ETV Bharat / bharat

Heavy rain: ಮಳೆ ಅವಾಂತರಕ್ಕೆ ಉತ್ತರಾಖಂಡದಲ್ಲಿ 60 ಜನರು ಸಾವು.. ಆಗಸ್ಟ್ 16ರ ವರೆಗೆ ರೆಡ್​ ಅಲರ್ಟ್

author img

By

Published : Aug 12, 2023, 9:26 PM IST

ಉತ್ತರಾಖಂಡದಲ್ಲಿ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಾಗಿದೆ. ಅಬ್ಬರದ ಮಳೆಯಿಂದ ರಾಜ್ಯದಲ್ಲಿ ಭಾರಿ ಅನಾಹುತ ಸೃಷ್ಟಿಯಾಗಿದೆ. ಮಳೆಯಿಂದ ಆದ ದುರಂತದಲ್ಲಿ ಈವರೆಗೆ 60 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಭೂಕುಸಿತದ ಘಟನೆಗಳು ನಡೆದಿವೆ. ವರುಣನ ಆರ್ಭಟಕ್ಕೆ ರಾಜ್ಯದಲ್ಲಿ 188 ರಸ್ತೆಗಳು ಬಂದ್ ಆಗಿವೆ.

60 people died due to disaster in Uttarakhand
ಮಳೆ ಅವಾಂತರಕ್ಕೆ ಉತ್ತರಾಖಂಡದಲ್ಲಿ 60 ಜನರು ಸಾವು, ಆಗಸ್ಟ್ 16ರವರೆಗೆ ರೆಡ್​ ಅಲರ್ಟ್...

ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದ ಎಲ್ಲ ಗುಡ್ಡಗಾಡು ಪ್ರದೇಶಗಳಲ್ಲೂ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮಳೆ ಅವಾಂತರದಿಂದ ಉತ್ತರಾಖಂಡ ರಾಜ್ಯಕ್ಕೆ ಆಗಿರುವ ನಷ್ಟವೂ ನಿರಂತರವಾಗಿ ಹೆಚ್ಚುತ್ತಿದೆ.

ಆಗಸ್ಟ್ 16ರ ವರೆಗೆ ರಾಜ್ಯದಲ್ಲಿ ರೆಡ್ ಅಲರ್ಟ್: ಹವಾಮಾನ ಇಲಾಖೆಯು ಆಗಸ್ಟ್ 16ರ ವರೆಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ ರಾಜ್ಯದ ಬಯಲುಸೀಮೆ ಜಿಲ್ಲೆಗಳಲ್ಲಿ ಹಾಗೂ ಗುಡ್ಡಗಾಡು ಜಿಲ್ಲೆಗಳಲ್ಲಿ ಪರಿಣಾಮ​ ಬೀರಲಿದೆ. ಕಳೆದ 72 ಗಂಟೆಗಳಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯದ ಎಲ್ಲ ರಸ್ತೆಗಳು ಹಾಳಾಗಿರುವುದು ಮಾತ್ರವಲ್ಲದೇ ಹಲವು ಗ್ರಾಮಗಳ ಸಂಪರ್ಕವೂ ಕಡಿತಗೊಂಡಿದೆ. ರಾಜ್ಯದಲ್ಲಿ ನಿರಂತರವಾಗಿ ಹದಗೆಡುತ್ತಿರುವ ಪರಿಸ್ಥಿತಿಯಿಂದ ಸರ್ಕಾರ ಆತಂಕಕ್ಕೆ ಒಳಗಾಗಿದೆ.

ಭೂಕುಸಿತದ ಘಟನೆಗಳು ತೊಂದರೆ ಹೆಚ್ಚಿಸಿವೆ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಕುಸಿತದ ಘಟನೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿದೆ. ಇದರಿಂದ ಹಲವರು ಸಾವನ್ನಪ್ಪಿದ್ದಾರೆ. ಈ ಕಾರಣಕ್ಕಾಗಿಯೇ ಉತ್ತರಾಖಂಡ ಸರ್ಕಾರವು ಪರ್ವತ ಮಾರ್ಗಗಳಲ್ಲಿ ಅನಗತ್ಯವಾಗಿ ಪ್ರಯಾಣಿಸದಂತೆ ಸಾರ್ವಜನಿಕರಲ್ಲಿ ನಿರಂತರವಾಗಿ ಮನವಿ ಮಾಡುತ್ತಿದೆ. ಇದಲ್ಲದೇ, ಚಾರ್​ ಧಾಮ್ ಯಾತ್ರೆಗೆ ಬರುವ ಭಕ್ತರು ನಿಖರವಾದ ಹವಾಮಾನ ಮಾಹಿತಿ ಪಡೆದ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿದ್ದಾರೆ.

