ETV Bharat / bharat

ಹೋಲ್ಸಿಮ್ ಇಂಡಿಯಾ​ ಆಸ್ತಿ ಖರೀದಿ; 2ನೇ ಅತಿದೊಡ್ಡ ಸಿಮೆಂಟ್‌ ತಯಾರಕ ಅದಾನಿ ಗ್ರೂಪ್‌

author img

By

Published : May 16, 2022, 10:14 AM IST

ಹೋಲ್ಸಿಮ್ ಸ್ಟೇಕ್​ ಹಾಗೂ ಅಂಬುಜಾ ಸಿಮೆಂಟ್​ ಮತ್ತು ಎಸಿಸಿಗೆ ಯುಎಸ್‌ಡಿ 10.5 ಬಿಲಿಯನ್​ನ ಓಪನ್​ ಆಫರ್​ ಅನ್ನು ಅದಾನಿ ಗ್ರೂಪ್​ ನೀಡಿದ್ದು, ಇದುವರೆಗೆ ಅದಾನಿ ಸ್ವಾಧೀನ ಪಡಿಸಿಕೊಂಡದ್ದರಲ್ಲಿ ಇದು ಅತೀ ಹೆಚ್ಚಿನ ಮೌಲ್ಯದ ಖರೀದಿಯಾಗಿದೆ.

Gowtham Adani
ಗೌತಮ್​ ಅದಾನಿ

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರ ಅದಾನಿ ಗ್ರೂಪ್​ ಹೋಲ್ಸಿಮ್ ಲಿಮಿಟೆಡ್‌ ಭಾರತದಲ್ಲಿನ ವ್ಯವಹಾರಗಳಲ್ಲಿನ ನಿಯಂತ್ರಣ (ಸ್ಟೇಕ್​) ಪಾಲನ್ನು 10.5 ಬಿಲಿಯನ್​ ಡಾಲರ್‌ಗೆ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಅದಾನಿ ಗ್ರೂಪ್ ಹೋಲ್ಸಿಮ್​ನ ಅಂಗಸಂಸ್ಥೆಗಳಾದ​ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನ ಶೇಕಡಾ 63.1 ರಷ್ಟು ಹಾಗೂ ಎಸಿಸಿ ಸಿಮೆಂಟ್ಸ್​ನ ಶೇ. 54.53 ಶೇಕಡಾ ಪಾಲನ್ನು ತನ್ನದಾಗಿಸಿಕೊಳ್ಳಲು ಡೀಲ್ ಕುದುರಿಸಿದೆ.

ಹೋಲ್ಸಿಮ್ ಸ್ಟೇಕ್​ ಹಾಗೂ ಅಂಬುಜಾ ಸಿಮೆಂಟ್​ ಮತ್ತು ಎಸಿಸಿಗೆ USD 10.5 ಬಿಲಿಯನ್​ನ ಓಪನ್​ ಆಫರ್​ ಅನ್ನು ಅದಾನಿ ಗ್ರೂಪ್​ ನೀಡಿದ್ದು, ಇದುವರೆಗೆ ಅದಾನಿ ಸ್ವಾಧೀನ ಪಡಿಸಿಕೊಂಡದ್ದರಲ್ಲಿ ಇದು ಅತೀ ಹೆಚ್ಚಿನ ಮೌಲ್ಯದ ಖರೀದಿಯಾಗಿದೆ. ಅದಷ್ಟೇ ಅಲ್ಲದೆ, ಮೂಲಸೌಕರ್ಯ ಮತ್ತು ಸಾಮಗ್ರಿಗಳಲ್ಲಿ ಭಾರತದ ಅತಿದೊಡ್ಡ ಎಂ&ಎ ವಹಿವಾಟಾಗಿದೆ.

