕಾರವು ನಿರ್ದಿಷ್ಟ ಸಮಯದೊಳಗೆ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಬೇಕಾದ ಯಾವುದಾರೂ ನಿಯಮಗಳನ್ನು ಹೊಂದಿವೆಯೇ ಎಂದು ನ್ಯಾಯಾಲಯ ಕೇಳಿದೆ. ಈ ಪ್ರಕರಣದ ತನಿಖೆಯ ಸ್ಥಿತಿ ಮತ್ತು ಮೃತದೇಹವನ್ನು ಸಂರಕ್ಷಿಸುವ ಸಂಪೂರ್ಣ ಸಮಯ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಡೈರಿ, ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳು, ಅದರ ವರದಿಯ ಬಗ್ಗೆಯೂ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಹೈಕೋರ್ಟ್ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಿತಿನ್ ಶರ್ಮಾ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿ, ನ್ಯಾಯಾಲಯಕ್ಕೆ ಸಹಕರಿಸುವಂತೆ ಕೋರಿದೆ.

ಸತ್ತವರ ಮೌನವು ಅವರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ: ಇಟಾವ ಶವಾಗಾರದಲ್ಲಿ 3 ವರ್ಷಗಳಿಂದ ಮಹಿಳೆಯ ಅಸ್ಥಿಪಂಜರ ಇದೆ. ಈ ಅಸ್ಥಿಪಂಜರವು ತಮ್ಮ ಕಾಣೆಯಾದ ತಮ್ಮ ಮಗಳು ರೀಟಾ ಅವರದ್ದು ಎಂದು ಕುಟುಂಬವೊಂದು ಹೇಳಿಕೊಂಡಿದೆ. ಆದರೆ, ಡಿಎನ್‌ಎ ಪರೀಕ್ಷೆಯ ಅಂತಿಮ ವರದಿ ಬಂದಿಲ್ಲ ಎಂದು ಹೇಳಲಾಗಿದೆ. ಈ ಕುರಿತ ವಿಚಾರಣೆ ನಡೆಸಿದ ನ್ಯಾಯಪೀಠವು, ಸತ್ತವರಿಗೂ ಜೀವಂತ ವ್ಯಕ್ತಿಯಂತೆ ಗೌರವಿಸುವ ಹಕ್ಕಿದೆ ಎಂದು ತಿಳಿಸಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಜೀವಂತ ಜನರನ್ನು ನಡೆಸಿಕೊಳ್ಳುವ ರೀತಿಯಿಂದ ಮಾತ್ರ ಮೌಲ್ಯಮಾಪನ ಮಾಡುವುದಲ್ಲ. ಬದಲಿಗೆ, ಸತ್ತವರಿಗೆ ಕೊಡುವ ಗೌರವದಿಂದ ಕೂಡ ಅದರ ಮೌಲ್ಯಮಾಪನ ಮಾಡಬೇಕು. ಸತ್ತವರ ಮತ್ತು ಬದುಕಿರುವವರ ಖ್ಯಾತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದು ಪ್ರತಿಷ್ಠೆಯ ಪರಿಕಲ್ಪನೆಯ ಸಾರಾಂಶವಾಗಿದೆ. ಸತ್ತವರ ಘನತೆ ಮತ್ತು ಬದುಕಿರುವವರ ಘನತೆಯ ನಡುವಿನ ಯಾವುದೇ ವಿಭಜನೆಯು ಘನತೆಯ ಅರ್ಥವನ್ನು ಕಸಿದುಕೊಳ್ಳುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ಮಗುವಿಗೂ ಜನಿಸುವ ಹಕ್ಕಿದೆ, ಕಾನೂನಿನಡಿ ಕೊಲ್ಲಲು ಸಾಧ್ಯವಿಲ್ಲ: ಗರ್ಭಪಾತ ಕೇಸಲ್ಲಿ ಸುಪ್ರೀಂ ಕೋರ್ಟ್​ ಅಭಿಮತ

