ETV Bharat / assembly-elections

ರಾಜ್ಯದಲ್ಲಿ ನಡೆಯದ ಮೋದಿ- ಶಾ ಮ್ಯಾಜಿಕ್​; ಕೈ ಕೊಟ್ಟ ಹೊಸ ಪ್ರಯೋಗ

author img

By

Published : May 13, 2023, 11:45 AM IST

ಹೈಕಮಾಂಡ್ ನಾಯಕರೇ ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸಿದರೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಿಜೆಪಿ ಸೋತಿದೆ.

BJP Lost in Karnataka Assembly Election 2023
BJP Lost in Karnataka Assembly Election 2023

ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಇಡೀ ಪ್ರಚಾರ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.ಹೈಕಮಾಂಡ್ ನ ಜೋಡೆತ್ತುಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದರು. ಆದರೂ ಮೋದಿ ಹಾಗು ಅಮಿತ್ ಶಾ ಅವರ ರೋಡ್ ಶೋಗಳು, ಚುನಾವಣಾ ರ್ಯಾಲಿಗಳು ಮಾತ್ರ ಬಿಜೆಪಿ ಕೈ ಹಿಡಿಯಲಿಲ್ಲ. ರ್ಯಾಲಿಗೆ ಜನ ಬಂದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ.

ಈವರೆಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಹೈಕಮಾಂಡ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಹೈಕಮಾಂಡ್ ನಾಯಕರೇ ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸಿದರು. ಬೃಹತ್ ಸಾರ್ವಜನಿಕ ಸಮಾವೇಶಗಳು,ರೋಡ್ ಶೋಗಳನ್ನು ನಡೆಸಿದರು. ಎಲ್ಲಾ ವಲಯಗಳನ್ನೇ ಕೇಂದ್ರೀಕರಿಸಿಕೊಂಡು ಪ್ರಚಾರ ಕಾರ್ಯ ನಡೆಸಿದರು.

ಭರ್ಜರಿ ಪ್ರಚಾರ ನಡೆಸಿದ ನಾಯಕರು: ಕಳೆದ ಎರಡೂವರೆ ತಿಂಗಳಿನಲ್ಲಿ 17ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 10ಕ್ಕೂ ಹೆಚ್ಚು ಬಾರಿ ಬಂದಿದ್ದಾರೆ.31 ನಾಯಕರು ಹೊರ ರಾಜ್ಯದಿಂದ ಪ್ರಚಾರ ಕಾರ್ಯಕ್ಕೆ ಬಂದಿದ್ದರು. ನರೇಂದ್ರ ಮೋದಿ ರಾಜ್ಯದಲ್ಲಿ 19 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 6 ರೋಡ್ ಶೋ ನಡೆಸಿದ್ದರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 10 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 16 ರೋಡ್ ಶೋ ನಡೆಸಿದ್ದರು, ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ 16ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು,17 ರೋಡ್ ಶೋ ನಡೆಸಿದ್ದಾರೆ.

ಇದರ ಜೊತೆ 16 ಜನರ ರಾಜ್ಯ ನಾಯಕರ ತಂಡ 231 ಸಭೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ, 48 ರೋಡ್ ಶೋ ಅನ್ನು ರಾಜ್ಯ ನಾಯಕರ ತಂಡ ಮಾಡಿದೆ, ಅಕ್ಕಪಕ್ಕದ ರಾಜ್ಯಗಳಿಂದ ನಾಯಕರು ಬಂದಿದ್ದರು, ಆಯಾ ಭಾಷಿಕರು ಹೆಚ್ಚಿರುವ ಕಡೆ ಆಯಾ ರಾಜ್ಯಗಳ ನಾಯಕರ ಪ್ರಚಾರ ಮಾಡಿಸಲಾಗಿತ್ತು ಹೊರರಾಜ್ಯದವರಿಂದ 206 ಸಭೆ ಮಾಡಿಸಲಾಗಿತ್ತು, ದೇಶದ ಬೇರೆ ಬೇರೆ ಕಡೆ ಚುನಾವಣೆ ನಡೆದಾಗ ರಾಜ್ಯದಿಂದ ನಾಯಕರು ಹೋಗುವ ರೀತಿ ಬೇರೆ ಕಡೆಯಿಂದಲೂ ಇಲ್ಲಿಗೆ ಪ್ರಚಾರಕ್ಕೆ ನಾಯಕರನ್ನು ಕರೆತರಲಾಗಿತ್ತು, 55112 ಬೂತ್ ಗಳಲ್ಲಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರ ಜೊತೆ ಎರಡು ದಿನ ಬೂತ್ ಮಹಾ ಅಭಿಯಾನ ನಡೆಸಲಾಗಿತ್ತು, 311 ದೇವಸ್ಥಾನಕ್ಕೆ ಭೇಟಿಯಾಗಿತ್ತು, 9125 ಚಿಕ್ಕಪುಟ್ಟ ಸಭೆ ನಡೆಸಲಾಗಿತ್ತು.1137 ಚಿಕ್ಕ ರೋಡ್ ಶೋ ಮಾಡಲಾಗಿತ್ತು. 20 ಲಕ್ಷ ಜನರನ್ನು ಕೇವಲ ಮಹಾ ಅಭಿಯಾನದ ಒಂದೂವರೆ ದಿನದಂದು ತಲುಪಲಾಗಿತ್ತು.

