ಧಾರವಾಡ :ನಿನ್ನೆ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ 20 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಲಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅರ್ಥದಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಹತ್ತು ವರ್ಷದಲ್ಲಿ ದೇಶದಲ್ಲಿ ಅಭೂತಪೂರ್ವ ಬದಲಾವಣೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದೇ ವೇಳೆ ಹೇಳಿದರು.
ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಥಿಕ, ಭದ್ರತೆ, ಮೂಲ ಸೌಕರ್ಯ ಸೌಲಭ್ಯ ಸೇರಿ ಎಲ್ಲ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ. ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದರು. ಅದರ ಜೊತೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕೆಲಸದ ಜೊತೆ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಮೂರೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಲ್ಕು ಸಲ ಆಯ್ಕೆ ಮಾಡಿದ ಮತದಾರ ಪ್ರಭುಗಳಿಗೆ ನಾನು ವಂದಿಸುವೆ. ಇನ್ನೊಮ್ಮೆ ಆಶೀರ್ವಾದ ಮಾಡುವಂತೆ ಕೇಳುವೆ ಎಂದರು.
ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಮಾತನಾಡಿದ ಅವರು, ಯಾರೂ ರೆಬೆಲ್ ಆಗುವುದಿಲ್ಲ. ಎಲ್ಲರೊಂದಿಗೆ ಮಾತನಾಡುವೆ. 3 - 4 ಸಲ ಟಿಕೆಟ್ ಪಡೆದವರಿದ್ದಾರೆ. ಅದರಲ್ಲಿ ಕೆಲವರನ್ನು ಮುಂದುವರೆಸಿದ್ದಾರೆ. ಎಲ್ಲರೂ ಪಕ್ಷಕ್ಕೆ ಅನಿವಾರ್ಯ. ಎಲ್ಲರೊಂದಿಗೆ ಮಾತನಾಡಿ ಸರಿಪಡಿಸಲಾಗುವುದು ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಮುನಿಸು ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿ ಲಿಸ್ಟ್ನಲ್ಲಿ ಅವರ ಹೆಸರಿದೆ. ಬೆಳಗಾವಿ ಅಥವಾ ಎಲ್ಲಿಯೇ ಟಿಕೆಟ್ ಸಿಕ್ಕರೂ ಸಂತೋಷ ಪಡುವೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ನರೇಂದ್ರ ಮೋದಿ ನೇತೃತ್ವದಲ್ಲಿ ಯಾರೂ ಬಿಜೆಪಿ ಬಿಡುವುದಿಲ್ಲ ಎಂದರು. ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಗಮನಕ್ಕೆ ಬಂದಿಲ್ಲ. ಅವರೊಂದಿಗೆ ನಾನು ಮಾತನಾಡುವೆ. ನಾಲ್ಕು ಅವಧಿ ಮುಗಿಸಿ ಐದಕ್ಕೆ ಪದಾರ್ಪಣೆ ಮಾಡುತ್ತಿರುವೆ. ವಿಕಸಿತ ಭಾರತದಲ್ಲಿ ಧಾರವಾಡ ವಿಕಸಿತ ಧಾರವಾಡ ಆಗುತ್ತಿದೆ. ಜನ ಮತ್ತೆ ಆಶೀರ್ವಾದ ಮಾಡುತ್ತಾರೆ. ಇದೊಂದು ದಾಖಲೆ ಆಗುತ್ತದೆ ಎಂದರು. ಬಳಿಕ ಮಾಜಿ ಶಾಸಕಿ ಸೀಮಾ ಮಸೂತಿ ಮನೆಗೆ ಭೇಟಿ ನೀಡಿ, ಕೆಲ ವಿಚಾರಗಳನ್ನು ಚರ್ಚಿಸಿ ಹಣ್ಣು ಸವಿದರು.