ETV Bharat / bharat

ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

author img

By

Published : Mar 8, 2023, 9:40 PM IST

Updated : Mar 8, 2023, 10:36 PM IST

ಹೆಣ್ಣು ಮಕ್ಕಳಿಗೆ ಆಸ್ತಿ ಹಂಚಿಕೆ ಕುರಿತ ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರವಾಗಿ ಕೇರಳದ ನಟ ಮತ್ತು ಪ್ರಾಧ್ಯಾಪಕಿ 28 ವರ್ಷಗಳ ನಂತರ ಮರು ಮದುವೆಯಾದ ಅಪರೂಪದ ಕಥೆ ಇಲ್ಲಿದೆ...

actor-and-lawyer-shukkur-remarried-his-wife-reason-behind-the-rare-story
ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ತಮ್ಮ ಹಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

ಕಾಸರಗೋಡು (ಕೇರಳ): ವಿಶ್ವ ಮಹಿಳಾ ದಿನದಂದು ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅಪರೂಪ ಮದುವೆಯೊಂದು ನಡೆದಿದೆ. ತಮ್ಮ ಹಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಪೋಷಕರು ಮರು ಮದುವೆಯಾಗಿದ್ದಾರೆ. ವಕೀಲ, ಸಿನಿಮಾ ನಟ ಸಿ.ಶುಕ್ಕೂರ್ ಹಾಗೂ ಕಣ್ಣೂರು ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಶೀನಾ ಎರಡನೇ ವಿವಾಹವಾದ ಜೋಡಿ!.

ಇಂದು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಸಂತಸ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೂವರು ಯುವತಿಯರು ತಮ್ಮ ತಂದೆ - ತಾಯಿಯ ಮದುವೆಗೆ ಸಾಕ್ಷಿಯಾದರು. ಇಲ್ಲಿನ ಹೊಸದುರ್ಗ ತಾಲೂಕಿನ ಕಾಞಂಗಾಡ್‌ನಲ್ಲಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನಟ ಶುಕ್ಕೂರ್ ಹಾಗೂ ಶೀನಾ ಇಬ್ಬರೂ ತಮ್ಮ ಮರು ಮದುವೆಗೆ ಮೂವರು ಹೆಣ್ಣು ಮಕ್ಕಳನ್ನು ಸಾಕ್ಷಿಯನ್ನಾಗಿಸಿ ಮದುವೆ ರಿಜಿಸ್ಟರ್‌ಗೆ ಸಹಿ ಹಾಕಿದರು. ಈ ಶುಭ ಮುಹೂರ್ತಕ್ಕೆ ಬಂಧುಗಳು, ಸಹೋದ್ಯೋಗಿಗಳು ಸೇರಿದಂತೆ ಹಲವರು ಕೂಡ ಸಾಕ್ಷಿಯಾದರು.

ಮರು ಮದುವೆಗೆ ಕಾರಣವೇನು?: ಪಾಲಕ್ಕಾಡ್‌ನ ಪುತ್ತುಪರಿಯಂನಲ್ಲಿರುವ ಶೀನಾ ಮನೆಯಲ್ಲಿ 1994ರ ಅಕ್ಟೋಬರ್ 6ರಂದು ಶುಕ್ಕೂರ್ ಜೊತೆಗೆ ವಿವಾಹವಾಗಿತ್ತು. 1937ರ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯ್ದೆ ಮತ್ತು ನ್ಯಾಯಾಲಯದ ಪ್ರಕಾರ, ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಮಾತ್ರ ಹೆಣ್ಣು ಮಕ್ಕಳಿಗೆ ಹೋಗುತ್ತದೆ. ಉಳಿದ ಎಲ್ಲ ಆಸ್ತಿ ಪುರುಷರಿಗೆ ಸೇರುತ್ತದೆ. ಆದರೆ, ಶೀನಾ ಮತ್ತು ಶುಕ್ಕೂರ್​ ದಂಪತಿಗೆ ಪುರುಷ ಸಂತತಿ ಇಲ್ಲ. ಮೇಲಾಗಿ ಶರಿಯತ್ ಕಾನೂನಿನ ಅಡಿ ಉಯಿಲು ಬರೆದಿಡುವುದಕ್ಕೂ ಅನುಮತಿಸಲಾಗುವುದಿಲ್ಲ.

