ಕರ್ನಾಟಕ

karnataka

ಬೆಣ್ಣೆ ನಗರಿಯಲ್ಲಿ ಚಿತ್ರಸಂತೆ, ಮನ ಸೆಳೆದ ಕಲಾಕೃತಿಗಳು: ವಿಡಿಯೋ

By ETV Bharat Karnataka Team

Published : Mar 4, 2024, 10:43 AM IST

ಚಿತ್ರ ಸಂತೆ

ದಾವಣಗೆರೆ: ನಗರದ ಎವಿಕೆ ರಸ್ತೆಯಲ್ಲಿ ಭಾನುವಾರ ಚಿತ್ರಸಂತೆ ಆಯೋಜಿಸಲಾಗಿತ್ತು. ಈ ಮೂಲಕ ರಾಜ್ಯ, ಹೊರ ರಾಜ್ಯದ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾವಿದರ ಕಲಾಕುಂಚದಲ್ಲಿ ಅರಳಿದ ವಿವಿಧ ಚಿತ್ರಗಳು ಜನರನ್ನು ಆಕರ್ಷಿಸಿದವು. ಮೂರನೇ ವರ್ಷದ ಚಿತ್ರಸಂತೆ ಜನಾಕರ್ಷಣೆ ಕೇಂದ್ರಬಿಂದುವಾಯಿತು. ನೂರಾರು ಕಲಾವಿದರ ಕುಂಚದಲ್ಲಿ ಅರಳಿದ ಕಲಾಕೃತಿಗಳ ಪ್ರದರ್ಶನ‌ ಮತ್ತು ಮಾರಾಟಕ್ಕೆ ದಾವಣಗೆರೆ ಚಿತ್ರಕಲಾ ಪರಿಷತ್ ವೇದಿಕೆ ಒದಗಿಸಿತು.

ಚಿತ್ರಸಂತೆಗೆ ತಂಡೋಪತಂಡವಾಗಿ ಆಗಮಿಸಿದ್ದ ಕಲಾರಸಿಕರನ್ನು ಬಣ್ಣಬಣ್ಣದ ಚಿತ್ರಗಳು ಮಂತ್ರಮುಗ್ಧಗೊಳಿಸಿದವು. ರಾಜ್ಯದ ಕಲಾವಿದರಷ್ಟೇ ಅಲ್ಲದೇ ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಶಿಲ್ಪಿಗಳೂ ಸೇರಿದಂತೆ ನಾನಾ ಪ್ರಕಾರದ ಕಲಾವಿದರಿಗೂ ಚಿತ್ರ ಸಂತೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. 166ಕ್ಕೂ ಹೆಚ್ಚು ಚಿತ್ರಕಲೆಯ ಸ್ಟಾಲ್​ಗಳ ವ್ಯವಸ್ಥೆ ಮಾಡಲಾಗಿತ್ತು.   

ಪೆನ್‌ಆರ್ಟ್, ಕ್ಯಾನ್ವಸ್ ಆರ್ಟ್, ಆಯಿಲ್ ಪೇಂಟಿಂಗ್, ವರ್ಲಿ ಕಲೆ, ಥ್ರೆಡ್‌ಆರ್ಟ್, ವಾಟರ್ ಅಕ್ರಲಿಕ್ ಮಾದರಿಯ ಚಿತ್ರಕಲೆಗಳು, ಗೋದ್ ಮಾದರಿ ಚಿತ್ರ, ಕ್ಲೇ ಮಾದರಿಯ ಚಿತ್ರಗಳು ಜನರನ್ನು ಹೆಚ್ಚು ಆಕರ್ಷಿಸಿದವು. ಚಿತ್ರಸಂತೆಯನ್ನು ವೀಕ್ಷಿಸುತ್ತಾ ಇಷ್ಟದ ಚಿತ್ರಕಲೆಗಳನ್ನು ಜನರು ಖರೀದಿಸುತ್ತಿದ್ದರು. ಈ ಮೂಲಕ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರವೂ ಆಗಿದೆ ಎಂದು ಕಲಾವಿದರು ತಿಳಿಸಿದ್ದಾರೆ. 

ಕಾರ್ಯಕ್ರಮ ಉದ್ಘಾಟಿಸಿದ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ವ್ಯಂಗ್ಯಚಿತ್ರ ಗಮನ ಸೆಳೆಯಿತು. ಇದನ್ನು ನೋಡಿ ಸಚಿವರ​ ಮೊಗದಲ್ಲಿ ನಗು ಉಕ್ಕಿತು. 

ಮಹಾರಾಷ್ಟ್ರ ಈಚಲರಂಜಿಯ ಕಲಾವಿದರದ ದತ್ತಾತ್ರೇಯ ಹಾಗು ಮಾಧವಿ, ರಾಜಸ್ಥಾನದ ಕಲಾವಿದ ರಿಯಾಜ್ ಸೇರಿದಂತೆ ದಾವಣಗೆರೆ ‌ನಗರ, ಮಲೆಬೆನ್ನೂರು, ಬಸವಪಟ್ಟಣ, ಸಾಗರ, ಶಿವಮೊಗ್ಗ, ವಿಜಯಪುರ, ಗದಗ ಹೀಗೆ ಸಾಕಷ್ಟು ಕಡೆಯಿಂದ ಕಲಾವಿದರು ಆಗಮಿಸಿ ತಮ್ಮ ಕಲೆಗಳನ್ನು ತಂದು ಪ್ರದರ್ಶನಕ್ಕಿಟ್ಟಿದ್ದರು.

ಇದನ್ನೂ ಓದಿ: ಯಶ್​, ದರ್ಶನ್​ ಅವರಿಂದ ಮತ್ತೆ ಪ್ರಚಾರದ ನಿರೀಕ್ಷೆ ಮಾಡಲು ಮನಸ್ಸು ಒಪ್ಪುತ್ತಿಲ್ಲ: ಸುಮಲತಾ

ABOUT THE AUTHOR

...view details