ಕರ್ನಾಟಕ

karnataka

ಬರಲಿದೆ ಆ್ಯಪಲ್ ಸೆಲ್ಫ್​ ಡ್ರೈವಿಂಗ್​ ಕಾರು: ಬೆಲೆ 1 ಲಕ್ಷ ಡಾಲರ್​ಗಿಂತ ಕಡಿಮೆ!

By ETV Bharat Karnataka Team

Published : Feb 4, 2024, 12:44 PM IST

ಆ್ಯಪಲ್ ತನ್ನ ಸೆಲ್ಫ್ ಡ್ರೈವಿಂಗ್ ಕಾರಿನ ಪರೀಕ್ಷೆಯನ್ನು ತೀವ್ರಗೊಳಿಸಿದೆ ಎಂದು ವರದಿಯಾಗಿದೆ.

Apple ramps up its secret self driving car testing: Report
Apple ramps up its secret self driving car testing: Report

ಸ್ಯಾನ್ ಫ್ರಾನ್ಸಿಸ್ಕೋ: ಆ್ಯಪಲ್ ತನ್ನ ಸ್ವಯಂ ಚಾಲಿತ ಕಾರು (self-driving car) ತಂತ್ರಜ್ಞಾನದ ಪರೀಕ್ಷೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಡಿಸೆಂಬರ್ 2022ರಿಂದ ನವೆಂಬರ್ 2023ರವರೆಗೆ ಅಮೆರಿಕದಲ್ಲಿ 4,50,000 ಮೈಲಿ ಸ್ವಯಂಚಾಲಿತ ಚಾಲನೆಯನ್ನು ದಾಖಲಿಸಿದೆ. ಕ್ಯಾಲಿಫೋರ್ನಿಯಾ ಡಿಪಾರ್ಟ್​ಮೆಂಟ್​ ಆಫ್ ಮೋಟಾರ್ ವೆಹಿಕಲ್ಸ್ (ಡಿಎಂವಿ) ಗೆ ಆ್ಯಪಲ್ ಸಲ್ಲಿಸಿದ ದತ್ತಾಂಶವು ಆ್ಯಪಲ್ ತನ್ನ ಸೆಲ್ಫ್ ಡ್ರೈವಿಂಗ್ ಕಾರನ್ನು ಕಳೆದ ವರ್ಷಕ್ಕಿಂತ ಹೆಚ್ಚು ಪರೀಕ್ಷೆಗೊಳಪಡಿಸಿದೆ ಎಂಬುದನ್ನು ತೋರಿಸಿದೆ ಎಂದು ವೈರ್ಡ್ (Wired) ವರದಿ ಮಾಡಿದೆ.

ಕಾರಿನ ಸ್ಟಿಯರಿಂಗ್ ವೀಲ್​ ಹಿಡಿಯಲು ಸುರಕ್ಷತಾ ಚಾಲಕನನ್ನು ಹೊಂದಿದ್ದರೆ ಮಾತ್ರ ಕ್ಯಾಲಿಫೋರ್ನಿಯಾದ ಸಾರ್ವಜನಿಕ ರಸ್ತೆಗಳಲ್ಲಿ ತನ್ನ ಸೆಲ್ಫ್​ ಡ್ರೈವಿಂಗ್ ಕಾರಿನ ತಂತ್ರಜ್ಞಾನವನ್ನು ಪರೀಕ್ಷಿಸಲು ಆ್ಯಪಲ್ ಪರವಾನಗಿ ಹೊಂದಿದೆ. ಈ ಮೂಲಕ ಆ್ಯಪಲ್​ನ ರಹಸ್ಯ ಕಾರು ಯೋಜನೆ ಕೊನೆಗೂ ವೇಗ ಪಡೆಯುತ್ತಿದೆ. ಸೆಲ್ಫ್​ ಡ್ರೈವಿಂಗ್ ಕಾರು ನಿರ್ಮಿಸಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಆ್ಯಪಲ್​ ನಿಧಾನಗೊಳಿಸಿತ್ತು ಎಂದು ಈ ಹಿಂದೆ ವರದಿಗಳು ಹೇಳಿದ್ದವು. ಆದರೆ ಕಂಪನಿಯು ಈಗಲೂ ತನ್ನ ಸೆಲ್ಫ್​ ಡ್ರೈವಿಂಗ್ ಕಾರನ್ನು ಪರೀಕ್ಷಿಸುತ್ತಿದೆ ಎಂದು ಹೊಸ ದಾಖಲೆಗಳು ತೋರಿಸಿವೆ.