ಆದ್ದರಿಂದ ವಕೀಲರಾದ ನಟ ಶುಕ್ಕೂರ್ ಮತ್ತು ತಮ್ಮ ಪತ್ನಿ ಶೀನಾ ಅವರನ್ನು ಇದೀಗ ವಿಶೇಷ ವಿವಾಹ ಕಾಯ್ದೆಯಡಿ ಮರು ಮದುವೆಯಾಗಿದ್ದಾರೆ. ಈ ಮೂಲಕ ಹೆಣ್ಣು ಮಕ್ಕಳಿಗೆ ಮುಸ್ಲಿಂ ಉತ್ತರಾಧಿಕಾರ ಕಾಯ್ದೆಯಲ್ಲಿನ ಬಿಕ್ಕಟ್ಟನ್ನು ನಿವಾರಿಸುವ ಪ್ರಯತ್ನಕ್ಕೆ ಈ ದಂಪತಿ ಸಹಿ ಹಾಕಿದ್ದಾರೆ. ಈ ಪೋಷಕರ ದಿಟ್ಟ ಹೆಜ್ಜೆ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಪುತ್ರಿಯರು ಹೇಳಿದ್ದಾರೆ.

ಮರು ಮದುವೆಯೇ ಏಕೈಕ ಮಾರ್ಗ - ಶುಕ್ಕೂರ್: ಶರಿಯತ್​ ಕಾನೂನಿನಡಿ ಹೆಣ್ಣು ಮಕ್ಕಳಿಗೆ ಸಂಪೂರ್ಣ ಆಸ್ತಿ ನೀಡಲು ಸಾಧ್ಯವಾಗಲ್ಲ. ಉಯಿಲು ಬರೆಯುವುದೂ ಸಾಧ್ಯವಾಗಲ್ಲ. ಇದರಿಂದ ಹೆಣ್ಣು ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ಇಂತಹ ಲಿಂಗ ತಾರತಮ್ಯ ಎದುರಿಸಬೇಕಾಗುತ್ತದೆ. ಈ ಸಂಕಟದಿಂದ ಹೊರ ಬರುವ ಏಕೈಕ ಮಾರ್ಗ ಎಂದರೆ ವಿಶೇಷ ವಿವಾಹ ಕಾಯ್ದೆ (ಎಸ್​ಎಂಎ) ಅಡಿ ಮದುವೆಯಾಗುವುದು ಎಂದು ನಟ ಶುಕ್ಕೂರ್ ತಿಳಿಸಿದರು.

ಇದೇ ವೇಳೆ, ನಮ್ಮ ಈ ನಿರ್ಧಾರವು ಮುಸ್ಲಿಂ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ತಾರತಮ್ಯ ಕೊನೆಗೊಳಿಸಲು ಸಹಕಾರಿಯಾಗಲಿದೆ. ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಹಾಗೂ ಘನತೆಯನ್ನು ಹೆಚ್ಚಿಸಲು ಇದೊಂದು ಹೊಸ ಮಾರ್ಗ ಎಂದು ಭಾವಿಸುತ್ತೇನೆ ಎಂದು ಶುಕ್ಕೂರ್ ಹೇಳಿದರು. ಪತ್ನಿ ಶೀನಾ ಕೂಡ ತಾವು ಎದುರಿಸಿದ ಇಂತಹ ಕಷ್ಟವನ್ನು ಹೆಣ್ಣು ಮಕ್ಕಳಿರುವ ಅನೇಕ ಮುಸ್ಲಿಂ ಕುಟುಂಬಗಳು ಎದುರಿಸುತ್ತಿವೆ ಎಂದು ತಿಳಿಸಿದರು.

ಹಲವರನ್ನು ಕಾಡುವ ಪ್ರಶ್ನೆ - ಶೀನಾ: ನಾನು ಕಾಲೇಜಿನಲ್ಲಿ ಪಾಠ ಮಾಡುವಾಗ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವಾಗ ಅನೇಕ ಪೋಷಕರು ನನ್ನ ಬಳಿಗೆ ಬಂದು ತಮ್ಮ ಹೆಣ್ಣು ಬಗ್ಗೆ ಭವಿಷ್ಯದ ಪ್ರಸ್ತಾಪಿಸಿ, ಈ ಅನುವಂಶಿಕ ಸಮಸ್ಯೆ ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದರು. ಹಲವರನ್ನು ಇಂತಹ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹೀಗಾಗಿ ಕಾನೂನು ಮಾರ್ಗವನ್ನು ನಾವು ತೆಗೆದುಕೊಂಡಿದ್ದೇವೆ. ಜನರಿಗೆ ತಮ್ಮ ಜೀವನ ಆಯ್ಕೆಗಳ ಬಗ್ಗೆ ದಾರಿ ತೋರಿಸಲು ನಮ್ಮಿಂದ ಸಾಧ್ಯ ಇರುವದನ್ನು ನಾವು ಮಾಡಿದ್ದೇವೆ ಎಂದು ಶೀನಾ ವಿವರಿಸಿದರು.

ಇದನ್ನೂ ಓದಿ: ದೇಗುಲದ ಆವರಣದಲ್ಲಿ ಮುಸ್ಲಿಂ ಪದ್ಧತಿಯಂತೆ ಹಿಂದೂ ಯುವತಿಯ ವರಿಸಿದ ಯುವಕ

Last Updated :Mar 8, 2023, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.