ಮೈಸೂರಿನಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯೆ ಮೈಸೂರು:ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಒಪ್ಪಿದವರು ಪಕ್ಷದಲ್ಲಿ ಇರುತ್ತಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಕೋಟಿ ಬಡ ಕುಟುಂಬಗಳನ್ನು ಬಡತನದಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯಕ್ರಮಗಳಿಗೆ ಗೌರವ ಹೊಂದಿರುವವರು ನಮ್ಮೊಂದಿಗೆ ಇರುತ್ತಾರೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ಬಗ್ಗೆ ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ವ್ಯಕ್ತಿ ಪಕ್ಷದಲ್ಲಿ ಇರಬೇಕಾದರೆ, ತಾನು ಒಪ್ಪಿತ ಸಿದ್ಧಾಂತ, ತತ್ವ ಹಾಗೂ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಇರುತ್ತಾನೆ. ನಾವು ಕಾಂಗ್ರೆಸ್ನವರು ಪಕ್ಷ ಬಿಟ್ಟು ಹೋಗುತ್ತಾರಾ, ಇರುತ್ತಾರಾ ಎಂಬುವುದನ್ನು ತಿಳಿಯಲು ಸಿಐಡಿ ಬಿಟ್ಟಿರಲಿಲ್ಲ. ನಾವು ಪಕ್ಷದ ನಾಯಕರ ಮೇಲೆ ವಾಚ್ ಅಂಡ್ ವಾರ್ಡ್ ಇಡಲ್ಲ. ತತ್ವ, ಸಿದ್ಧಾಂತ, ಗ್ಯಾರಂಟಿ ಯೋಜನೆಗಳ ಬಗ್ಗೆ ಗೌರವ ಇಲ್ಲದವರು ಹೋದ್ರೇನು, ಇದ್ರೇನು ಎಂದು ಮರು ಪ್ರಶ್ನಿಸಿದರು.
ಶೆಟ್ಟರ್ ಪಕ್ಷ ಬಿಟ್ಟಿರುವುದರಿಂದ ಪಕ್ಷಕ್ಕೆ ನಷ್ಟವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಹೇಗಿತ್ತು ಎಂದು ನೋಡಿದ್ದೀರಿ. ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ಏನಾಗಿದೆ ಎಂದೂ ನೋಡಿದ್ದೀರಿ. 17 ಶಾಸಕರು ಸಾಲಿಡಿದು ಹೋದರು. ಆದರೂ, ಇದರ ಪರಿಣಾಮವೇನು ಆಯ್ತು?. 135 ಸ್ಥಾನಗಳನ್ನು ನಾವು ಪಡೆಯಲಿಲ್ಲವೇ?. ಕಾಂಗ್ರೆಸ್ ತತ್ವ, ಸಿದ್ಧಾಂತ ಹಾಗೂ ಈಗಂತೂ ನಮ್ಮ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಮ್ಮ ಶಕ್ತಿಯನ್ನು ಬಲಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಅಲ್ಲದೇ, ಶಾಸಕ ಲಕ್ಷ್ಮಣ ಸವದಿ ಪಕ್ಷದ ಬಿಡುವ ವಂದತಿ ಬಗ್ಗೆ ಮಾತನಾಡಿದ ಸಚಿವರು, ಲಕ್ಷ್ಮಣ ಸವದಿ ಒಬ್ಬ ಜಂಟಲ್ಮನ್. ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅವರು ಹೇಳಿದ್ದನ್ನು ನಾನು ನಂಬಿದ್ದೇನೆ. ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಬಗ್ಗೆ ಪಕ್ಷದಲ್ಲಿ ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದರು.