ಅದಾನಿಯು ಕಳೆದ ಎರಡು ವರ್ಷಗಳಲ್ಲಿ ಬಂದರುಗಳು, ವಿದ್ಯುತ್ ಸ್ಥಾವರಗಳು ಮತ್ತು ಕಲ್ಲಿದ್ದಲು ಗಣಿಗಳನ್ನು ನಿರ್ವಹಿಸುವ ತನ್ನ ಪ್ರಮುಖ ವ್ಯವಹಾರವನ್ನು ಮೀರಿ ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಮತ್ತು ಶುದ್ಧ ಇಂಧನ ಪೂರೈಕೆಯ ಕ್ಷೇತ್ರಗಳಲ್ಲಿ ತಮ್ಮನ್ನು ವಿಸ್ತಿರಿಸಿಕೊಂಡಿದ್ದರು. ಇದೀಗ ಈ ಬಹುದೊಡ್ಡ ಡೀಲ್​ನೊಂದಿಗೆ ಅದಾನಿ 2ನೇ ಬಹುದೊಡ್ಡ ಸಿಮೆಂಟ್​ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಲಿದೆ.

ಅದಾನಿ ಗ್ರೂಪ್​ ಕಳೆದ ವರ್ಷ ಎರಡು ಸಿಮೆಂಟ್ ಅಂಗಸಂಸ್ಥೆಗಳನ್ನು ಪ್ರಾರಂಭಿಸಿತ್ತು. ಒಂದು ಅದಾನಿ ಸಿಮೆಂಟೇಶನ್​ ಲಿ. ಹಾಗೂ ಅದಾನಿ ಸಿಮೆಂಟ್ ಲಿ. ಗುಜರಾತ್‌ನ ದಹೇಜ್ ಮತ್ತು ಮಹಾರಾಷ್ಟ್ರದ ರಾಯಗಢದಲ್ಲಿ ಎರಡು ಸಿಮೆಂಟ್ ಘಟಕಗಳನ್ನು ಸ್ಥಾಪಿಸಲು ಯೋಜಿಸಿತ್ತು.

ಪ್ರಪಂಚದ ಅತಿ ದೊಡ್ಡ ಸಿಮೆಂಟ್ ತಯಾರಕ ಸಂಸ್ಥೆ ಹೋಲ್ಸಿಮ್​ ಕಳೆದ ತಿಂಗಳು ಭಾರತದಿಂದ ನಿರ್ಗಮಿಸುವುದಾಗಿ ಘೋಷಿಸಿದೆ. ಎಸಿಸಿ ಮತ್ತು ಅಂಬುಜಾ ಎಂಬ ಎರಡು ಘಟಕಗಳ ಮೂಲಕ ಕಂಪನಿಯು ವಾರ್ಷಿಕ 66 ಮಿಲಿಯನ್ ಟನ್ ಸಿಮೆಂಟ್​ ಉತ್ಪಾದನಾ ಸಾಮರ್ಥ್ಯವನ್ನು (MTPA) ಹೊಂದಿದೆ. ಹೋಲ್ಸಿಮ್​, ಪ್ರಮುಖ ಸಿಮೆಂಟ್ ಕಂಪನಿಗಳಾದ ಅಲ್ಟ್ರಾಟೆಕ್ ಮತ್ತು ಸ್ಟೀಲ್-ಟು-ಎನರ್ಜಿ ಕಾಂಗ್ಲೋಮರೇಟ್ JSW ಗ್ರೂಪ್ ಅನ್ನು ಹೊಂದಿರುವ ಆದಿತ್ಯ ಬಿರ್ಲಾ ಗ್ರೂಪ್ ಸೇರಿದಂತೆ ಹಲವಾರು ವ್ಯಾಪಾರ ಸಂಸ್ಥೆಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿತ್ತು.

17 ವರ್ಷಗಳ ಹಿಂದೆ ಮಾರುಕಟ್ಟೆಯನ್ನು ಪ್ರವೇಶಿಸಿದ ಹೋಲ್ಸಿಮ್​ ಗ್ರೂಪ್​, ಅಂಬುಜಾದಲ್ಲಿ 63.19 ಶೇಕಡಾ ಮತ್ತು ಎಸಿಸಿಯಲ್ಲಿ ಶೇಕಡಾ 4.48 ರಷ್ಟು ಪಾಲನ್ನು ಹಾಗೂ ಅಂಬುಜಾ ಎಸಿಸಿಯಲ್ಲಿ 50.05 ಶೇಕಡಾ ಪಾಲನ್ನು ಹೊಂದಿದೆ. ACC 17 ಸಿಮೆಂಟ್ ಉತ್ಪಾದನಾ ಘಟಕಗಳು, 9 ಕ್ಯಾಪ್ಟಿವ್ ಪವರ್ ಪ್ಲಾಂಟ್‌ಗಳು ಮತ್ತು 6,643 ಉದ್ಯೋಗಿಗಳ ಜೊತೆಗೆ 56,000 ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ವಿತರಣಾ ಜಾಲವನ್ನು ದೇಶಾದ್ಯಂತ ಹೊಂದಿದೆ. ಅಂಬುಜಾ ಸಿಮೆಂಟ್ಸ್ ದೇಶಾದ್ಯಂತ 6 ಸಮಗ್ರ ಸಿಮೆಂಟ್ ಉತ್ಪಾದನಾ ಘಟಕಗಳು ಮತ್ತು 8 ಸಿಮೆಂಟ್ ಗ್ರೈಂಡಿಂಗ್ ಘಟಕಗಳೊಂದಿಗೆ 31 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

