ಕರ್ನಾಟಕ

karnataka

ಕಮಿಷನ್ ವಿಚಾರ: ಯತ್ನಾಳ್ - ಡಿಕೆಶಿ ಮಧ್ಯೆ ಪರಸ್ಪರ ಏಕವಚನದಲ್ಲೇ ವಾಕ್ ಸಮರ

By ETV Bharat Karnataka Team

Published : Feb 19, 2024, 8:01 PM IST

ರಾಜ್ಯಪಾಲರ ಭಾಷಣ ಚರ್ಚೆ ವೇಳೆ ಕಮಿಷನ್ ವಿಚಾರವಾಗಿ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತು ಡಿ.ಕೆ ಶಿವಕುಮಾರ್​ ಮಧ್ಯೆ ಪರಸ್ಪರ ಏಕವಚನದಲ್ಲೇ ಮಾತಿನ ಚಕಮಕಿ ನಡೆಯಿತು.

ವಿಧಾನಸಭೆ
ವಿಧಾನಸಭೆ

ಬೆಂಗಳೂರು :ವಿಧಾನಸಭೆಯಲ್ಲಿ ಸೋಮವಾರ ಕಮಿಷನ್ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ನಡುವೆ ಪರಸ್ಪರ ವಾಕ್ಸಮರ ಉಂಟಾಯಿತು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲಿನ‌ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್​ ಯತ್ನಾಳ್, ರಾಜ್ಯ ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಬಿಲ್ ಪಾವತಿಸುತ್ತಿಲ್ಲ. ಮೊನ್ನೆ ಕೆಂಪಣ್ಣ 40% ಕಮಿಷನ್ ಈ ಸರ್ಕಾರದಲ್ಲಿ ಇದೆ ಎಂದು ಹೇಳಿದ್ದಾರೆ. ಬಳಿಕ ಪಾಪ ಅವರ ಬಾಯಿಯನ್ನು ಬಂದ್ ಮಾಡಿದರು. ಕೆಂಪಣ್ಣ ಬಾಯಿಗೆ ಅದೇನು ಜೇನು ತುಪ್ಪ ಹಾಕಿದರಾ? ಬೆಲ್ಲ ಹಾಕಿದರಾ? ಗೊತ್ತಿಲ್ಲ ಎಂದು ಟೀಕಿಸಿದರು‌.

