ಕರ್ನಾಟಕ

karnataka

ರಾಜ್ಯದ ಜನರ ಮನೆ ಬೆಳಗಿಸಲು ಕಾಂಗ್ರೆಸ್​ ಸರ್ಕಾರ ಐದು ಗ್ಯಾರಂಟಿ ತಂದಿದೆ: ಡಿಸಿಎಂ ಡಿ ಕೆ ಶಿವಕುಮಾರ್

By ETV Bharat Karnataka Team

Published : Feb 25, 2024, 8:54 PM IST

ಬಿಡದಿವರೆಗೂ ಮೆಟ್ರೋ ರೈಲು ತರುವ ಸಿದ್ಧತೆ ಮಾಡಲಾಗಿದೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ರಚಿಸಲಾಗಿದ್ದು, ಆ ಮೂಲಕ ಬಿಡದಿ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದು ಬಿಡದಿಯಲ್ಲಿ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.

Grilahakshmi's convention was held at Bidadi.
ಬಿಡದಿಯಲ್ಲಿ ಗೃಹಲಕ್ಷ್ಮಿಯರ ಸಮಾವೇಶ ನಡೆಯಿತು.

ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು.

ರಾಮನಗರ:ನಾರಿ ಶಕ್ತಿ ದೇಶದ ಶಕ್ತಿ. ನಾವು ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಗ್ರಾಮ ದೇವತೆ ಇರುತ್ತಾಳೆ. ನಮಗೆ ಆಮಂತ್ರಣ ನೀಡುವಾಗ ಆಮಂತ್ರಣ ಪತ್ರದಲ್ಲಿ ಮೊದಲು ಶ್ರೀಮತಿ ಎಂದು ಹಾಕಿರುತ್ತಾರೆ. ಇದು ನಮ್ಮ ಸಂಸ್ಕೃತಿ. ಈ ದೇಶದಲ್ಲಿ ಹೆಣ್ಣಿಗೆ ಗೌರವ ನೀಡುವ ಸಂಸ್ಕೃತಿ ಇದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ರಾಮನಗರ ಜಿಲ್ಲೆ ಬಿಡದಿಯಲ್ಲಿ ನಡೆದ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ನಾಡ ಧ್ವಜ ಕೆಂಪು, ಹಳದಿ ಬಣ್ಣದಿಂದ ಕೂಡಿದೆ. ಅಂದರೆ ಅರಿಷಿನ ಮತ್ತು ಕುಂಕುಮದ ಸಂಕೇತ. ಇದು ಸೌಭಾಗ್ಯದ ಸಂಕೇತ. ಮಹಿಳೆಯರು ನಮ್ಮ ರಾಜ್ಯದ ಸೌಭಾಗ್ಯ ಎಂದು ನಮ್ಮ ಸರ್ಕಾರ ಈ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ ಎಂದು ಹೇಳಿದರು.

ರಾಜ್ಯದ ಜನರ ಮನೆ ಬೆಳಗಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಶಕ್ತಿ ತುಂಬಲು ನಾವು ಈ ಯೋಜನೆ ನೀಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆ ಬಿಸಾಕಿ ಹೋದಳು. ಕರ್ನಾಟಕ ಪ್ರಬುದ್ಧವಾಯಿತು. ಕರ್ನಾಟಕ ಸಮೃದ್ಧವಾಯಿತು ಎಂದು ವರ್ಣಿಸಿದರು.

ನಮ್ಮ ಯೋಜನೆಗಳಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಸರ್ಕಾರ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ದೇವಾಲಯದ ಹುಂಡಿಗಳು ತುಂಬುತ್ತಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಿಜೆಪಿ ಸರ್ಕಾರ ನಮ್ಮ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದವು. ನಮ್ಮ ಯೋಜನೆಗಳು ಅತ್ತೆ, ಸೊಸೆಯರ ಮಧ್ಯೆ ತಂದುಹಾಕಲಾಗುತ್ತಿದೆ ಎಂದರು. ನಿಮ್ಮ ಮನೆಯಲ್ಲಿ ಈ ವಿಚಾರವಾಗಿ ಜಗಳ ಆಗಿದೆಯೇ ಇಲ್ಲ. ನಯಾಪೈಸೆ ಲಂಚ ನೀಡದೆ ಯೋಜನೆಯ ಲಾಭವನ್ನು ಪಡೆದಿದ್ದೀರಾ ಎಂದು ತಿಳಿಸಿದರು.