2026ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದ ತನ್ನ ಸೆಲ್ಫ್ ಡ್ರೈವಿಂಗ್ ಕಾರಿನ ಬಿಡುಗಡೆಯನ್ನು ಆ್ಯಪಲ್ ಮುಂದೂಡಿದೆ ಎನ್ನಲಾಗಿತ್ತು. ಈ ಕಾರು 1 ಲಕ್ಷ ಡಾಲರ್​ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ವರದಿಗಳು ಹೇಳಿವೆ. ಕಾರಿನ ಸೀಟ್ ಮತ್ತು ಸಸ್ಪೆನ್ಷನ್​​ನಂಥ ಸೌಕರ್ಯಗಳಿಗೆ ಸಂಬಂಧಿಸಿದ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್​ಗಾಗಿ ಆ್ಯಪಲ್ ಈಗಾಗಲೇ ಹಲವಾರು ಹೊಸ ಪೇಟೆಂಟ್​ ಅರ್ಜಿಗಳನ್ನು ಸಲ್ಲಿಸಿದೆ.

ವೆಹಿಕಲ್-ಟು-ಎವೆರಿಥಿಂಗ್ (ವಿ 2 ಎಕ್ಸ್) ತಂತ್ರಜ್ಞಾನ ಅಭಿವೃದ್ಧಿಪಡಿಸಲು ಆ್ಯಪಲ್ ಕಂಪನಿ ನಿರತವಾಗಿದೆ ಎಂದು ವರದಿಯಾಗಿದೆ. ಈ ತಂತ್ರಜ್ಞಾನದ ಮೂಲಕ ಕಾರುಗಳು ಪರಸ್ಪರ ಸಂಪರ್ಕ ಹೊಂದಲು ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಗೆ ಸಂಪರ್ಕಿಸಲು ಸಾಧ್ಯವಾಗಲಿದೆ. ಕಂಪನಿಯು 2022 ರಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಸ್ವಾಯತ್ತ ಕಾರಿನ ತಯಾರಿಕೆಗೆ ನೆರವಾಗಲು ಅನುಭವಿ ಫೋರ್ಡ್ ಕಂಪನಿಯ ಅಧಿಕಾರಿ ಡೆಸಿ ಉಜ್ಕಾಶೆವಿಕ್ (Desi Ujkashevic) ಅವರನ್ನು ನೇಮಿಸಿಕೊಂಡಿದೆ.

ಏತನ್ಮಧ್ಯೆ, ಗೂಗಲ್​ನ ವೇಮೊ ಸೆಲ್ಫ್ ಡ್ರೈವಿಂಗ್ ಕಾರು ಕ್ಯಾಲಿಫೋರ್ನಿಯಾದಲ್ಲಿ ಸುರಕ್ಷತಾ ಚಾಲಕನೊಂದಿಗೆ 3.7 ಮಿಲಿಯನ್ ಪರೀಕ್ಷಾ ಮೈಲಿ ಮತ್ತು ಚಾಲಕನಿಲ್ಲದೆ 1.2 ಮಿಲಿಯನ್ ಪರೀಕ್ಷಾ ಮೈಲಿಗಳಷ್ಟು ಓಡಿದೆ. ಇದಲ್ಲದೆ ಪ್ರಯಾಣಿಕರನ್ನು ಹೊತ್ತು 1.6 ಮಿಲಿಯನ್ ಹೆಚ್ಚುವರಿ ಮೈಲುಗಳಷ್ಟು ಈ ಕಾರು ಓಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಗೂಗಲ್​ನ ಎಐ ಚಾಟ್​ಬಾಟ್ ಜೆಮಿನಿ ಪ್ರೊ ಈಗ ಕನ್ನಡ ಸೇರಿ 9 ಭಾರತೀಯ ಭಾಷೆಗಳಲ್ಲಿ ಲಭ್ಯ

ABOUT THE AUTHOR

...view details