ಕರ್ನಾಟಕ

karnataka

ತ್ಯಾಜ್ಯ ವಿಲೇವಾರಿ, ಸಂಸ್ಕರಣೆಗೆ ಬೃಹತ್ ಘಟಕ ಪ್ರಾರಂಭ: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

By ETV Bharat Karnataka Team

Published : Mar 19, 2024, 8:32 AM IST

ಬೆಂಗಳೂರಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನಗರದ ನಾಲ್ಕು ದಿಕ್ಕುಗಳಲ್ಲಿ ಬೃಹತ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಹೈಕೋರ್ಟ್​ಗೆ ಬಿಬಿಎಂಪಿ ಮಾಹಿತಿ ನೀಡಿದೆ.

Etv Bharat
Etv Bharat

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ 100 ಎಕರೆ ಪ್ರದೇಶದಲ್ಲಿ ಬೃಹತ್ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕ ಪ್ರಾರಂಭಿಸುತ್ತಿರುವುದಾಗಿ ಹೈಕೋರ್ಟ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ನೀಡಿದೆ. ಬೆಂಗಳೂರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು. ಅಲ್ಲದೆ, ನಗರದ ನಾಲ್ಕು ದಿಕ್ಕುಗಳಲ್ಲಿ ಬೃಹತ್ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲ, ಚೆನ್ನೈನಲ್ಲಿ ಕ್ವಾರಿಯಿಂದಾದ ಹಳ್ಳದಲ್ಲಿ ಕುಡಿಯುವ ನೀರು ಸಂಗ್ರಹಿಸುತ್ತಾರೆ. ಆದರೆ ನಮ್ಮಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಪರಿಸರ ಹಾಳು ಮಾಡಲಾಗುತ್ತಿದೆ ಎಂದು ವಿವರಿಸಿದರು. ಸರ್ಕಾರಿ ಪರ ವಕೀಲರು ವಾದ ಮಂಡಿಸಿ, ತ್ಯಾಜ್ಯ ಹಾಗೂ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸುವಂತೆ ನಗರದ ನಾಲ್ಕು ದಿಕ್ಕಿನಲ್ಲಿ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು. ಘಟಕ ಸ್ಥಾಪನೆಗೆ ನೂರಾರು ಎಕರೆ ಜಮೀನಿನ ಅವಶ್ಯಕತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಈ ವೇಳೆ ಪೀಠ, ಎಷ್ಟು ವರ್ಷಗಳಿಂದ ಈ ಪ್ರಕರಣ ಬಾಕಿ ಉಳಿದಿದೆ? ಬಿಬಿಎಂಪಿ ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಂಡು ಆದಷ್ಟು ಬೇಗ ಇತ್ಯರ್ಥಪಡಿಸಿಕೊಳ್ಳಬೇಕೆಂದು ಹೇಳಿ ವಿಚಾರಣೆ ಮುಂದೂಡಿದೆ.

ಅರ್ಜಿ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿಯು ಘನತ್ಯಾಜ ವಿಲೇವಾರಿ ಮತ್ತು ನಿರ್ವಹಣೆ ಮಾಡುವ ಬಗ್ಗೆ ಬಿಬಿಎಂಪಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವರದಿ ನೀಡಿತ್ತು. ಈ ವಿಚಾರ ದಾಖಲಿಸಿಕೊಂಡ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಸಾಮರ್ಥ್ಯ ವೃದ್ಧಿಸಲು ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವಂತೆ ಸರ್ಕಾರ ಮತ್ತು ಪಾಲಿಕೆಗೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ದೊಡ್ಡ ಮಟ್ಟದ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಸಣ್ಣ ಕೆಡಕುಗಳು ಸಾಮಾನ್ಯ : ಹೈಕೋರ್ಟ್

ದಂಡ ಹೆಚ್ಚಿಸುವಂತೆ ಸೂಚಿಸಿದ್ದ ಪೀಠ: ಘನ ತ್ಯಾಜ್ಯ ವಿಲೇವಾರಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆಯಿದ್ದು, ಇದನ್ನು ಹೆಚ್ಚಳ ಮಾಡುವುದರ ಜೊತೆಗೆ, ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಬೇಕು ಎಂದು ಕಳೆದ ವರ್ಷ ವಿಚಾರಣೆ ವೇಳೆ ಹೈಕೋರ್ಟ್ ಪೀಠ ನಿರ್ದೇಶನ ನೀಡಿತ್ತು. ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕಳೆದ 2012ರಿಂದ ಹಲವು ನಿರ್ದೇಶನಗಳನ್ನು ನೀಡುತ್ತಿದ್ದರೂ, ನಿಯಮಗಳ ಉಲ್ಲಂಘನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದಂಡ ಹೆಚ್ಚಳ ಶಿಕ್ಷೆ ಜಾರಿಯಾಗುವಂತೆ ಮಾಡಬೇಕಾಗಿದೆ ಎಂದು ಪೀಠ ತಿಳಿಸಿತ್ತು.

ಇದನ್ನೂ ಓದಿ: ಶೇ.60ರಷ್ಟು ಕನ್ನಡ ಬಳಕೆ: ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ABOUT THE AUTHOR

...view details