ಸಾವು ಜೀವನದ ಅತ್ಯಲ್ಪತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಖ್ಯಾತಿಯು ಜೀವನದ ಅರ್ಥಪೂರ್ಣತೆಗೆ ಸಾಕ್ಷಿಯಾಗಿದೆ. ಸತ್ತವರ ಪ್ರತಿಷ್ಠೆ ಸುರಕ್ಷಿತವಲ್ಲದಿದ್ದರೆ, ಬದುಕಿರುವವರ ಖ್ಯಾತಿಯೂ ಸುರಕ್ಷಿತವಲ್ಲ. ಸತ್ತವರ ಘನತೆಗೆ ಪ್ರಾಮುಖ್ಯತೆ ನೀಡದಿದ್ದರೆ, ಬದುಕಿರುವವರ ಘನತೆಗೂ ಪ್ರಾಮುಖ್ಯತೆ ನೀಡಲಾಗುವುದಿಲ್ಲ. ಸತ್ತವರ ವೈಕಲ್ಯವು ಅವರನ್ನು ಜೀವಂತವಾಗಿ ದುರ್ಬಲಗೊಳಿಸುವುದಿಲ್ಲ. ಸಂವಿಧಾನವು ಸತ್ತವರ ರಕ್ಷಕ, ಕಾನೂನು ಅವರ ಸಲಹೆಗಾರ ಮತ್ತು ನ್ಯಾಯಾಲಯಗಳು ಅವರ ಹಕ್ಕುಗಳ ಕಾವಲುಗಾರರು. ಕೆಲವೊಮ್ಮೆ ಸತ್ತವರನ್ನು ಜೀವಂತ ಜನರು ಅಪ್ರಸ್ತುತ ಎಂದು ಪರಿಗಣಿಸಬಹುದು. ಆದರೆ, ಸತ್ತವರನ್ನು ಕಾನೂನಿನಿಂದ ಕೈಬಿಡಲಾಗುವುದಿಲ್ಲ ಮತ್ತು ಸಾಂವಿಧಾನಿಕ ರಕ್ಷಣೆಯಿಂದ ಅವರು ಎಂದಿಗೂ ವಂಚಿತರಾಗುವುದಿಲ್ಲ. ಸತ್ತವರ ಮೌನವು ಅವರ ಧ್ವನಿಯನ್ನು ಹತ್ತಿಕ್ಕುವುದಿಲ್ಲ ಹಾಗೂ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.

ಸತ್ತವರು ತಮ್ಮದೇ ಆದ ಹಕ್ಕುಗಳನ್ನು ಹೊಂದಿರುತ್ತಾರೆ, ಅದು ಜೀವಂತವಾಗಿರುವುದಕ್ಕಿಂತ ಯಾವುದೇ ಕಡಿಮೆ ಅಲ್ಲ. ಕಾನೂನು ಅವರ ಹಕ್ಕುಗಳನ್ನು ಒತ್ತಾಯಿಸುತ್ತದೆ. ವ್ಯಕ್ತಿಯ ಪ್ರತಿಷ್ಠೆಯೇ ಆ ಹಕ್ಕು. ಈ ತರ್ಕದ ಆಧಾರದ ಮೇಲೆ ಭಾರತದ ಸಂವಿಧಾನದ 21ನೇ ವಿಧಿಯಿಂದ ಪಡೆದ ಹಕ್ಕನ್ನು ಸತ್ತ ವ್ಯಕ್ತಿಗಳಿಗೂ ಅನ್ವಯ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 31ಕ್ಕೆ ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ: ಜಡ್ಜ್​ಗಳಿಗೆ ಶಿಸ್ತು ಮುಖ್ಯ, ತಮಗೆ ವಹಿಸದ ಪ್ರಕರಣ ಕೈಗೆತ್ತಿಕೊಳ್ಳಬಾರದು: ಸುಪ್ರೀಂ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.