ಕರ್ನಾಟಕ

karnataka

ETV Bharat / state

ಹಾವೇರಿ: ಕುಡಿಯುವ ನೀರಿಲ್ಲದೆ ಗ್ರಾಮಸ್ಥರ ಪರದಾಟ; ಇರುವುದೊಂದೇ ಕೊಳವೆಬಾವಿ, ಅದರಲ್ಲೂ ಕಲುಷಿತ ನೀರು!

ಈ ಬಗ್ಗೆ ಗಮನ ಹರಿಸಿರುವ ಪಿಡಿಒ ಅವರು ಆದಷ್ಟು ಬೇಗ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

HAVERI  BHUVEERAPUR VILLAGE WATER ISSUES  ಭೂವೀರಾಪುರ ಗ್ರಾಮ  ಕುಡಿಯುವ ನೀರಿನ ಸಮಸ್ಯೆ
ಕುಡಿಯುವ ನೀರಿನ ವ್ಯವಸ್ಥೆ . (ETV Bharat)

By ETV Bharat Karnataka Team

Published : September 2, 2026 at 1:32 PM IST

ಹಾವೇರಿ:ಸಮೀಪದ ಭೂವೀರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸತತ ಮೂರು ವರ್ಷಗಳಿಂದ ಸಮರ್ಪಕ ನೀರಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಭೂವೀರಾಪೂರದಲ್ಲಿ 200 ಕುಟುಂಬಗಳಿದ್ದು ಸಾವಿರಕ್ಕೂ ಅಧಿಕ ಜನ ಗ್ರಾಮಸ್ಥರಿದ್ದಾರೆ. ಈ ಗ್ರಾಮಕ್ಕೆ ಇರುವುದೊಂದೇ ಒಂದು ಕೊಳವೆಬಾವಿ. ಅದರಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈ ಕೊಳವೆಬಾವಿಯ ನೀರಿನಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಅಲ್ಲದೆ ಚರಂಡಿ ನೀರು ಸೇರಿ ಕಲುಷಿತ ನೀರು ಬರುತ್ತಿದೆ. ಇದೇ ನೀರನ್ನು ಗ್ರಾಮಸ್ಥರು ಕುಡಿಯಲು, ಅಡುಗೆ ಮಾಡಲು ಬಳಸುತ್ತಿದ್ದಾರೆ.

ಹಾವೇರಿಯ ಗ್ರಾಮವೊಂದರಲ್ಲಿ ಕುಡಿಯುವ ನೀರಿನ ಸಮಸ್ಯೆ. (ETV Bharat)

ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಾಂತಿ ಬೇದಿ ಸೇರಿದಂತೆ ಉದರ ಸಂಬಂಧಿ ಕಾಯಿಲೆಗಳಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಈಗ ಚರಂಡಿ ನೀರು ಸೇರಿ ಬರುತ್ತಿದೆ. ಈ ನೀರಿನಿಂದ ಮೈತೊಳೆಯುವುದರಿಂದ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತಂತೆ ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಮನವಿಯನ್ನೂ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲಾ. ಗ್ರಾಮ ಪಂಚಾಯತ್​ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮದ ಜನರು ಕಲುಷಿತ ನೀರು ಕುಡಿಯುವಂತಾಗಿದೆ. ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿನ ಟ್ಯಾಂಕ್​ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದ್ದು ಇಲ್ಲದಂತಾದ ಶುದ್ಧ ಕುಡಿಯುವ ನೀರಿನ ಘಟಕ:ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದು ಕಾರ್ಯನಿರ್ವಹಿಸುತ್ತಿಲ್ಲ.‌ ಹೊಸದಾಗಿ‌ ಆರಂಭವಾದಾಗಿನಿಂದ ಘಟಕ ಬಂದ್ ಆಗಿದ್ದೇ ಹೆಚ್ಚು ಎನ್ನುತ್ತಾರೆ ಗ್ರಾಮಸ್ಥರು. ಶುದ್ಧ ಕುಡಿಯುವ ನೀರಿನ ಘಟಕ ಬಂದ್​ ಆಗಿದ್ದರಿಂದ ಗ್ರಾಮಸ್ಥರು ಐದು ಕಿಲೋಮೀಟರ್ ದೂರದ ಹಾವೇರಿಯಿಂದ ಕುಡಿಯಲು‌ ನೀರು ತರುವ ಅನಿವಾರ್ಯತೆ ಇದೆ. ದ್ವಿಚಕ್ರ ವಾಹನವಿದ್ದವರು‌ ಹಾವೇರಿಯಿಂದ‌ ನೀರು ತರುತ್ತಾರೆ‌. ವಾಹನ ಇಲ್ಲದವರು ಹೇಗೆ ನೀರು‌ ತರಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಗ್ರಾಮಸ್ಥರು.

