ಕರ್ನಾಟಕ

karnataka

ಮಂಗಳೂರು: ಮತಗಟ್ಟೆಯಲ್ಲಿ ಅಳವಡಿಸಿದ್ದ ವೆಬ್‍ ಕ್ಯಾಮೆರಾ ಕಳವು - Web Camera Theft

By ETV Bharat Karnataka Team

Published : May 1, 2024, 9:43 PM IST

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 228ರಲ್ಲಿ ವೆಬ್ ಕ್ಯಾಮೆರಾ ಕಳವಾಗಿದೆ.

polling station
ಮತಗಟ್ಟೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಅಳವಡಿಸಿದ್ದ ವೆಬ್ ಕ್ಯಾಮೆರಾವನ್ನು ಸಿಮ್, ಮೆಮೊರಿ ಕಾರ್ಡ್‌ಸಮೇತ ಕಳವು ಮಾಡಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏ.24ರಂದು ಈ ವೆಬ್ ಕ್ಯಾಮೆರಾ ಅಳವಡಿಸಲಾಗಿತ್ತು. ಏ.26ರಂದು ಮತದಾನ ಪ್ರಕ್ರಿಯೆಗೆಂದು ಅಳವಡಿಸಲಾಗಿದೆ. ದುಷ್ಕರ್ಮಿಗಳು ಕ್ಯಾಮೆರಾ ಹಾಗೂ ಚುನಾವಣಾ ಧ್ವಜವನ್ನು ಕಳವು ಮಾಡಿದ್ದಾರೆ ಎಂದು ತೆಕ್ಕಾರು ಗ್ರಾ.ಪಂ ಸಿಬ್ಬಂದಿ, ಬೂತ್ ಲೆವೆಲ್ ಅಧಿಕಾರಿ ಮಹಮ್ಮದ್ ಸಿಯಾಬ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮತದಾನ ದಿನದ ಎಲ್ಲ ಪ್ರಕ್ರಿಯೆ ವೆಬ್‍ಕ್ಯಾಮ್‍ ಮೂಲಕ ಚುನಾವಣಾ ಆಯೋಗಕ್ಕೆ ನೇರಪ್ರಸಾರವಾಗುತ್ತದೆ. ಸುಮಾರು 10,600 ರೂ. ಬೆಲೆಯ ಕ್ಯಾಮೆರಾಗೆ ಸಿಮ್, ಮೆಮೊರಿ ಕಾರ್ಡ್ ಅಳವಡಿಸಲಾಗಿತ್ತು. ಚುನಾವಣೆಯ ಬಳಿಕ ಎರಡು ದಿನ ಸರಕಾರಿ ರಜೆ ಇದ್ದು, ಏ.29ರಂದು ಮಧ್ಯಾಹ್ನ ತಾಲೂಕು ಚುನಾವಣಾ ಶಾಖೆಯಿಂದ ಬಂದ ಸೂಚನೆಯಂತೆ ವೆಬ್ ಕ್ಯಾಮೆರಾವನ್ನು ವಿ.ಎ. ಕಚೇರಿಗೆ ನೀಡಲು ಪಂಚಾಯತ್ ಸಿಬ್ಬಂದಿ ಸಂಜೆ ಆಗಮಿಸಿದ್ದಾಗ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಹಳೇ ಬಾಗಿಲಿಗೆ ಲಾಕ್ ಇದ್ದರೂ ಅದನ್ನು ತಳ್ಳಿ ಬೂತ್​ನೊಳಗೆ ಅಳವಡಿಸಿದ್ದ ಕ್ಯಾಮೆರಾ ಕಳವು ಮಾಡಲಾಗಿದೆ. ಒಳಗಿದ್ದ ಕೇಬಲ್‍ಗಳನ್ನು ಕತ್ತರಿಸಲಾಗಿದೆ. ಸೋಲಾರ್ ಲೈಟ್‌ಸಹಿತ ಇತರ ವೈಯರ್​ಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಆದರೆ ಕೇಬಲ್, ಸೋಲಾರ್ ಲೈಟ್ ಅಥವಾ ಪೀಠೋಪಕರಣ ಕಳವಾಗಿಲ್ಲ. ಶಾಲೆಯ ಆವರಣದಲ್ಲಿ ಅಳವಡಿಸಿದ್ದ ಸ್ವೀಪ್ ಸಮಿತಿ ನೀಡಿದ ಚುನಾವಣೆ ಧ್ವಜ ಕಳವು ಮಾಡಲಾಗಿದೆ.

ಮಂಗಳವಾರ ಬೆಳಗ್ಗೆ ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಮಂಗಳೂರಿನಿಂದ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವೆಬ್​ ಕಾಸ್ಟಿಂಗ್ ತಂಡ ಅಳವಡಿಸಿರುವ ವೆಬ್ ಕ್ಯಾಮೆರಾ ಕಳ್ಳತನವಾಗಿದೆ ಎಂದು ಬಿಎಲ್​ಒ ಮೂಲಕ ತಿಳಿದು ಬಂದಿದೆ.‌ ಈ ವೆಬ್ ಕ್ಯಾಮೆರಾವನ್ನು ನೇರವಾಗಿ ವಿಡಿಯೋವನ್ನು ಬಿತ್ತರಿಸಲು ಮಾತ್ರ ಅಳವಡಿಸಲಾಗಿತ್ತು. ಇದರಲ್ಲಿ ಯಾವುದೇ ಸಂಗ್ರಹಣೆ ಮಾಡಲಾಗಿಲ್ಲ‌. ಇದು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಮತ್ತು ಮತದಾನದ ದಿನದಂದು ಇಸಿಗೆ ಲೈವ್ ವೆಬ್ ಕಾಸ್ಟ್ ಪ್ರಕ್ರಿಯೆಗಳಿಗೆ ಮಾತ್ರ ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ಚಿಕ್ಕಮಗಳೂರು: ಹುಲಿ ಕೊಂದ ಆರೋಪಿಯನ್ನು ನ್ಯಾಯಾಲಯದ ಬಳಿ ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ - TIGER KILLING CASE

ABOUT THE AUTHOR

...view details