ETV Bharat / bharat

ಕೋವಿಡ್‌ ಬಳಿಕ ಕೈಕೊಟ್ಟ ಸಿಬ್ಬಂದಿ: ಕಿವುಡ, ಮೂಗರಿಗೆ ಕೆಲಸ ಕೊಟ್ಟು ಗಮನ ಸೆಳೆದ ಕೆಫೆ ಮಾಲೀಕ!

author img

By

Published : Aug 7, 2022, 11:37 AM IST

Updated : Aug 8, 2022, 9:20 AM IST

ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶಿಷ್ಟ ರೆಸ್ಟೋರೆಂಟ್​ ತನ್ನ ಸಿಬ್ಬಂದಿಯಿಂದಲೇ ಗಮನ ಸೆಳೆಯುತ್ತಿದೆ.

agra-bread-and-mime-restaurant
ಬ್ರೀಡ್​ ಅಂಡ್​ ಮೈಮ್ ರೆಸ್ಟೋರೆಂಟ್

ಆಗ್ರಾ(ಉತ್ತರಪ್ರದೇಶ): ಮಾತು ಬಾರದ, ಕಿವಿ ಕೇಳದ ವಿಶೇಷ ವ್ಯಕ್ತಿಗಳಿಗೆ ಕೆಲಸ ಸಿಗುವುದು ಕಷ್ಟ. ಆದರೆ, ಇಲ್ಲೊಂದು ರೆಸ್ಟೋರೆಂಟ್ ಮಾಲೀಕ​ ತನ್ನ ಸಿಬ್ಬಂದಿಯಾಗಿ ಮೂಗ ಮತ್ತು ಕಿವುಡರನ್ನೇ ನೇಮಿಸಿಕೊಂಡಿದ್ದಾರೆ. ಇಲ್ಲಿಗೆ ಬರುವ ಗ್ರಾಹಕರಿಗೆ ಅನುಕೂಲವಾಗಲೆಂದು ಸಂಜ್ಞೆಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದ್ದು, ತಮಗೆ ಬೇಕಾದ ತಿಂಡಿ, ಆಹಾರವನ್ನು ಆರ್ಡರ್​ ಮಾಡಬಹುದು.

ಬ್ರೆಡ್​ ಆ್ಯಂಡ್​ ಮೈಮ್​ ಎಂಬ ಹೆಸರಿನ ಈ ಕೆಫೆ ಉತ್ತರಪ್ರದೇಶದ ಆಗ್ರಾದಲ್ಲಿದೆ. ಇದರ ಮಾಲೀಕರಾದ ಡೇವಿಶ್​ ವಶಿಷ್ಟ್​ ವೃತ್ತಿಯಲ್ಲಿ ಇಂಜಿನಿಯರ್​. ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದ ಇವರು​ ಈ ವಿಶಿಷ್ಟವಾದ ಪ್ರಯೋಗ ನಡೆಸಿದ್ದಾರೆ. ವಿಭಿನ್ನ ಆಲೋಚನೆಯ ಡೇವಿಶ್​, ತಮ್ಮ ರೆಸ್ಟೋರೆಂಟ್‌ನಲ್ಲಿ ಕಿವುಡ ಮತ್ತು ಮೂಕರಿಗೆ ನೌಕರಿ ನೀಡಿದ್ದಾರೆ. ಸರ್ವ್ ಮಾಡುವುದರಿಂದ ಹಿಡಿದು ಕ್ಯಾಷಿಯರ್​ವರೆಗೂ ಎಲ್ಲರೂ ಇಲ್ಲಿ ವಿಶಿಷ್ಟ ಸಾಮರ್ಥ್ಯವುಳ್ಳವರೇ. 2021ರಲ್ಲಿ ಈ ರೆಸ್ಟೋರೆಂಟ್​ ಕಾರ್ಯಾರಂಭಿಸಿದೆ.

