ETV Bharat / assembly-elections

ಕೊಪ್ಪಳದ ನಾಲ್ಕು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕುತೂಹಲ ಹೆಚ್ಚಿಸಿದ ಗಂಗಾವತಿ ಕ್ಷೇತ್ರ

author img

By

Published : Mar 25, 2023, 4:32 PM IST

ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಕೆಲವು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆ ಕೆಲವು ಕ್ಷೇತ್ರಗಳು ರಾಜಕೀಯ ವಲಯದಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.

Raghavendra Hitnala and Shivraja Tangadagi
ರಾಘವೇಂದ್ರ ಹಿಟ್ನಾಳ ಹಾಗೂ ಶಿವರಾಜ ತಂಗಡಗಿ

ಕೊಪ್ಪಳ: ಬಿಸಿಲ ನಾಡು ಕೊಪ್ಪಳದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಕಾವು ಹೆಚ್ಚಿದ್ದು, ಕಾಂಗ್ರೆಸ್‌ ಪಕ್ಷ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಗಂಗಾವತಿ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರು ಘೋಷಣೆ ಮಾಡದೆ ಇರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಗಂಗಾವತಿ ಕ್ಷೇತ್ರಕ್ಕೆ ಯಾರು?: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ. ಜಿಲ್ಲೆಯ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌, ಕುಷ್ಟಗಿಯಲ್ಲಿ ಹಾಲಿ ಶಾಸಕ ಅಮರೇಗೌಡ ಪಾಟೀಲ್‌ ಭಯ್ಯಾಪುರ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೆಸರನ್ನು ಪಕ್ಷ ತನ್ನ ಮೊದಲ ಹಂತದ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ಆದರೆ ಗಂಗಾವತಿ ಕ್ಷೇತ್ರಕ್ಕೆ ಹೆಸರು ಘೋಷಣೆ ಮಾಡದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೈ ವೋಲ್ಟೇಜ್ ಕ್ಷೇತ್ರ ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ಈಗ ಹೈ ವೋಲ್ಟೇಜ್‌ ಕ್ಷೇತ್ರವಾಗಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಲ್ಲಿ ಕೆಆರ್‌ಪಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ ಬಳಿಕ ಗಂಗಾವತಿ ವಿಧಾನಸಭಾ ಕ್ಷೇತ್ರ ಮತ್ತಷ್ಟು ಹೈ ವೋಲ್ಟೇಜ್‌ ಕ್ಷೇತ್ರವಾಗಿ ಬದಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಗಂಗಾವತಿ ಕ್ಷೇತ್ರವನ್ನು ಹಗುರವಾಗಿ ಪರಿಗಣಿಸಲಾಗದು. ಹಾಗಾಗಿ ಈ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಬಹಳಷ್ಟು ಲೆಕ್ಕಾಚಾರ ನಡೆಸಿವೆ.

Basavaraja Rayardi and Amaregowda Bayyapura
ಬಸವರಾಜ ರಾಯರಡ್ಡಿ ಹಾಗೂ ಅಮರೇಗೌಡ ಬಯ್ಯಾಪೂರ

ಇಕ್ಬಾಲ್ ಅನ್ಸಾರಿ ಪ್ರಬಲ ಆಕಾಂಕ್ಷಿ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್​ಗಾಗಿ ಜಿದ್ದಾ ಜಿದ್ದಿ ನಡೆದಿದ್ದು, ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಕೈ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅನ್ಸಾರಿ ಜೊತೆಗೆ ಇನ್ನಿಬ್ಬರು ಸಹ ಪ್ರಬಲ ಆಕಾಂಕ್ಷಿಗಳಿದ್ದು, ಪಕ್ಷದ ರೂಲ್ಸ್ ಪ್ರಕಾರ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್‌ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದು, ಇಲ್ಲಿ ಟಿಕೆಟ್‌ಗೆ ಪೈಪೋಟಿ ಇರೋದು ಹೈಕಮಾಂಡ್‌ಗೆ ತಲೆ ಬಿಸಿ ಮಾಡಿದೆ. ಹೀಗಾಗಿ ಗಂಗಾವತಿ ಕ್ಷೇತ್ರದ ಅಭ್ಯರ್ಥಿಯನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಸ್ಪರ್ಧೆಗೆ ಕೊಪ್ಪಳದಿಂದ ತೆರೆಬಿದ್ದಂತೆ: ಕೊಪ್ಪಳ ಜಿಲ್ಲೆಯ ನಾಲ್ಕು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳ ಅಥವಾ ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ. ಕೊಪ್ಪಳ ಕ್ಷೇತ್ರಕ್ಕೆ ಹಾಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಹಾಗೂ ಕುಷ್ಟಗಿ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಹೆಸರು ಘೋಷಣೆಯಾಗಿದ್ದು, ಸಿದ್ದರಾಮಯ್ಯ ಸ್ಪರ್ಧೆಯ ಮಾತುಗಳಿಗೆ ವಿರಾಮ ಬಿದ್ದಂತಾಗಿದೆ. ಸಿದ್ದರಾಮಯ್ಯ ಅವರು ಬಂದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದರೂ ಈಗ ತಮ್ಮ ಹೆಸರು ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿರುವುದು ಕುಷ್ಟಗಿ ಹಾಗೂ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ವೈಶಿಷ್ಟ್ಯಗಳೇನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.