ಹಲವು ನಗರದಲ್ಲಿ ಮೆಗಾ ರೋಡ್​ ಶೋ: ಇದರಲ್ಲಿ ವಿಶೇಷವಾಗಿ ಮೋದಿ ರೋಡ್ ಶೋ ಇಡೀ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿತ್ತು. ಬೆಂಗಳೂರಿನಲ್ಲಿ ಒಂದು ಮೆಗಾ ರೋಡ್ ಶೋ ಸೇರಿ ಮೂರು ರೋಡ್ ಶೋ ನಡೆಸಲಾಗಿತ್ತು. ನೈಸ್ ರಸ್ತೆ ಜಂಕ್ಷನ್ ನಿಂದ ಸುಮನಳ್ಳಿ ವೃತ್ತದವರೆಗೆ ಮೊದಲ ರೋಡ್ ಶೋ ನಡೆಸಿದ್ದ ಮೋದಿ ನಂತರ ಜೆಪಿ ನಗರದಿಂದ ಮಲ್ಲೇಶ್ವರದವರೆಗೆ 26 ಕಿಲೋಮೀಟರ್ ವರೆಗೆ ಬೃಹತ್ ರೋಡ್ ಶೋ ನಡೆಸಿದ್ದರು. 35 ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದರು.ನಂತರ ಹೊಸ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್ ವರೆಗೆ 6.5 ಕಿಲೋಮೀಟರ್ ರೋಡ್ ಶೋ ನಡೆಸಿದ್ದರು. ಬೆಂಗಳೂರಿನಲ್ಲಿ ಪ್ರಚಾರ ಸಭೆ ಬದಲು ಮೂರು ರೋಡ್ ಶೋ ಮೂಲಕವೇ ಪ್ರಚಾರ ನಡೆಸಿದ್ದರು.ಮೈಸೂರು ಸೇರಿದಂತೆ ರಾಜ್ಯದ ಇತರ ಕಡೆಯೂ ಮೋದಿ ರೋಡ್ ಶೋ ನಡೆಸಿದ್ದರು.

ಮೋದಿ ರೋಡ್ ಶೋಗೆ ವ್ಯಾಪಕವಾದ ಬೆಂಬಲ ವ್ಯಕ್ತವಾಗಿತ್ತು. ಮೋದಿ ರೋಡ್ ಶೋ ವೇಳೆ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಲಾಗಿತ್ತು. ಅಪಾರ ಸಂಖ್ಯೆಯ ಜನ ಸೇರಿತ್ತು. ಮೋದಿ ರೋಡ್ ಶೋ ಸಕ್ಸಸ್ ಆಗಿತ್ತು ಆದರೆ ಫಲಿತಾಂಶ ಮಾತ್ರ ಫೇಲ್ಯೂರ್ ಆಗಿದೆ. ಇಷ್ಟೆಲ್ಲಾ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ಕಾರ್ಯ, ರೋಡ್ ಶೋ, ಚುನಾವಣಾ ರ್ಯಾಲಿ ನಡೆಸಿದರೂ ಅದು ಬಿಜೆಪಿಯನ್ನು ಗೆಲುವಿನ ದಡ ಸೇರಿಸಲು ವಿಫಲವಾಗಿದೆ. ಮೋದಿ ಮತ್ತು ಅಮಿತ್ ಶಾ ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಜನರನ್ನು ಸೆಳೆಯಲು ಸಫಲವಾದರೂ ಚುನಾವಣೆ ಗೆಲ್ಲಲು ವಿಫಲವಾದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಅಗ್ರ ನಾಯಕರಾದ ಮೋದಿ ಹಾಗು ಅಮಿತ್ ಶಾ ನಡೆಸಿದ ರೋಡ್ ಶೋಗಳು ಹಾಗೂ ಚುನಾವಣಾ ರ್ಯಾಲಿಗಳು ಬಿಜೆಪಿ ಕೈ ಹಿಡಿಯುವಲ್ಲಿ ವಿಫಲವಾಗಿವೆ. ಮೋದಿ ಮೋಡಿ ಹಾಗೂ ಅಮಿತ್ ಶಾ ತಂತ್ರಗಾರಿಕೆ ರಾಜ್ಯದಲ್ಲಿ ವರ್ಕೌಟ್ ಆಗಲಿಲ್ಲ.

ಇದನ್ನೂ ಓದಿ: ಸ್ಪಷ್ಟ ಬಹುಮತದತ್ತ ಕಾಂಗ್ರೆಸ್​ ದಾಪುಗಾಲು; ಪಕ್ಷೇತರರ ಬೆಂಬಲಕ್ಕೂ 'ಕೈ' ಕಸರತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.