ಭತ್ತ ಬೆಳೆಯಲು ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಿಡುಗಡೆ: 144 ಸೆಕ್ಷನ್ ಜಾರಿ
Published : Feb 21, 2024, 9:51 AM IST
ದಾವಣಗೆರೆ: ಭತ್ತ ಬೆಳೆಯಲು ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಿಡುಗಡೆ ಮಾಡಲಾಗಿದೆ. ಈ ಭಾಗದಲ್ಲಿರುವ ಅಕ್ರಮ ಪಂಪ್ ಸೆಟ್ ತೆರವುಗೊಳಿಸುವ ಹಿನ್ನೆಲೆ ಫೆ.23ರವರೆಗೆ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಬರಗಾಲ ಎದುರಾಗಿದೆ. ಭದ್ರಾ ನಾಲೆಯ ನೀರು ಎಲ್ಲ ರೈತರಿಗೆ ಮುಟ್ಟಿಸುವ ಉದ್ದೇಶದಿಂದ ದಾವಣಗೆರೆ ತಹಶೀಲ್ದಾರ್ ಎಂ.ಬಿ. ಅಶ್ವಥ್ ನೀರಿನ ಉಳಿವಿಗಾಗಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಭದ್ರಾ ಡ್ಯಾಂನಿಂದ ಭದ್ರಾ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಆದರೆ, ಕಾಲುವೆ ಇಕ್ಕೆಲಗಳಲ್ಲಿ ಅಕ್ರಮ ಪಂಪ್ ಸೆಟ್ ಹಾವಳಿ ಮಿತಿ ಮೀರಿದೆ. ಇವುಗಳನ್ನು ತೆರವುಗೊಳಿಸಲು ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ನಲ್ಕುಂದ ಗ್ರಾಮದ ಗಡಿಯಿಂದ ಶಂಕರನಹಳ್ಳಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಭದ್ರಾ ಡ್ಯಾಂನಿಂದ ಭತ್ತ ಬೆಳೆಯಲು ಕಾಲುವೆಗೆ ನೀರು ಬಿಡಲಾಗಿದೆ. ಎಲ್ಲ ರೈತರಿಗೆ ನೀರು ತಲುಪಿಸುವ ಉದ್ದೇಶ ಇದಾಗಿದೆ. ಕೆಲವು ರೈತರು ನೀರು ಬರುತ್ತಿದ್ದಂತೆ ಅಡಕೆ ಬೆಳೆಗೆ ನೀರುಣಿಸಲು ಅಕ್ರಮ ಪಂಪ್ ಸೆಟ್ ಅಳವಡಿಸಿರುವ ಆರೋಪ ಕೇಳಿಬಂದಿದೆ. ಭದ್ರಾ ಕಾಲುವೆಯ ಎಡದಂಡೆ ಮತ್ತು ಬಲದಂಡೆಯ 200 ಮೀಟರ್ ವ್ಯಾಪ್ತಿಯಲ್ಲಿ ಫೆ.20ರಿಂದ ಫೆ.23ರವರೆಗೆ 144 ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಆಗಬಹುದು ಎಂಬ ಮುನ್ನೆಚ್ಚರಿಕೆ ಕ್ರಮ ವಹಿಸಿರುವ ತಾಲೂಕು ಆಡಳಿತವು ಅಕ್ರಮ ಪಂಪ್ ಸೆಟ್ ತೆರವಿಗಾಗಿ ನೀರಾವರಿ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆಗಳ ತಂಡಗಳನ್ನು ರಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: 110 ಗ್ರಾಮಗಳಿಗೆ ಮೇ ತಿಂಗಳ ವೇಳೆ ಕುಡಿಯಲು ಕಾವೇರಿ ನೀರು ಪೂರೈಕೆ: ಡಿಸಿಎಂ ಡಿಕೆ ಶಿವಕುಮಾರ್