ಶಾಮನೂರು ಶಿವಶಂಕರಪ್ಪ ಹೇಳಿಕೆ ಗಮನಿಸಿಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶಾಮನೂರು ಶಿವಶಂಕರಪ್ಪ ನಮ್ಮ ಪಕ್ಷದ ಹಿರಿಯ, ಜವಾಬ್ದಾರಿಯುತ ನಾಯಕರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಇದ್ದವರು. ಅವರು ಈ ರೀತಿ ಹೇಳಿರಲು ಸಾಧ್ಯವಿಲ್ಲ. ಅವರ ಹೇಳಿಕೆ ಬಗ್ಗೆ ಮಾಧ್ಯಮದವರಲ್ಲಿ ತಪ್ಪು ಗ್ರಹಿಕೆ ಆಗಿರಬೇಕು. ಇದರಲ್ಲಿ ಸತ್ಯವನ್ನು ನಾನು ಕಾಣುತ್ತಿಲ್ಲ. ಅವರ ಹೇಳಿಕೆಯನ್ನು ನಾನು ಸರಿಯಾಗಿ ಗಮನಿಸಿಲ್ಲ ಎಂದು ಹೇಳಿದರು.
ರೋಪ್ ವೇ ಪ್ರಸ್ತಾವ ಇದೆ:ಇದೇ ವೇಳೆ, ಚಾಮುಂಡಿ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಇದರ ಬಗ್ಗೆ ವಿವಾದಗಳು ಸಹ ಇವೆ. ಈ ಕುರಿತು ತಜ್ಞರೊಂದಿಗೆ ಚರ್ಚೆ ಮಾಡಬೇಕಿದೆ. ಪಾರಂಪರಿಕ ದೃಷ್ಟಿಯಿಂದ ಮಾಡಬೇಕಾ?, ಮಾಡಬಾರದಾ? ಎಂಬ ಬಗ್ಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೆಚ್.ಕೆ.ಪಾಟೀಲ್ ತಿಳಿಸಿದರು.
ಪ್ರವಾಸೋದ್ಯಮಕ್ಕೆ ಹೆಚ್ಚು ಆಸ್ತಕಿ ವಹಿಸಲಾಗಿದೆ. ದಸರಾದ ನಂತರ ಈ ಭಾಗದಲ್ಲಿ ಏನು ಮಾಡಬೇಕೆಂಬ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನು ಇಟ್ಟಿದ್ದೇವೆ. ಅವುಗಳಿಗೆ ಈಗ ಮೂರ್ತ ಸ್ವರೂಪ ಕೊಡುತ್ತಿದ್ದೇವೆ. ಚಾಮುಂಡೇಶ್ವರಿ ಪ್ರಾಧಿಕಾರ ಸ್ಥಾಪನೆ ಮಾಡಿದ್ದೇವೆ. ಸುಮಾರು 40 ಕೋಟಿ ರೂ. ಅನುದಾನದ ಪ್ರಸಾದ್ ಯೋಜನೆಯಡಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಂಪುಟದ ಮಂಜೂರಾತಿ ಕೊಟ್ಟಿದೆ. ಇಂತಹ ಮಹತ್ವದ ದೊಡ್ಡ ಯೋಜನೆಗಳನ್ನು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸೋಮನಾಥಪುರದಲ್ಲಿ ಮೂಲ ಸೌಲಭ್ಯಗಳ ಕೊರತೆ ಪ್ರತಿಕ್ರಿಯಿಸಿದ ಅವರು, ಮೂಲ ಸೌಕರ್ಯಗಳನ್ನು ತಕ್ಷಣಕ್ಕೆ ಸೃಷ್ಟಿ ಮಾಡಲು ಆಗುತ್ತಿಲ್ಲವೋ ಗೊತ್ತಿಲ್ಲ. ಆದರೆ, ತಾತ್ಕಾಲಿಕವಾಗಿ ಒದಗಿಸುವ ಸೌಲಭ್ಯಗಳ ಕುರಿತು ಕಾರ್ಯದರ್ಶಿಗಳೊಂದಿಗೆ ಚರ್ಚೆ ಮಾಡುತ್ತೇನೆ. ನಿರಂತರವಾಗಿ ಬಸ್ ಸಂಚಾರ ಬಗ್ಗೆ ನಾನೇ ಖುದ್ದಾಗಿ ಕೆಎಸ್ಆರ್ಟಿಸಿ ಡಿಸಿ ಅವರನ್ನು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಜೀವಂತವಾಗಿದ್ದಲ್ಲಿ ಶಾಸಕ ಶಾಮನೂರನ್ನು ಉಚ್ಛಾಟಿಸಲಿ: ಎಂಎಲ್ಸಿ ವಿಶ್ವನಾಥ್