ಗ್ರಾಮದ ಮನೆ ಮನೆಗೆ ಜಲಜೀವನ್ ಮಿಷನ್​ ಪೈಪ್‌ ಹಾಕಲಾಗಿದೆ. ಪೈಪ್ ಹಾಕಿ ವರ್ಷ ಕಳೆದರೂ ಪೈಪಲೈನನಲ್ಲಿ ಒಂದು ಹನಿ ನೀರು ಸಹ ಬಂದಿಲ್ಲ. ಭೂವೀರಾಪುರ ಗ್ರಾಮ‌ ಕಳ್ಳಿಹಾಳ ಗ್ರಾಮ ಪಂಚಾಯತ್​ ವ್ಯಾಪ್ತಿಗೆ‌ ಬರುತ್ತದೆ. ಕೊಳವೆಬಾವಿ ಸರಿಪಡಿಸಿ ಇಲ್ಲವೇ ಜಲಜೀವನ್ ಮಿಷನ್​ ಪೈಪ್‌ನಲ್ಲಿ ನೀರು ಹರಿಸಿ ಎಂದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲಾ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಚರಂಡಿ ಪಕ್ಕದಲ್ಲಿಯೇ ಕುಡಿಯುವ ನೀರಿನ ಪೈಪ್ ಹಾಕಲಾಗಿದೆ. ಕೆಲ ಕಾಮಗಾರಿ ನಡೆಸುವಾಗ ಒಡೆದ ಪೈಪ್​ಗಳನ್ನು ಸರಿಪಡಿಸಿಲ್ಲಾ. ಪರಿಣಾಮ ಪೈಪ್​ನಲ್ಲಿ ಚರಂಡಿ ನೀರು‌ ಸೇರುತ್ತಿದೆ. ಕೊಳವೆಬಾವಿ ಆರಂಭ ಮಾಡುತ್ತಿದ್ದಂತೆ ಕಲುಷಿತ ನೀರು ಬರುತ್ತದೆ. ಕಳೆದ ಮೂರು ವರ್ಷಗಳಿಂದ ಇದೇ ತೊಂದರೆ ಆಗುತ್ತಿದೆ. ಸಣ್ಣಪುಟ್ಟ ದುರಸ್ತಿ ಮಾಡೋದು ಮತ್ತೆ ಕೆಟ್ಟು ಹೋಗುತ್ತಿದೆ. ಚರಂಡಿ ನೀರು ಸೇರಿ ಬರುತ್ತಿದೆ. ಕುಡಿಯುವ ನೀರು ಬದಲಿಗೆ ಕೆಟ್ಟ ದುರ್ವಾಸನೆ ಬೀರುತ್ತಿದೆ ಎಂದು ಗ್ರಾಮಸ್ಥರು ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಗ್ರಾಮಸ್ಥ ವಿರೂಪಾಕ್ಷಪ್ಪ, "ಕುಡಿಯುವ ನೀರಿನ ಟ್ಯಾಂಕಿನ ಮೇಲೆ ಕಸ ಹೆಪ್ಪುಗಟ್ಟಿರುತ್ತದೆ. ಪೈಪ್​ ಲೈನ್​ನಲ್ಲಿ ಬರುವ ನೀರಿನಲ್ಲಿ ಪಾಚಿಗಟ್ಟಿರುತ್ತದೆ. ಕೊಳಕು ದುರ್ವಾಸನೆ ಇರುತ್ತೆ. ಈ ಬಗ್ಗೆ ವಾಟರ್‌ಮ್ಯಾನ್​ಗೆ ಹೇಳಿದರೆ ಅವನು ಪಿಡಿಒಗೆ, ಪಿಡಿಒ ಟಿಇಒಗೆ ಹೇಳುತ್ತಾರೆ. ಅವರು ವಾಟರ್‌ಮನ್‌ನಿಂದ ಸರಿಮಾಡಿಸಿಕೊಳ್ಳಿ ಅಂತಾರೆ. ಮತ್ತೆ ವಾಟರ್‌ಮನ್‌ಗೆ ಹೇಳಿದರೆ ಆತ ನಾನು ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಸಬೂಬು ಹೇಳುತ್ತಾನೆ. ಅವನು ಮೇಲಾಧಿಕಾರಿಗಳ ಬಗ್ಗೆ ಹೇಳಿ ಹೋಗುತ್ತಾನೆ. ಯಾವಾಗ ನೋಡಿದರೂ ಇದೇ ಕಥೆ" ಎಂದರು.