ಆಗ ಮಧ್ಯ ಪ್ರವೇಶಿಸಿದ ಡಿ.ಕೆ ಶಿವಕುಮಾರ್​ ನಿನ್ನ ನುಡಿಮುತ್ತಿನಲ್ಲೇ ಕೋವಿಡ್ ನಲ್ಲಿ ನಡೆದ ಅಕ್ರಮದ ಬಗ್ಗೆ ಹೇಳಿದ್ದೀಯಲ್ಲಪ್ಪಾ. ಅದನ್ನು ಹೇಳು ಎಂದು ಯತ್ನಾಳ್​ಗೆ ತಿರುಗೇಟು ನೀಡಿದರು. ಈ ವೇಳೆ ಯತ್ನಾಳ್ ಏಕವಚನದಲ್ಲೇ ಡಿಕೆಶಿಗೆ ಕೌಂಟರ್ ನೀಡಿದರು. ನೀನು ಏಕವಚನದಲ್ಲಿ ಮಾತನಾಡಿದರೆ ನಾನು ಏಕ ವಚನದಲ್ಲೇ ಮಾತನಾಡುತ್ತೇನೆ. ನಾನೇನು ನಿನ್ನ ಮುಲಾಜಿನಲ್ಲಿ ಇಲ್ಲ. ನಾನೇನು ನಿನ್ನ ಬಳಿ ಬರುವುದಿಲ್ಲ‌. ನನಗೆ ನಿನ್ನ ಬಳಿ ಬರುವ ಅಗತ್ಯ ಇಲ್ಲ. ಬಿಬಿಎಂಪಿಯಲ್ಲಿ ಎಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಜಗತ್ತಿಗೆ ಗೊತ್ತು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕು:ದೇವಸ್ಥಾನಗಳ ಆದಾಯ ಸರ್ಕಾರ ತೆಗೆದುಕೊಳ್ಳುತ್ತಿದೆ. ದೇಗುಲಗಳ ಆದಾಯ ಗ್ಯಾರಂಟಿಗಳಿಗೆ ಬಳಕೆ ಮಾಡಲಾಗುತ್ತಿದೆ. ದೇವಸ್ಥಾನಗಳ ಆದಾಯ ದೇಗುಲಗಳ ಅಭಿವೃದ್ಧಿಗೆ ಬಳಸಬೇಕು. ನನ್ನ ತೆರಿಗೆ ನಮ್ಮ ಹಕ್ಕು ಅಂತ ಹೇಳಿ ದೆಹಲಿ ಚಲೋ‌ ಮಾಡಿದ್ದೀರಾ?.‌ ಇಲ್ಲಿ ನಮ್ಮ ದೇವರು, ನಮ್ಮ ಹಣ, ನಮ್ಮ ಹಕ್ಕೂ.‌ ದೇವರಿಗೆ, ದೇವಸ್ಥಾನಕ್ಕೆ ಅಂತ ನಾವು ಹಣ ಕೊಡುತ್ತೇವೆ. ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಯಾರ್ಯಾರಿಗೆ ಬೇಕೋ ಕೊಡುತ್ತಿದ್ದೀರಾ. ಇದು ಯಾರಪ್ಪನ ಆಸ್ತಿ? ದೇವಸ್ಥಾನಗಳ ಮೇಲೆ ಮಾತ್ರ ನಿಮ್ಮ ಕಾನೂನೇಕೆ? ಮಸೀದಿ, ಚರ್ಚ್ ಗಳ ಮೇಲೆ ಯಾಕೆ ನಿಮ್ಮ ಕಾನೂನು ಅನ್ವಯ ಆಗಲ್ಲ?. ದೇವಸ್ಥಾನಗಳಲ್ಲಿ ಮುಕ್ತ ಆಡಳಿತ ತನ್ನಿ, ಆಗಲೇ ನಿಜವಾದ ಜಾತ್ಯಾತೀತತೆ ಎಂದು ಸರ್ಕಾರಕ್ಕೆ ಯತ್ನಾಳ್ ಆಗ್ರಹಿಸಿದರು.

ನಡೆಗೂ ನುಡಿಗೂ ಸಂಬಂಧ ಇಲ್ಲ:ರಾಜ್ಯಪಾಲರ ಭಾಷಣ ನೋಡಿದಾಗ ರಾಜ್ಯಪಾಲರ ಮುಖಾಂತರ ಕೇಂದ್ರ ಸರ್ಕಾರವನ್ನು ಟೀಕೆ ಮಾಡಲಾಗಿದೆ. ಸರ್ಕಾರವೇ ಬರೆದು ಕೊಟ್ಟಿದ್ದನ್ನು ಅವರು ಹೇಳಿದ್ದಾರೆ. ಇದರಿಂದ ರಾಜ್ಯಪಾಲರ ಘನತೆ ಕಡಿಮೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇರಬೇಕು. ಜಂತರ್ ಮಂತರ್ ನಲ್ಲಿ ಅಂತರ್ಯಾಮಿಯಾಗಿ ಟೀಕೆ ಮಾಡುತ್ತಾರೆ. ಗ್ಯಾರಂಟಿ ಬೆನ್ನು ಚಪ್ಪರಿಸುವುದು ಬಿಟ್ಟರೆ ಮತ್ತೇನು ಆಗಿಲ್ಲ. ಯಾವ ಗ್ಯಾರಂಟಿಯನ್ನು ನೀವು ಪೂರ್ಣ ಮಾಡಿಲ್ಲ. ನಡೆಗೂ ನುಡಿಗೂ ಸಂಬಂಧ ಇಲ್ಲ ಎಂದು ಯತ್ನಾಳ್​ ಆರೋಪಿಸಿದರು.