ದುರಂತದಲ್ಲಿ ಈವರೆಗೆ 60 ಜನರು ಸಾವು: ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಮಳೆ ಅಬ್ಬರ, ಭೂಕುಸಿತದ ಹಿನ್ನೆಲೆ, ಜೂನ್ 15ರಿಂದ ಆಗಸ್ಟ್ 12ರವರೆಗೆ 60 ಮಂದಿ ಬಲಿಯಾಗಿದ್ದಾರೆ. 37 ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ 17 ಮಂದಿ ನಾಪತ್ತೆಯಾಗಿದ್ದಾರೆ. ಇದಲ್ಲದೆ, 62 ದೊಡ್ಡ ಪ್ರಾಣಿಗಳು, 462 ಚಿಕ್ಕ ಪ್ರಾಣಿಗಳು ಸಹ ಈ ದುರಂತದಿಂದ ಪ್ರಾಣ ಕಳೆದುಕೊಂಡಿವೆ. ಇಷ್ಟು ಮಾತ್ರವಲ್ಲದೆ, ಭಾರೀ ಮಳೆ ಮತ್ತು ಭೂಕುಸಿತದಿಂದ 1,167 ಮನೆಗಳಿಗೆ ಹಾನಿಯಾಗಿದೆ. 123 ಮನೆಗಳು ಅರ್ಧದಷ್ಟು ಹಾನಿಗೊಳಗಾಗಿವೆ. 33 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ರಾಜ್ಯದ 188 ರಸ್ತೆಗಳು ಹಾನಿ: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗಳಿಗೆ ತುಂಬಾ ಹಾನಿಯಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಿಂದ ಬಂದಿರುವ ಮಾಹಿತಿಯ ಪ್ರಕಾರ, ರಾಜ್ಯದ 6 ಜಿಲ್ಲೆಗಳಲ್ಲಿ ಒಟ್ಟು 13 ರಾಜ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಒಟ್ಟು 139 ಗ್ರಾಮೀಣ ರಸ್ತೆಗಳು ಹಾಗೂ 6 ಜಿಲ್ಲೆಗಳಲ್ಲಿ ಒಟ್ಟು 9 ಮುಖ್ಯ ಜಿಲ್ಲಾ ರಸ್ತೆಗಳು ಬಂದ್ ಆಗಿವೆ. ಪೌರಿ ಜಿಲ್ಲೆಯಲ್ಲಿ ಒಟ್ಟು 25 ಪಿಎಂಜಿಎಸ್​ವೈ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ತೆಹ್ರಿ ಜಿಲ್ಲೆಯ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್​ ಮಾಡಲಾಗಿದೆ. ಒಟ್ಟಾರೆಯಾಗಿ, ರಾಜ್ಯದಲ್ಲಿ 188 ರಸ್ತೆಗಳು ಭೂಕುಸಿತ, ಬಂಡೆಗಳ ಕುಸಿತ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾಗಿವೆ.

107 ಕುಟುಂಬಗಳಿಗೆ ಆಶ್ರಯ: ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ 107 ಕುಟುಂಬಗಳು ಅಂದರೆ, 420 ಜನರು ತೊಂದರೆಗೀಡಾಗಿದ್ದಾರೆ. ಈ ಸಂತ್ರಸ್ತ ಕುಟುಂಬಗಳಿಗೆ ಸಿತಾರ್‌ಗಂಜ್, ಖತಿಮಾ ಮತ್ತು ಕಾಶಿಪುರದ 8 ಸ್ಥಳಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಈ ಎಲ್ಲ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಈ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಆಹಾರ ಪದಾರ್ಥಗಳನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಮೇಘಸ್ಫೋಟಕ್ಕೆ ಗ್ರಾಮವೇ ನಾಶ.. ಅವಶೇಷಗಳಡಿ ಸಿಲುಕಿದ ಐವರ ಶವಗಳನ್ನ ಹೊರತೆಗೆದ ರಕ್ಷಣಾ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.