ಬಿಜೆಪಿ ಜೆಡಿಎಸ್ ಮೈತ್ರಿ ಇದ್ದರೂ ಪುಟ್ಟಣ್ಣ ಗೆದ್ದರು:ಈ ಸರ್ಕಾರ ಇನ್ನು ನಾಲ್ಕು ವರ್ಷ ಹಾಗೂ ಮುಂದಿನ ಐದು ವರ್ಷಗಳ ಅವಧಿ ಅಂದರೆ ಒಟ್ಟು ಒಂಬತ್ತು ವರ್ಷ ನಿಮ್ಮ ಸೇವೆ ಮಾಡಲಿದೆ. ನಿಮಗೆ ತೊಂದರೆ ಆಗದಂತೆ ನಾವು ಯೋಜನೆ ಜಾರಿ ಮಾಡುತ್ತಿದ್ದೇವೆ. ಸಂಸದ ಸುರೇಶ್ ಅವರನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಚನ್ನಪಟ್ಟಣದಲ್ಲಿ ಬಡಿದಾಡುತ್ತಿದ್ದ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಈಗ ಪರಸ್ಪರ ಆಲಿಂಗನ ಮಾಡಿಕೊಳ್ಳುತ್ತಿದ್ದಾರೆ. ಮೊನ್ನೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಫಲಿತಾಂಶ ಏನಾಯ್ತು? ಇಬ್ಬರೂ ಸೇರಿದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆದ್ದರು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ:ಹಾಗೆಯೇ ಮಾಜಿ ಸಚಿವ ಆರಗ ಜ್ಞಾನೇಂದ್ರ ನಮ್ಮ ಯೋಜನೆಗಳನ್ನು 420 ಗ್ಯಾರಂಟಿ ಎಂದು ಹೇಳಿದ್ದಾರೆ. ನಾನು ಅರ್ಧ ಜ್ಞಾನೇಂದ್ರ, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಒಂದು ಸವಾಲು ಹಾಕುತ್ತೇನೆ. ನಮ್ಮದು 420 ಗ್ಯಾರಂಟಿ ಯೋಜನೆಯಾದರೆ ನಿಮ್ಮ ಕಾರ್ಯಕರ್ತರಿಗೆ ಈ ಯೋಜನೆ ಪ್ರಯೋಜನ ಪಡೆಯಬಾರದು ಎಂದು ಕರೆ ನೀಡಿ. ನಾನು ಈ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಿದ್ದೇನೆ. ಜೆಡಿಎಸ್ ಗೆ ಮತ ಹಾಕುತ್ತಿದ್ದವರು ಕೂಡ ಈ ಬಾರಿ ಡಿ ಕೆ ಸುರೇಶ್ ಹಾಗೂ ಕಾಂಗ್ರೆಸ್ ಗುರುತಿಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.

ಬಿಡದಿ ವರೆಗೂ ಮೆಟ್ರೋ ತರಲು‌ ಸಿದ್ಧತೆ:ಬಿಡದಿವರೆಗೂ ಮೆಟ್ರೋ ರೈಲು ತರಲು ಸಿದ್ಧತೆ ಮಾಡಲಾಗಿದೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ರಚನೆ ಮಾಡಲಾಗಿದೆ. ಆ ಮೂಲಕ ಬಿಡದಿ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ನೀವು, ನಿಮ್ಮ ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ. ಸುರೇಶ್ ಅವರಿಗೆ ಮತ ಹಾಕಬೇಕು ಎಂದು ಡಿಕೆಶಿ ಮನವಿ ಮಾಡಿದರು.

ಗೃಹಲಕ್ಷ್ಮೀ ಸಮಾವೇಶದಲ್ಲಿ ಕಾಂಗ್ರೆಸ್ ಶಾಲು ಧರಿಸುವ ಬದಲು ಕರ್ನಾಟಕದ ಶಾಲು ಧರಿಸಿದ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಮಾಧ್ಯಮದವರು ಅದನ್ನು ಚರ್ಚೆ ಮಾಡಲಿ ಅಂತ ಕನ್ನಡಿಗರ ಹಕ್ಕು, ಕನ್ನಡಿಗರ ತೆರಿಗೆಗಾಗಿ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟ ಮುಂದುವರಿದಿದೆ ಎಂದ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಸಿ ಟಿ ರವಿಗೆ ಶಾಸಕ ಬಾಲಕೃಷ್ಣ ಎಚ್ಚರಿಕೆ:ಇದಲ್ಲದೇ ರಾಮನಗರ, ಮಾಗಡಿಯಲ್ಲಿ ಕುಕ್ಕರ್ ಗಿಫ್ಟ್ ಹಂಚಿಕೆ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಕ್ಕೆ ಶಾಸಕ ಬಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಬಿಡದಿಯಲ್ಲಿ ಮಾತನಾಡಿದ ಅವರು, ಮೋದಿ - ಅಮಿತ್ ಶಾ ಯಾವುದೇ ಹಣ ಹಂಚಿಲ್ವ?. ಹಾಗೇ ಚುನಾವಣೆ ಗೆದ್ದಿದ್ದಾರಾ? ಶ್ರೀರಾಮನ ಪಾದಮುಟ್ಟಿ ಪ್ರಮಾಣ ಮಾಡಲಿ. ಸುಮ್ಮನೆ ಈ ರೀತಿ ಬುರುಡೆ ಬಿಡೋದು ಬೇಡ. ಸಿ.ಟಿ. ರವಿ ಹಣ ಹಂಚದೇ ಚುನಾವಣೆ ಗೆದ್ದಿದ್ರೆ ಹೇಳಲಿ. ಇದಲ್ಲದೆ ಕುಮಾರಸ್ವಾಮಿ ರಾಮನಗರ - ಚನ್ನಪಟ್ಟಣದಲ್ಲಿ ಹಣ ಹಂಚಿಲ್ವ. ಚಾಮುಂಡೇಶ್ವರಿ ತಾಯಿಯ ಮೇಲೆ ಪ್ರಮಾಣ ಮಾಡಲಿ. ಎಲ್ಲರೂ ಗಾಜಿನ ಮನೆಯಲ್ಲಿದ್ದಾರೆ, ಕಲ್ಲು ಹೊಡೆಯುವುದು ಬೇಡ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಇದನ್ನೂಓದಿ:ಶೋಭಾ ಕರಂದ್ಲಾಜೆ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ABOUT THE AUTHOR

...view details