ಕರ್ನಾಟಕ

karnataka

3 ಲಕ್ಷ ಮನೆ ನಿರ್ಮಾಣದ ಗುರಿ: ವಸತಿ ರಹಿತರನ್ನು ಗುರುತಿಸಲು ಸಮೀಕ್ಷೆ

By ETV Bharat Karnataka Team

Published : Feb 16, 2024, 1:05 PM IST

Updated : Feb 16, 2024, 1:56 PM IST

ಪ್ರಸಕ್ತ ಹಣಕಾಸು ವರ್ಷದಲ್ಲಿ 3 ಲಕ್ಷ ಮನೆ ನಿರ್ಮಾಣದ ಗುರಿ ಸೇರಿದಂತೆ ಹಲವಾರು ವಸತಿ ಯೋಜನೆಗಳನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

ವಸತಿ
ವಸತಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ವಸತಿ ವಿಭಾಗಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. 2024-25ನೇ ಸಾಲಿನಲ್ಲಿ 3 ಲಕ್ಷ ಹೊಸ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಒಟ್ಟಾರೆ ವಸತಿ ವಿಭಾಗಕ್ಕೆ ಇಂದಿನ ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳು, ಮೀಸಲಿಟ್ಟ ಅನುದಾನದ ವಿವರ ಇಲ್ಲಿದೆ.

  • ಎಲ್ಲಾ ವಸತಿರಹಿತರಿಗೆ ಸೂರು ಒದಗಿಸುವ ಧ್ಯೇಯ ಸರ್ಕಾರದ್ದಾಗಿದೆ. ನಮ್ಮ ಹಿಂದಿನ ಅವಧಿಯಲ್ಲಿ 14.54 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. 2019 ರಿಂದ 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಸಂಖ್ಯೆ ಕೇವಲ 5.19 ಲಕ್ಷ. ಬಾಕಿ ಉಳಿದಿರುವ 12 ಲಕ್ಷ ಮನೆಗಳ ನಿರ್ಮಾಣದ ಹೊಣೆಗಾರಿಕೆ ನಮ್ಮ ಸರ್ಕಾರದ ಮುಂದಿದ್ದು, 2023-2024ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
  • 2024-25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಇದಲ್ಲದೇ, ರಾಜ್ಯದಲ್ಲಿ ವಸತಿರಹಿತರ ಸಂಖ್ಯೆಯನ್ನು ಗುರುತಿಸಲು ಒಂದು ಸಮೀಕ್ಷೆ ನಡೆಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.
  • ಕೊಳಗೇರಿ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಎ.ಎಚ್.ಪಿ.) ಅಡಿ 1,18,359 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಹುತೇಕ ಫಲಾನುಭವಿಗಳು ಬಡ ಕುಟುಂಬದವರಾಗಿದ್ದು, ತಮ್ಮ ಪಾಲಿನ ವಂತಿಗೆಯಾದ ಐದು ಲಕ್ಷ ರೂ.ಗಳನ್ನು ಪಾವತಿಸಲು ಸಾಧ್ಯವಾಗದೇ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿತ್ತು. ಇದನ್ನು ಮನಗಂಡು ನಮ್ಮ ಸರ್ಕಾರವು ಫಲಾನುಭವಿಗಳು ಪಾವತಿಸಬೇಕಾದ ವಂತಿಗೆಯನ್ನು ಒಂದು ಲಕ್ಷ ರೂ.ಗಳಿಗೆ ಸೀಮಿತಗೊಳಿಸಿ ಹೆಚ್ಚುವರಿ ನಾಲ್ಕು ಲಕ್ಷ ರೂ.ವರೆಗಿನ ಫಲಾನುಭವಿ ವಂತಿಗೆಯನ್ನು ಭರಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಶೀಘ್ರದಲ್ಲಿಯೇ 48,796 ಮನೆಗಳನ್ನು ಪೂರ್ಣಗೊಳಿಸಿ ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್​ನಲ್ಲಿ ಪ್ರಕಟಿಸಿದ್ದಾರೆ.
  • ನಗರ ಪ್ರದೇಶದ ಬಡ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ವಸತಿ ಇಲಾಖೆಯು ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ:
  1. Asset Monetisation, ವಸತಿ ಸೆಸ್‌ ಮತ್ತು ವಿವಿಧ ಶಾಸನ ಬದ್ಧ ಶುಲ್ಕಗಳನ್ನು ವಿಧಿಸುವ ಮೂಲಕ ಸಂಪನ್ಮೂಲ ಕ್ರೊಢೀಕರಿಸಿ Karnataka Affordable Housing Fund ಅನ್ನು (KAHF) ಸ್ಥಾಪಿಸಲಾಗುವುದು.
  2. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಕೊಳೆಗೇರಿ ಸೆಸ್‌ ದರ ಪರಿಷ್ಕರಣೆ ಮಾಡುವುದು.
  3. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸ್ಥಿರ ಆಸ್ತಿಗಳಿಂದ ಸಂಪನ್ಮೂಲ ಸೃಜಿಸಲಾಗುವುದು.
  • ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು ರಿಯಲ್‌ ಎಸ್ಟೇಟ್‌ ವಲಯದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಮನೆ ಖರೀದಿದಾರರ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. 2023-24 ನೇ ಸಾಲಿನಲ್ಲಿ ಡೆವಲಪರ್‌ಗಳಿಗೆ 40 ಕೋಟಿ ರೂ. ದಂಡ ವಿಧಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ದಕ್ಷ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಯ ಮೂಲಕ ಜನರ ಹಿತರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
Last Updated : Feb 16, 2024, 1:56 PM IST

ABOUT THE AUTHOR

...view details