ಕರ್ನಾಟಕ

karnataka

ಸಿದ್ದೇಶ್ವರ ಜಾತ್ರೆ: ಜಂಗಿ ನಿಖಾಲಿ ಕುಸ್ತಿ ಆಯೋಜನೆ.. ಜಗಜಟ್ಟಿ ಪೈಲ್ವಾನರ ಅದ್ಭುತ ಕಾಳಗ

By ETV Bharat Karnataka Team

Published : Jan 20, 2024, 5:49 PM IST

ವಿಜಯಪುರ: ವಿಜಯಪುರದ ಆರಾಧ್ಯ ದೈವ ಸಿದ್ದೇಶ್ವರ ಸಂಕ್ರಮಣ ಜಾತ್ರೆಯ ಕೊನೆಯ ದಿನ ಸಂಪ್ರದಾಯದಂತೆ ರೋಚಕ ಜಂಗಿ ನಿಖಾಲಿ ಕುಸ್ತಿ ನಡೆಯಿತು. ಹಲವು ಜಗಜಟ್ಟಿಗಳು ತಮ್ಮ ಶಕ್ತಿ‌ಪ್ರದರ್ಶನ ಮಾಡಿದ್ದು, ಮೈನವಿರೇಳಿಸಿದ ಪೈಲ್ವಾನರ ಕಾಳಗಕ್ಕೆ ಸಾವಿರಾರು ಸಂಖ್ಯೆಯ ಕ್ರೀಡಾ ಪ್ರೇಮಿಗಳು ಸಾಕ್ಷಿಯಾದರು.

ನಗರದ ಎಸ್‌.ಎಸ್‌.ಹೈಸ್ಕೂಲ್‌ ಮೈದಾನದಲ್ಲಿ ನಡೆದ ಕುಸ್ತಿ ಕಾಳಗದಲ್ಲಿ ರಾಜ್ಯ ಮಾತ್ರವಲ್ಲದೇ ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಿಂದ ಸುಮಾರು ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. ಜಗಜಟ್ಟಿಗಳ ಪೈಲ್ವಾನರ ಕಾಳಗ ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ಕೇಕೆ ಚಪ್ಪಾಳೆಗಳ ಮೂಲಕ ಕಾಳಗಕ್ಕೆ ಪುಷ್ಠಿ ನೀಡಿದರು.

ಒಂದೊಂದು ಸೆಣಸಾಟವೂ ರೋಚಕತೆಯಿಂದ ಕೂಡಿತ್ತು. ಕಾಳಗದಲ್ಲಿ ಯಾರು ಚಿತ್ ಮಾಡುತ್ತಾರೆ ಎಂಬುದನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಬೆಳಗಾವಿಯ ಶಿವಯ್ಯ ಪೂಜಾರಿ, ಓಂಕಾರ ಬಾತ್ಮೋರೆ ಮಧ್ಯೆ ನಡೆದ ದೋ ನಂಬರ್ ಕುಸ್ತಿ, ಹಾಗೂ ಪಂಜಾಬ್​ನ ಗಣಿ ಪಂಜಾಬ್ ಹಾಗೂ ಮಹಾರಾಷ್ಟ್ರದ ಸಂದೀಪ್​ ಮೋಟೆ ಅವರ ಮಧ್ಯೆ ನಡೆದ ಕಡೆಯ ಕುಸ್ತಿ ಕಾಳಗ ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. 

ಈ ಬಾರಿಯ ಜಂಗಿ ನಿಕಾಲಿ ಕುಸ್ತಿಯಲ್ಲಿ ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದು, ವಿಶೇಷವಾಗಿತ್ತು. ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ 8 ಜನ ಮಹಿಳಾ ಪಟುಗಳ ಕಾಳಗ ನೊಡುಗರನ್ನು ನಿಬ್ಬೆರಗುಗೊಳಿಸಿತು. ಗಾಯತ್ರಿ ಸುತಾರ, ಶಾಲಿನಿ ಸಿದ್ಧಿ, ಸುಜಾತಾ ಪಾಟೀಲ, ವಿಶಾಲಿ ಯಾಧವ, ಸಾನಿತಾ ಚೌಗಲೆ ಅವರ ಪ್ರದರ್ಶನ ಕಣ್ಮನ ಸೆಳೆಯಿತು. ವಿಜಯಪುರ ನಗರದಲ್ಲಿ ಕಳೆದ ಒಂದು ವಾರದಿಂದ ನಡೆದ ಸಿದ್ಧೇಶ್ವರ ಸಂಕ್ರಮಣ ಜಾತ್ರೆ ಕುಸ್ತಿ ಕ್ರೀಡೆಯೊಂದಿಗೆ ತೆರೆ ಕಂಡಿತು. 

ಇದನ್ನೂ ನೋಡಿ: ವಿಜಯಪುರದ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆ-ವಿಡಿಯೋ

ABOUT THE AUTHOR

...view details