10 ಕೆಜಿ ಅಕ್ಕಿ ಕೊಟ್ಟಿಲ್ಲ. ಮಾತು ಸ್ಪಟಿಕದ ಸಲಾಕೆಯಂತೆ ಇರಬೇಕು. ಆದರೆ ಇವರದ್ದು ಬರೇ ಮಾತಾಗಿದೆ. ನೀರಾವರಿ ಯೋಜನೆ ಬಗ್ಗೆ ಏನಾದರೂ ರಾಜ್ಯಪಾಲರ ಭಾಷಣದಲ್ಲಿ ಚರ್ಚೆ ಆಗಿದೆಯಾ?. ಎಸ್​ಸಿಪಿ ಟಿಎಸ್​ಪಿ ಹಣವನ್ನು ಗ್ಯಾರಂಟಿಗೆ ಕೊಡುವ ಮೂಲಕ ಇದು ಎಸ್​ ಸಿ ಎಸ್ ಟಿ ವಿರೋಧಿ ಸರ್ಕಾರ ಆಗಿದೆ. ಶಕ್ತಿ ಯೋಜನೆಯಿಂದ ಆಟೋ, ಕ್ಯಾಬ್ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಧನಸಹಾಯ ಕೊಡಿ. ಹೊಸ ಬಸ್ ಖರೀದಿ ಎಲ್ಲಿ ಮಾಡಿದ್ದೀರಿ?. ಹಳೆ ಬಸ್ ಗಳನ್ನು ಉತ್ತರ ಕರ್ನಾಟಕಕ್ಕೆ ಭಾಗಕ್ಕೆ ಕೊಟ್ಟಿದ್ದೀರಿ. ಕೃಷ್ಣನ ಮೇಲೆ ಆಣೆ ಎಂದು ವಾರ್ಷಿಕ 10,000 ಕೋಟಿ ರೂ. ಕೊಡುತ್ತೇನೆ ಎಂದರು. ಆದರೆ 10 ರೂ. ಕೊಟ್ಟಿಲ್ಲ ಎಂದು ಯತ್ನಾಳ್​ ಆರೋಪಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಇತಿಹಾಸವನ್ನು ಮೊಗಲರ ಬಗ್ಗೆನೇ ಬರೆಯಲಾಗಿದೆ. ಟಿಪ್ಪು ಸುಲ್ತಾನ್, ಮೊಗಲರನ್ನು ಅಕ್ಬರ್, ಔರಾಂಗಜೇಬನನ್ನು ಹೊಗಳಿದ್ದೇ ಬಂತು. ಆದರೆ ಅದನ್ನು ಬದಲಾಯಿಸಲು ಎನ್​ಇಪಿ ಜಾರಿಗೆ ತರಲಾಯಿತು. ತಾಜ್ ಮಹಲ್, ಕೆಂಪು ಕೋಟೆ ಕಟ್ಟಿದವರ ಬಗ್ಗೆ ಹೇಳುತ್ತಾರೆ. ಆದರೆ ರಾಮ ಮಂದಿರ, ಮಥುರಾ, ಕಾಶಿ ದೇವಸ್ಥಾನವನ್ನು ಕೆಡವಿದರ ಬಗ್ಗೆ ಏಕೆ ಚರ್ಚೆ ಆಗಲ್ಲಾ? ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಯತ್ನಾಳ್ ಪ್ರಶ್ನಿಸಿದರು.

ಇದನ್ನೂ ಓದಿ :ಹೊಸ ಬಸ್​ ಖರೀದಿಗೆ 100 ಕೋಟಿ ರೂ. ವಿಶೇಷ ಅನುದಾನ: ಸಚಿವ ರಾಮಲಿಂಗಾರೆಡ್ಡಿ

ABOUT THE AUTHOR

...view details