"ಮೊದಲು ಶುದ್ಧ ಕುಡಿಯುವ ನೀರಿನ ಘಟಕ ಇತ್ತು. ಆದರೆ ನೀರು ಫಿಲ್ಟರ್​ ಆಗುತ್ತಿರಲಿಲ್ಲಾ. ಮೂರು ವರ್ಷದಿಂದ ರಿಪೇರಿಗೆ ಬರುವುದು, ದುರಸ್ತಿಯಾಗುವುದು ಬರೇ ಇದೆ ಆಗಿದೆ. ವಾಹನವಿದ್ದವರು ಬೇರೆ ಊರುಗಳಿಂದ ಶುದ್ಧ ನೀರು ತಂದು ಕುಡಿಯುತ್ತಾರೆ. ಉಳಿದವರು ಏನು ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಗ್ರಾಮಸ್ಥರು. ಈ ರೀತಿಯಾದರೆ ರೋಗ ರುಜಿನ ಬರುವುದಿಲ್ಲವೇ? ನಾವು ಹೇಗೆ ಬದುಕಬೇಕು? ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ ತಾತ್ಸಾರ ಮಾಡುತ್ತಾರೆ" ಎಂದು ವಿರೂಪಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು.

ಈ ಕುರಿತಂತೆ ಮಾತನಾಡಿದ ಗ್ರಾಮದ ಯುವಕ ಅಜ್ಜಪ್ಪ, "ಗ್ರಾಮದಲ್ಲಿ ಮೂರು ವರ್ಷಗಳಿಂದ ಈ ಸಮಸ್ಯೆ ಇದೆ ಎಂದು ತಿಳಿಸಿದರು. ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್​ ಹತ್ತಿ ನೋಡಿದೆವು. ಟಾಕಿ ಸ್ವಚ್ಛವಿಲ್ಲಾ. ಈ ಕುರಿತಂತೆ ಗ್ರಾಮ ಪಂಚಾಯತ್ ಪಿಡಿಒ ಹತ್ತಿರ ಹೋಗಿದ್ದೆವು. ಅವರು ಎರಡು ಮೂರು ದಿನ ಕುಡಿಯಿರಿ ಸಮಸ್ಯೆಯಾಗುವುದಿಲ್ಲಾ ಎಂದು ತಿಳಿಸಿದರು. ಈ ರೀತಿ ನೀರು ಕುಡಿದರೆ ಮನುಷ್ಯ ಏನಾಗುತ್ತಾನೆ ನೀವೇ ನೋಡಿ. ಮೂರು ದಿನ ಬಿಟ್ಟು ಮತ್ತೇ ಹೇಳಿದರೆ ಮತ್ತೆ ಇದೇ ಉತ್ತರ ಸಿಗುತ್ತದೆ. ಮತ್ತೆ ಫೋನ್ ಮಾಡಿದರೆ ನಾನು ಎರಡೆರಡು ಗ್ರಾಮ ಪಂಚಾಯತ್‌ಗೆ ಪಿಡಿಒ ಆಗಿದ್ದೇನೆ ಎಂದು ಪಿಡಿಒ ತಿಳಿಸುತ್ತಾರೆ. ಚರಂಡಿ ನೀರು ಮಿಶ್ರವಾಗಿ ಬರುವುದರಿಂದ ಗ್ರಾಮದಲ್ಲಿ ಜನ ಆಸ್ಪತ್ರೆಗೆ ಹೋಗುತ್ತಿದ್ದಾರೆ" ಎಂದು ಅಜ್ಜಪ್ಪ ಆರೋಪಿಸಿದರು.

ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಭೂವೀರಾಪುರ ಗ್ರಾಮ ಸೇರುವ ಕಳ್ಳಿಹಾಳ್ ಗ್ರಾಮ ಪಂಚಾಯತ್ ಪಿಡಿಒ ಶಾರದಾ ಜಾಲವಾಡಗಿ, "ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಅಧಿಕಾರಿಗಳನ್ನು ಕಳುಹಿಸಿಕೊಡಲಾಗಿತ್ತು. ಭೂವೀರಾಪುರ ಕೊಳವೆಬಾವಿ ಕೇಸಿಂಗ್​ ಹಾಳಾಗಿದೆ. ಅಲ್ಲಿಯೇ ಪಕ್ಕದಲ್ಲಿನ ಹಳ್ಳದ ನೀರು ಕೊಳವೆಬಾವಿಗೆ ಸೇರುತ್ತಿದೆ. ಅಲ್ಲಿಂದ ನೇರವಾಗಿ ಟ್ಯಾಂಕ್‌ಗೆ ಸೇರಿ ಗ್ರಾಮದಲ್ಲಿ ಪೂರೈಕೆಯಾಗುತ್ತಿದೆ. ಕೊಳವೆ ಬಾವಿಯಿಂದ ಟ್ಯಾಂಕ್‌ಗೆ ಬೀಳುವ ನೀರಿಗೆ ಜಾಳಿಗೆ ಅಳವಡಿಸಲಾಗುತ್ತಿದೆ. ಇದಲ್ಲದೆ ಗ್ರಾಮದಲ್ಲಿನ ಪೈಪ್‌ಲೈನ್ ತೆಗೆದು ಹೊಸಪೈಪಲೈನ್​ ಹಾಕಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಗ್ರಾಮಕ್ಕೆ ಬೇರೆ ಕೊಳವೆಬಾವಿಯಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ" ಭರವಸೆ ನೀಡಿದರು. "ಈ ಹಿಂದೆ ಇದ್ದ ಕೊಳವೆಬಾವಿಯ ಕೇಸಿಂಗ್ ಪೈಪ್ ಒಡೆದು ಮಣ್ಣು ಕಲುಷಿತ ಸೇರುತ್ತಿದೆ. ಆ ಕೊಳವೆಬಾವಿಗೆ ಸಹ ಹೊಸ ಕೇಸಿಂಗ್ ಪೈಪ್ ಹಾಕಿಸುವುದಾಗಿ" ತಿಳಿಸಿದ್ದಾರೆ.

ಇದನ್ನೂ ಓದಿ: ಸಮೀಪದ ಭೂವೀರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸತತ ಮೂರು ವರ್ಷಗಳಿಂದ ಸಮರ್ಪಕ ನೀರಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.