'ಸಿಮೆಂಟ್ ವ್ಯವಹಾರಕ್ಕೆ ನಮ್ಮ ಹೆಜ್ಜೆಯು ನಮ್ಮ ರಾಷ್ಟ್ರದ ಬೆಳವಣಿಗೆಯ ಕಥೆಯಲ್ಲಿನ ನಮ್ಮ ನಂಬಿಕೆಯ ಮತ್ತೊಂದು ಮೌಲ್ಯೀಕರಣವಾಗಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಮಾರುಕಟ್ಟೆಯಾಗಿ ಮುಂದುವರಿಯಲಿದೆ. ಹೋಲ್ಸಿಮ್‌ನ ಜಾಗತಿಕ ನಾಯಕತ್ವವು ನಮಗೆ ಕೆಲವು ಅತ್ಯಾಧುನಿಕ ತಂತ್ರಜ್ಞಾನಗಳ ಆಮದಿಗೆ ಸಹಾಯವಾಗುತ್ತದೆ. ಇದಲ್ಲದೆ, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಭಾರತದಾದ್ಯಂತ ಗುರುತಿಸಲ್ಪಟ್ಟಿರುವ ಎರಡು ಪ್ರಬಲ ಬ್ರ್ಯಾಂಡ್‌ಗಳಾಗಿವೆ' ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.

'ಅದಾನಿ ಗ್ರೂಪ್ ತನ್ನ ಮುಂದಿನ ಬೆಳವಣಿಗೆಗೆ ಭಾರತದಲ್ಲಿನ ನಮ್ಮ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂಬುದು ನನಗೆ ಸಂತೋಷವಾಗಿದೆ. ಗೌತಮ್ ಅದಾನಿ ಅವರು ಬದ್ಧತೆ ಇರುವ, ತಮ್ಮ ವ್ಯಾಪಾರ ಕ್ಷೇತ್ರದಲ್ಲಿ ಪಟ್ಟು ಬಿಡದೆ ಛಲ ಸಾಧಿಸುವ, ಭಾರತದಲ್ಲಿ ಹೆಚ್ಚು ಗುರುತಿಸಲ್ಪಟ್ಟ ಬ್ಯುಸಿನೆಸ್​ ಲೀಡರ್. ವರ್ಷಗಳಿಂದ ನಮ್ಮ ಸಿಮೆಂಟ್​ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ನಮ್ಮ 10,000 ಭಾರತೀಯ ಸಹೋದ್ಯೋಗಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅದಾನಿ ಗ್ರೂಪ್ ಅವರಿಗೆ ಪರಿಪೂರ್ಣವಾದ ನೆಲೆ ಎಂಬ ವಿಶ್ವಾಸ ನನಗಿದೆ' ಎಂದು ಹಾಲ್ಸಿಮ್ ಲಿಮಿಟೆಡ್‌ನ ಸಿಇಒ ಜಾನ್ ಜೆನಿಶ್ ಹೇಳಿದ್ದಾರೆ.

ಇದನ್ನೂ ಓದಿ: ಬಳಕೆಗಿಂತ ನಕಲಿ ಖಾತೆಗಳೇ ಹೆಚ್ಚು.. ಟ್ವಿಟರ್​ ಖರೀದಿ ಒಪ್ಪಂದ ಸದ್ಯಕ್ಕೆ ಸ್ಥಗಿತ ಎಂದ ಎಲಾನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.