ಕರ್ನಾಟಕ

karnataka

ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ: 16 ಲಕ್ಷ ಮೌಲ್ಯದ ಸೊತ್ತು ವಶ - MDMA selling

By ETV Bharat Karnataka Team

Published : May 2, 2024, 11:37 AM IST

ಮಂಗಳೂರಿನಲ್ಲಿ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಂಗಳೂರು:ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಎಂಡಿಎಂಎ ಸೇರಿದಂತೆ ಒಟ್ಟು 16,13,800/- ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಉಳ್ಳಾಲದ ಬಸ್ತಿಪಡ್ಪುವಿನ ಮುಹಮ್ಮದ್​ ಇಶಾನ್​ (35), ಉಳ್ಳಾಲದ ಟಿಸಿ ರೋಡ್​ನ ಜಾಫರ್ ಸಾಧಿಕ್ (35) ಬಂಧಿತರು.

ಮೇ 1 ರಂದು ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ 9,00,000/- ರೂ ಮೌಲ್ಯದ 407 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ​ಫೋನ್​​ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 16,13,800/- ಎಂದು ಅಂದಾಜಿಸಲಾಗಿದೆ.

ಆರೋಪಿಗಳಲ್ಲಿ ಜಾಫರ್ ಸಾದಿಕ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ, ಹಲ್ಲೆ ಹಾಗೂ ಕೊಲೆಯತ್ನ ಹಾಗೂ ಕೊಡಗು ಜಿಲ್ಲೆಯ ಕುಶಾಲ ನಗರ ಠಾಣೆಯಲ್ಲಿ ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.

ಮುಹಮ್ಮದ್ ಇಶಾನ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮಾರಾಟ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ಜೀವಂತ ಗುಂಡುಗಳ ಸಹಿತ ಕಂಟ್ರಿ‌ ಪಿಸ್ತೂಲ್​​ ಇಟ್ಟುಕೊಂಡು ಗಾಂಜಾ‌ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ - Smuggling ganza

ABOUT THE AUTHOR

...view details