ಕೋವಿಡ್​ ಕಾರಣವಂತೆ: ಡೇವಿಶ್​ ತಮ್ಮ ಪರಿಕಲ್ಪನೆಯ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿ, "ಮೊದಲು ಸಹಜ ಸಿಬ್ಬಂದಿಯಿಂದ ಕೂಡಿದ್ದ ರೆಸ್ಟೋರೆಂಟ್​ ಕೋವಿಡ್​ ವೇಳೆ ಬಾಗಿಲು ಹಾಕಿತ್ತು. ಬಳಿಕ ಪುನಾರಂಭವಾದಾಗ ಸಿಬ್ಬಂದಿ ಕೈಕೊಟ್ಟರು. ಜಾಹಿದ್​ ಎಂಬ ಕಿವುಡ ಮತ್ತು ಮೂಕ ಯುವಕ ಕೆಲಸ ಕೇಳಲು ನನ್ನ ಬಳಿ ಬಂದ. ನಾನು ಆತನಿಗೆ ಕೆಲಸ ನೀಡಿದೆ. ಸಂಕೇತ ಭಾಷೆಗಳ ಮೂಲಕ ಆತ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದ. ಇದರಿಂದ ನಾನು ಪ್ರಭಾವಿತನಾಗಿ ರೆಸ್ಟೋರೆಂಟ್​ನ ಎಲ್ಲ ಸಿಬ್ಬಂದಿಯಾಗಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನೇ ಆಯ್ದುಕೊಂಡೆ" ಎಂದು ತಿಳಿಸಿದರು.

"ಇಲ್ಲಿಗೆ ಬರುವ ಜನರಿಗೆ ತೊಂದರೆ ಉಂಟಾಗಬಾರದು ಎಂದು ರೆಸ್ಟೋರೆಂಟ್​ನ ವಿನ್ಯಾಸವನ್ನೇ ಬದಲಿಸಲಾಯಿತು. ಗೋಡೆಗಳ ಮೇಲೆ ಸಂಕೇತ ಭಾಷೆ ಚಿತ್ರಿಸಲಾಯಿತು. ಪ್ರತಿ ಟೇಬಲ್‌ಗೆ ಎಲೆಕ್ಟ್ರಿಕ್ ಸ್ವಿಚ್ ಅಳವಡಿಸಲಾಗಿದ್ದು, ಅದನ್ನು ಒತ್ತಿದರೆ ಜೋಡಿಸಲಾದ ಬಲ್ಬ್ ಬೆಳಗುತ್ತದೆ. ಆ ಬಲ್ಬ್‌ ಮೇಲೆ ಟೇಬಲ್​ವಾರು ಸಂಖ್ಯೆಗಳನ್ನು ಬರೆಯಲಾಗಿದೆ. ಟೇಬಲ್​ ನೋಡಿಕೊಳ್ಳುವ ಸಿಬ್ಬಂದಿ ಬಂದು ಜನರಿಂದ ಆರ್ಡರ್​ ಪಡೆಯುತ್ತಾರೆ" ಎಂದರು.

"ವಿವಿಧ ಆಹಾರಕ್ಕೆ ಕೋಡ್‌ಗಳನ್ನು ಮೆನು ಕಾರ್ಡ್‌ನಲ್ಲಿ ಸೂಚಿಸಲಾಗಿದೆ. ಪ್ರತಿ ಮೇಜಿನ ಮೇಲೆ ಆರ್ಡರ್ ಬುಕ್‌ಲೆಟ್ ಇರಿಸಲಾಗಿದ್ದು, ಇದರಲ್ಲಿ ಗ್ರಾಹಕರು ಎಷ್ಟು ಪ್ರಮಾಣ ಮತ್ತು ಯಾವ ಆಹಾರ ಬೇಕು ಎಂಬುದನ್ನು ಬರೆದು ನೀಡಬೇಕು. ಅದನ್ನು ಪಡೆದ ಸಿಬ್ಬಂದಿ ಗ್ರಾಹಕರಿಗೆ ತಲುಪಿಸುತ್ತಾರೆ. ಸಿಬ್ಬಂದಿಯೊಂದಿಗೆ ಸಂಕೇತ ಭಾಷೆಗಳನ್ನು ಬಳಸಿ ಆದೇಶಿಸಲೂಬಹುದು" ಎಂದು ವಿವರಿಸಿದರು.

ಇದನ್ನೂ ಓದಿ: ಹೆಲಿಕಾಪ್ಟರ್​ ಹಾರುವಾಗ ನಿಮಿಷದಲ್ಲಿ 25 ಬಾರಿ ಪುಲ್​ ಅಪ್​ ಮಾಡಿ ದಾಖಲೆ ಬರೆದ ಯೂಟ್ಯೂಬರ್ಸ್​!

Last Updated : Aug 8, 2022, 9:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.