ETV Bharat / bharat

ಜೋಶಿಮಠ ಆಯ್ತು, ಈಗ ಉತ್ತರ ಪ್ರದೇಶದ ಅಲಿಗಢ್​ನ ಮನೆಗಳಲ್ಲೂ ಬಿರುಕು!

author img

By

Published : Jan 11, 2023, 7:09 AM IST

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಗಿರಿಧಾಮದಲ್ಲಿ ಭೂ ಕುಸಿತ ಉಂಟಾಗಿದ್ದು ಅನೇಕ ಮನೆಗಳು, ದೇವಾಲಯ, ರಸ್ತೆಗಳು ಹಾನಿಗೊಳಗಾಗಿವೆ. ಅಲ್ಲಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ನಡುವೆಯೇ ಉತ್ತರ ಪ್ರದೇಶದ ಅಲಿಗಢ್​ನ ಕನ್ವರಿಗಂಜ್ ಪ್ರದೇಶದ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಉಂಟುಮಾಡಿದೆ.

cracks
ಮನೆಯ ಗೋಡೆಯಲ್ಲಿ ಬಿರುಕು

ಅಲಿಗಢ್ (ಉತ್ತರ ಪ್ರದೇಶ) : ಉತ್ತರಾಖಂಡ ರಾಜ್ಯವು ವಿಪರೀತ ಮಳೆ, ಪ್ರವಾಹ ಹಾಗೂ ಭೂ ಕುಸಿತ ಸೇರಿದಂತೆ ಪ್ರತಿ ವರ್ಷವೂ ನಾನಾ ರೀತಿಯ ಪ್ರಕೃತಿ ಕೋಪಕ್ಕೆ ತುತ್ತಾಗುತ್ತಲೇ ಇರುತ್ತದೆ. ಲಕ್ಷಾಂತರ ಜನರು ಭೇಟಿ ನೀಡುವ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನ ಸುಂದರ ಪಟ್ಟಣ ಜೋಶಿಮಠದ ಬಹುತೇಕ ಕಟ್ಟಡಗಳು, ರಸ್ತೆಗಳು ಬಿರುಕು ಬಿಟ್ಟಿವೆ. ಈಗಾಗಲೇ ಇಲ್ಲಿನ ಕೆಲವು ದೇವಸ್ಥಾನ ಹಾಗೂ ಮನೆಗಳು ಧರೆಗುರುಳಿವೆ. ಇದೀಗ ಉತ್ತರ ಪ್ರದೇಶದ ಅಲಿಗಢ್​ನ ಕನ್ವರಿಗಂಜ್ ಪ್ರದೇಶದ ಕೆಲವು ಮನೆಗಳಲ್ಲಿಯೂ ಹಠಾತ್ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

'ಕಳೆದ ಕೆಲವು ದಿನಗಳಿಂದ ನಮ್ಮ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೂಡಲೇ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಇದುವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಭರವಸೆ ನೀಡುತ್ತಿದ್ದಾರೆ. ಮನೆಗಳು ಕುಸಿದು ಬೀಳುವ ಸಾಧ್ಯತೆ ಇದೆ. ಪ್ರಾಣಹಾನಿ ಸಂಭವಿಸುವ ಮುನ್ನವೇ ಸಂಬಂಧಪಟ್ಟವರು ಗಮನಹರಿಸಬೇಕು' ಎಂದು ಸ್ಥಳೀಯ ನಿವಾಸಿ ಶಶಿ ಒತ್ತಾಯಿಸಿದರು.

ಸ್ಥಳೀಯರು ಹೇಳುವಂತೆ, 'ಸರ್ಕಾರದ ವತಿಯಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಈಗ ಅದರಲ್ಲಿ ಸೋರಿಕೆಯಾಗುತ್ತಿದೆ. ಹೀಗಾಗಿ, ಮನೆಗಳಲ್ಲಿ ಬಿರುಕು ಕಾಣಿಕೊಳ್ಳಲು ಕಾರಣ' ಎನ್ನಲಾಗಿದೆ.

'ಘಟನೆಯ ಕುರಿತು ಕಳೆದ ಮೂರ್ನಾಲ್ಕು ದಿನಗಳಿಂದ ಸಂಬಂಧಿಸಿದ ಇಲಾಖೆಗಳಿಗೆ ನಾವು ಮಾಹಿತಿ ನೀಡುತ್ತಲೇ ಇದ್ದೇವೆ. ಆದರೆ, ಇದುವರೆಗೂ ಯಾರೂ ನಮ್ಮ ನೆರವಿಗೆ ಧಾವಿಸಿಲ್ಲ. ಭಯದಲ್ಲೇ ಬದುಕಬೇಕಾದ ಸ್ಥಿತಿ ಇದೆ' ಎಂದು ಸ್ಥಳೀಯರಾದ ಅಫ್ಶಾ ಮಶ್ರೂರ್ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಪಾಯದಂಚಿನಲ್ಲಿದೆ ಜೋಶಿಮಠ: ಪ್ರತಿ ಕ್ಷಣವೂ ನಮಗೆ ಮುಖ್ಯ-ಉತ್ತರಾಖಂಡ ಮುಖ್ಯ ಕಾರ್ಯದರ್ಶಿ

ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಕೇಶ್ ಕುಮಾರ್ ಯಾದವ್ ಮಾತನಾಡಿ, 'ಕನ್ವರಿಗಂಜ್ ಪ್ರದೇಶದಲ್ಲಿನ ಕೆಲವು ಮನೆಗಳ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ನಮಗೆ ಮಾಹಿತಿ ಬಂದಿದೆ. ನಗರಸಭೆ ವತಿಯಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಮ್ಮ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಜೋಶಿಮಠದಲ್ಲಿ ಭೂಕುಸಿತ: ಅಪಾಯದ ಅಂಚಿನ ಮನೆಗಳ ಮೇಲೆ ರೆಡ್​ ಕ್ರಾಸ್​ ಮಾರ್ಕ್​

ಜೋಶಿಮಠದಲ್ಲಿ ಭೀಕರ ಭೂ ಕುಸಿತ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಗಿರಿಧಾಮದಲ್ಲಿ ಭೂ ಕುಸಿತ ಉಂಟಾಗಿದ್ದು, ಅನೇಕ ಮನೆ, ದೇವಾಲಯ, ರಸ್ತೆಗಳು ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗಿದೆ. ಹಾನಿಯಾದ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗು ರಾಜ್ಯ, ಕೇಂದ್ರದ ವಿವಿಧ ಇಲಾಖೆಗಳ ತಜ್ಞರ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೊಂದೆಡೆ, ಅಪಾಯದಲ್ಲಿರುವ ಜನರ ರಕ್ಷಣೆಯ ಕೆಲಸವನ್ನೂ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಲಿಗಢದಲ್ಲೂ ಮನೆ, ಇತರೆ ಕಟ್ಟಡಗಳು ಬಿರುಕು ಬಿಟ್ಟ ಘಟನಾವಳಿ ಬೆಳಕಿಗೆ ಬಂದಿದ್ದು ಜನರಲ್ಲಿ ಭಯ, ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: ಜೋಶಿಮಠದಲ್ಲಿ ಭೂಕುಸಿತ: ಬಿರುಕು ಬಿಟ್ಟ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.